Wednesday, September 18, 2024

ಪ್ರಾಯೋಗಿಕ ಆವೃತ್ತಿ

ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಎಲ್ಲರಿಗೂ ಸಿಗಬೇಕು: ಸಿಎಂ ಸಿದ್ದರಾಮಯ್ಯ

ಬೀದರ್‌ನಿಂದ ಚಾಮರಾಜನಗರದವರೆಗೆ ರಾಜ್ಯಾದ್ಯಂತ 2,500 ಕಿ.ಮೀ ಮಾನವ ಸರಪಳಿ ರಚಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ರಾಜ್ಯ ಸರ್ಕಾರ ಕರೆಕೊಟ್ಟಿದೆ. ಭಾನುವಾರ ಮಾನವ ಸರಪಳಿ ರಚಿಸಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಪ್ರಜಾಪ್ರಭುತ್ವ ದಿನಾಚರಣೆ’ಗೆ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ‘ಸಮಸಮಾಜದ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವದ ಉಳಿವು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಡೊಳ್ಳು ಬಾರಿಸುವ ಮೂಲಕ ಮಾನವ ಸರಪಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

“ಆರ್ಥಿಕ, ಸಾಮಾಜಿಕ‌ ಪ್ರಜಾಪ್ರಭುತ್ವ ಎಲ್ಲರಿಗೆ ಸಿಕ್ಕಾಗ ಮಾತ್ರ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಏಕತೆಯ ಹೆಸರಿನಲ್ಲಿ ಸಮಾಜವನ್ನ ಒಡೆಯಲಾಗುತ್ತಿದೆ. ಸಮಾಜ ಒಡೆಯುತ್ತಿರುವವರ ಬಗ್ಗೆ ಎಚ್ಚರಿಕೆ ವಹಿಸಿ, ಆ ಶಕ್ತಿಗಳನ್ನು ತೊಡೆದುಹಾಕಬೇಕು. ವಿಚಿತ್ರಕಾರಿಗಳು ಬಹುತ್ವ ಮತ್ತು ಪ್ರಜಾಪ್ರಭುತ್ವದ ಏಕತೆಯ ವಿರೋಧಿಗಳು” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

“ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮ‌ ಸಂಸ್ಕೃತಿಗಳಿವೆ. ಹಾಗಾಗಿಯೇ, ಭಾರತವು ಬಹುತ್ವದೊಂದಿಗೆ ಏಕತೆಯನ್ನು ಕಾಣುತ್ತಿದೆ. ಸಂವಿಧಾನದಲ್ಲಿ ಯಾವ ಜಾತಿ, ಭಾಷೆಯನ್ನೂ ಮೇಲು-ಕೀಳೆಂದು ಹೇಳಿಲ್ಲ. ಸ್ವಾತಂತ್ರ್ಯದ ಬಳಿಕ ಬಹುತ್ವವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬಂದಿದ್ದೇವೆ. ಬುದ್ದ, ಬಸವ, ಅಂಬೇಡ್ಕರ್ ‌ಅವರ ಅವಧಿಯಲ್ಲಿ ಸಂಸದೀಯ ವ್ಯವಸ್ಥೆ ಇತ್ತು. ಅನುಭವ ಮಂಟಪ‌ದ ಮೂಲಕ ಬಸವಣ್ಣ ಸಂಸದೀಯ ವ್ಯವಸ್ಥೆ ತಂದಿದ್ದರು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

“ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಎಲ್ಲರಿಗೂ ಸಿಗಬೇಕು. ತಾರತಮ್ಯ ಎಲ್ಲಿಯವರೆಗೆ ಇರುತ್ತದೋ, ಅಲ್ಲಿಯವರೆಗೂ ರಾಜಕೀಯ ಸಮಾನತೆ ತರಲು ಆಗುವುದಿಲ್ಲ. ರಾಜಕೀಯ, ಆರ್ಥಿಕ, ಸಾಮಾಜಿಕ ತಾರತಮ್ಯ ಇರಬಾರದೆಂದು ಅಂಬೇಡ್ಕರ್ ಒತ್ತಿ ಹೇಳಿದ್ದರು. ಯಾರಿಗೆ ಸಂವಿಧಾನದ ಉದ್ದೇಶ ಗೊತ್ತಿದೆಯೋ, ಅವರಿಂದ ಸಮಸಮಾಜದ ನಿರ್ಮಾಣ ಸಾಧ್ಯ. ಭಾರತದಲ್ಲಿ ಸಮಸಮಾಜ ನಿರ್ಮಾಣ ಆಗಬೇಕು. ದೇಶವು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು” ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ರಿಜ್ವಾನ್ ಹರ್ಷದ್ ಸೇರಿದಂತೆ ಹಲವರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!