Saturday, May 18, 2024

ಪ್ರಾಯೋಗಿಕ ಆವೃತ್ತಿ

ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ಸಬಲೀಕರಣ: ಚಲುವರಾಯಸ್ವಾಮಿ

ಯಾವುದೇ ಜಾತಿ, ಧರ್ಮ, ಮೇಲು, ಕೀಳು ಎಂಬ ತಾರತಮ್ಯವಿಲ್ಲದೆ ಜನಸಮಾನ್ಯರಿಗೆ ಸಮಾನವಾಗಿ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರನ್ನು ಸಬಲೀಕರಣಗೊಳಿಸುವ ಸರ್ಕಾರ ಸಿದ್ದರಾಮಯ್ಯನವರ ಸರ್ಕಾರವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.

ಇಂದು ನಾಗಮಂಗಲ ತಾಲೂಕಿನ ಸವಲತ್ತು ವಿತರಣಾ ಸಮಾವೇಶ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 35,000 ಕೋಟಿ 5 ಗ್ಯಾರಂಟಿ ಯೋಜನೆಗಳ ಮೂಲಕ ಒಂದಲ್ಲ ಒಂದು ರೀತಿ ಎಲ್ಲರಿಗೂ ತಲುಪಿಸಲಾಗಿದೆ. ಪ್ರತಿ ಕುಟುಂಬಕ್ಕೆ ಪ್ರತಿ ಮಾಹೆ ಅಂದಾಜು 5000 ರೂ ಸೌಲಭ್ಯ ದೊರಕಿಸಲಾಗುತ್ತದೆ. ಮುಂದಿನ ಆರ್ಥಿಕ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ 56000 ಕೋಟಿ ರೂ ಹಣವನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ‌ ಎಂದರು‌.

nudikarnataka.com

ಹಕ್ಕುಪತ್ರ ವಿತರಣೆ

ನಾಗಮಂಗಲ ತಾಲೂಕಿನಲ್ಲಿ 35 ವರ್ಷಗಳಿಂದಲೂ ಇದ್ದ ಸಮಸ್ಯೆಯನ್ನು ಪರಿಹರಿಸಿ ಹಕ್ಕಿಪಿಕ್ಕಿ ಜನಾಂಗದವರಿಗೆ ಇಂದು ಹಕ್ಕುಪತ್ರವನ್ನು ನೀಡಿಲಾಯಿತು. ಕೃಷಿ ಇಲಾಖೆಯಿಂದ ರಾಜ್ಯದಲ್ಲಿ ಸುಮಾರು 15 ರಿಂದ 20 ಲಕ್ಷ ರೈತರಿಗೆ ಬೆಳೆ ವಿಮೆ ಸೇರಿದಂತೆ ವಿವಿಧ ಯೋಜನೆಯಡಿ 2500 ಕೋಟಿ ರೂ ಹಣವನ್ನು ನೀಡಲಾಗಿದೆ ಎಂದರು.

ಕೃಷಿ ಇಲಾಖೆಯಲ್ಲಿ ಈ ಮೊದಲು ಕಳಪೆ ಬೀಜ, ಗೊಬ್ಬರ ಸರಿಯಾದ ರೀತಿ ಸೌಲಭ್ಯಗಳು ದೊರಕುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿತ್ತು. ಕೃಷಿ ಸಚಿವನಾಗಿ ಇವುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಯಾವುದೇ ದೂರುಗಳು ಬಾರದಂತೆ ರೈತರಿಗೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಅಪಾರವಾದ ಕೊಡುಗೆಯನ್ನು ಜಯಚಾಮರಾಜೇಂದ್ರ ಒಡೆಯರ್ ರವರು ನೀಡಿದ್ದು, ಅವರನ್ನು ಬಿಟ್ಟರೆ 70 ವರ್ಷಗಳ ನಂತರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜಿಲ್ಲೆಯ ಪ್ರಗತಿಗೆ ಶ್ರಮಿಸಿದ್ದಾರೆ ಎಂದರು.

ಅಧಿಕಾರಕ್ಕೆ ಬಂದ ಹತ್ತು ತಿಂಗಳಲ್ಲಿಯೇ ಮೆಡಿಕಲ್ ಕಾಲೇಜು, ಕೆ ಎಸ್ ಆರ್ ಟಿ ಸಿ ಡಿವಿಸನ್, ಆರ್ ಟಿ ಓ ಆಫೀಸ್, ಪೊಲೀಸ್ ಸ್ಟೇಷನ್, ಮಿನಿ ವಿಧಾನಸೌಧವನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಜಿಲ್ಲೆಯಲ್ಲಿ ಹೊಸ ಸಕ್ಕರೆ ಫ್ಯಾಕ್ಟರಿಯನ್ನು ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ. ಜಿಲ್ಲೆಯ ಮುಖಂಡರು, ಶಾಸಕರು, ಅಭಿವೃದ್ಧಿಯ ಕಾರ್ಯಗಳು ಶೀಘ್ರವಾಗಿ ಪೂರ್ಣಗೊಳಿಸಲು ಕೈಜೋಡಿಸಬೇಕು. ಜಿಲ್ಲಾ ಸಚಿವನಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕುಂದು ಕೊರತೆಗಳಿಗೆ ಸ್ಪಂದಿಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಬೆಳೆ ವಿಮೆಗೆ 25 ಲಕ್ಷ ರೈತರ ನೋಂದಣಿ

ಬೆಳೆ ವಿಮೆ ಈ ವರ್ಷ 25 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದು ಮಾರ್ಚಿ ಅಂತ್ಯದೊಳಗೆ ಒಟ್ಟಾರೆ 13 ಲಕ್ಷ ರೈತರಿಗೆ ರೂ.1400ಕೋಟಿಗಳ ವಿಮೆ ಹಣ ಪಾವತಿಯಾಗಲಿದೆ ಈಗಾಗಲೇ 8 ಲಕ್ಷ ರೈತರಿಗೆ ರೂ.600 ಕೋಟಿಗಳ ವಿಮೆ ಹಣ ಪಾವತಿಯಾಗಿದೆ. ಉಳಿದ 800 ಕೋಟಿ ರೂ ಅನುದಾನವು ಮಾರ್ಚ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಏಳುವರೆ ಸಾವಿರ ಕೃಷಿ ಹೋಂಡಾ ಗಳನ್ನು ನಿರ್ಮಾಣ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು ಎಂದರು.

ಸಾವಿತ್ರಿ ಬಾಪುಲೆ ಅವರ ಸಾಮಾಜಿಕ ಕಳಕಳಿ ಅರಿಯಬೇಕು: ಮರಿತಿಬ್ಬೇಗೌಡ

ದೇಶದ ಹೆಣ್ಣು ಮಕ್ಕಳ ಸಮಗ್ರತೆ, ಸಮಾನತೆ ಹಾಗೂ ಐಕ್ಯತೆಗಾಗಿ ಸಾವಿತ್ರಿ ಬಾ ಪುಲೆ ಅವರು ಮಾಡಿದಂತಹ ಸಾಮಾಜಿಕ ಕಳಕಳಿ, ಚಿಂತನೆಗಳನ್ನು ಶಿಕ್ಷಕರು ಅಧ್ಯಯನ ಮಾಡಬೇಕು ಈ ಮೂಲಕ ಮಹಿಳೆಯರು ಹೊಸ ಚಿಂತನೆಗಳನ್ನು ಮೂಡಿಸಿಕೊಳ್ಳಬೇಕು ವಿಧಾನ ಪರಿಷತ್ ಶಾಸಕ ಮರಿತಿಬ್ಬೇಗೌಡ ಅವರು ತಿಳಿದರು.

ಭಾರತ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾ ಪುಲೆ ಅಂದಿನ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎಂಬ ದೃಷ್ಟಿಯಿಂದ ಶ್ರಮಿಸಿದ್ದಾರೆ ಎಂದರು.

ಮಹಿಳೆಯರ ಸಬಲೀಕರಣಕ್ಕಾಗಿ ಇಂದಿನ ಸರ್ಕಾರ ಜಾರಿಗೆ ತಂದಂತಹ ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲು ಎಂದರು.

ಮಂಡ್ಯ ಜಿಲ್ಲೆಗೆ ನೀರಾವರಿ ಅಭಿವೃದ್ಧಿಗೆ ಎರಡು ಕೋಟಿ ರೂ ಅನುದಾನವನ್ನು ಕೃಷಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ ಜೊತೆಗೆ ಮಹಿಳೆಯರ ಸಮಗ್ರ ಸಬಲೀಕರಣಕ್ಕೆ ಬಹಳಷ್ಟು ಶ್ರಮಿಸಿದ್ದಾರೆ ಎಂದು ಅವರಿಗೆ ಅಭಿನಂದನೆಯನ್ನು ತಿಳಿಸಿದರು.

ಮಹಿಳೆಯರು ಸ್ವಾವಲಂಬಿಗಳಾಗಿ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ದೇಶವನ್ನು ಕಟ್ಟುವಲ್ಲಿ ಮಹಿಳೆಯ ಪಾತ್ರ ಅಪಾರವಾಗಿದೆ. ಮಹಿಳೆಯರು ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅರಿವು ಮೂಡಿಸಿ ಅವುಗಳನ್ನು ಅನುಕರಣೆ ಮಾಡಿಕೊಂಡರೆ ಈ ದೇಶದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲು ಸಾಧ್ಯ ಎಂದು ತಿಳಿಸಿದರು.

ಮಹಿಳಾ ಸಬಲೀಕರಣ, ಮಹಿಳೆಯರ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ವಿಷಯ ಕುರಿತು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಅನುಪಮಾ ಸೇವಾ ಪ್ರಶಸ್ತಿ ಪುರಸ್ಕೃತ ಮಹಿಳೆಯರನ್ನು ಸನ್ಮಾನಿಸಲಾಯಿತು.

ತದನಂತರ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ನಾಗಮಂಗಲ ತಾಲೂಕಿನ ಹಕ್ಕಿಪಿಕ್ಕಿ ಜನಾಂಗದ ನಿವಾಸರಹಿತರಿಗೆ ಹಕ್ಕು ಪತ್ರ ವಿತರಣೆ, ದೃಷ್ಟಿ ದೋಷವುಳ್ಳ 60 ವರ್ಷ ಮೇಲ್ಪಟ್ಟವರಿಗೆ ಕನ್ನಡಕ ವಿತರಣೆ, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ಅನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಮಾಜ ಸೇವಕ ವೆಂಕಟರಮಣಗೌಡ( ಸ್ಟಾರ್ ಚಂದ್ರು), ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಧ್ಯಕ್ಷ ಕೆ. ನಾಗೇಶ್, ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ್, ಪಾಂಡವಪುರ ಉಪ ವಿಭಾಗಾಧಿಕಾರಿ ಜೆ.ವಿ.ಮಾರುತಿ, ತಹಶೀಲ್ದಾರ್ ನಯೀಂಉನ್ನೀಸಾ, ತಾ.ಪಂ. ಇಓ ಚಂದ್ರಮೌಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್, ಬಿ.ಆರ್.ಸಿ. ಸಮನ್ವಯಾಧಿಕಾರಿ ಕೆ.ರವೀಶ್, ಶಿಕ್ಷಕರ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!