Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಡೀ ಎಕಾನಮಿಯನ್ನು ಹಾಳುಗೆಡವಿದ ಎಡಬಿಡಂಗಿ ಹುಡುಗಿ!

✍️ಗಿರೀಶ್ ತಾಳಿಕಟ್ಟೆ


(ಸೂಚನೆ: ನಿರ್ಮಲ ಸೀತಾರಾಂ ರ ಬಜೆಟ್‌ಗೂ, ಈ ಬರಹಕ್ಕೂ ಯಾವ ಸಂಬಂಧವೂ ಇಲ್ಲ)


ರಾಜ್ಯವೊಂದರ ಸಮಸ್ತ ಎಕಾನಮಿಯನ್ನು ಹದಿನಾಲ್ಕು ವರ್ಷದ ಒಬ್ಬ ಎಡವಟ್ಟು ಹುಡುಗಿ

ನೋಡನೋಡುತ್ತಿದ್ದಂತೆಯೆ ನಂಗ್ಕುವೂಸೆ ಪವಾಡದ ಹುಡುಗಿಯಾದಳು.

ಕ್ಸೋಸಾ ಎಂಬ ಬುಡಕಟ್ಟು ಸಮುದಾಯ ಹೆಚ್ಚೂಕಮ್ಮಿ ಸರ್ವನಾಶದ ಅಂಚಿಗೆ ಬಂದು ತಲುಪಿದ್ದ ಕಥೆ.

ಅಂದಾಜಿನ ಲೆಕ್ಕದ ಪ್ರಕಾರ ಮೂರು ಲಕ್ಷದಿಂದ ನಾಲ್ಕು ಲಕ್ಷ ಜಾನುವಾರಗಳನ್ನು ಸಾಯಿಸಿ ಸುಟ್ಟುಹಾಕಿದರು.

ಕ್ಸೋಸಾ ಸಮುದಾಯದ ಈ ದುರಂತ.


ನಾವೆಲ್ಲ ನಮ್ಮ ದೇಶದ ಎಕಾನಮಿಯ ಬಗ್ಗೆ ವಿಪರೀತ ಆತಂಕಕ್ಕೀಡಾಗಿದ್ದೇವೆ. ಜಿಡಿಪಿ ನಿಯಂತ್ರಣಕ್ಕೆ ನಿಲುಕುತ್ತಿಲ್ಲ; ನಿರುದ್ಯೋಗ ಚಾರಿತ್ರಿಕ ಹದ್ದುಮೀರಿದೆ; ಬೆಲೆಯೇರಿಕೆ ಕೈಸುಡುತ್ತಿದ್ದು, ಹಸಿವಿನ ಸೂಚ್ಯಂಕದಲ್ಲೂ ಪಾತಾಳಕ್ಕೆ ಕುಸಿದಿದ್ದೇವೆ. ಇದಕ್ಕೆಲ್ಲ ಆಳುವವರ ದುರ್ಬಲ ಮತ್ತು ದೂರದೃಷ್ಟಿಯಿಲ್ಲದ ಹಣಕಾಸು ನೀತಿಗಳು ಕಾರಣ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲಿಗೆ ಸುಮಾರು ನೂರಾ ಅರವತ್ತೈದು ವರ್ಷಗಳ ಹಿಂದೆ, ದಕ್ಷಿಣ ಆಫ್ರಿಕಾದ ಇವತ್ತಿನ ಪೂರ್ವ ಕೇಪ್ ಪ್ರಾಂತ್ಯದಲ್ಲಿ ಅಸ್ತಿತ್ವದಲ್ಲಿದ್ದ ರಾಜ್ಯವೊಂದರ ಸಮಸ್ತ ಎಕಾನಮಿಯನ್ನು ಹದಿನಾಲ್ಕು ವರ್ಷದ ಒಬ್ಬ ಎಡವಟ್ಟು ಹುಡುಗಿ ಹಾಳುಗೆಡವಿದ್ದಳೆಂದರೆ ನಿಮಗೆ ಅಚ್ಚರಿಯಾಗಬಹುದು. ಆಕೆ ರಾಜಮನೆತನದವಳೂ ಅಲ್ಲ, ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬ್ರಿಟಿಷ್ ಪಾಳೆಗಾರರ ಹುಡುಗಿಯೂ ಅಲ್ಲ. ಒಂದು ಬುಡಕಟ್ಟು ಸಮುದಾಯದ ಒಬ್ಬ ಸರ್ವೇಸಾಧಾರಣ ಅನಾಥ ಹುಡುಗಿ. ಅಂತವಳ ಮಾತು ಕಟ್ಟಿಕೊಂಡು ಕ್ಸೋಸಾ ಎಂಬ ಬುಡಕಟ್ಟು ಸಮುದಾಯ ಹೆಚ್ಚೂಕಮ್ಮಿ ಸರ್ವನಾಶದ ಅಂಚಿಗೆ ಬಂದು ತಲುಪಿದ್ದ ಕಥೆ ಇದು.

nudikarnataka.com
ನಂಗ್ಕುವೂಸೆ

 

ಅದು 1856-57ನೇ ಇಸವಿ. ಅಂದರೆ, ನಮ್ಮ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸಿಪಾಯಿ ದಂಗೆ ಶುರುವಾಗುತ್ತಿದ್ದ ಸಮಯ. ಅತ್ತ ದಕ್ಷಿಣ ಆಫ್ರಿಕಾದ ದೇಶೀ ಬುಡಕಟ್ಟುಗಳ ಮೇಲೂ ಬ್ರಿಟಿಷರ ದಬ್ಬಾಳಿಕೆ ಎಲ್ಲೆಮೀರಿತ್ತು. ಅವರ ಉಪಟಳದಿಂದ ಕ್ಸೋಸಾ ಮತ್ತು ಗ್ಕಲೇಕಾ ಬುಡಕಟ್ಟು ಸಮುದಾಯಗಳು ರೋಸಿ ಹೋಗಿದ್ದವು. ಅವರ ಮೂಲ ಕಸುಬು ಕೃಷಿ ಮತ್ತು ಹೈನುಗಾರಿಕೆ. ದುರಾದೃಷ್ಟವಶಾತ್ ಸತತ ಬರದಿಂದ ಕಂಗೆಟ್ಟಿದ್ದ ಅಲ್ಲಿನ ದನಕರುಗಳಿಗೆ ಅದೇ ವೇಳೆಗೆ ಶ್ವಾಸಕೋಶ ಸಂಬಂಧಿ ಸಾಂಕ್ರಾಮಿಕ ಕಾಯಿಲೆ ತಗುಲಿ, ಸಾಲುಸಾಲಾಗಿ ಸಾಯುತ್ತಲಿದ್ದವು. ಬ್ರಿಟಿಷರನ್ನು ಸೈನಿಕ ಶಕ್ತಿಯ ಮೂಲಕವಾಗಲಿ ಅಥವಾ ಸಂಘಟಿತ ಹೋರಾಟದ ಮೂಲಕವಾಗಲಿ ಎದುರಿಸುವ ಮಾರ್ಗವಿಲ್ಲದ ಆ ಜನ ತಮ್ಮ ಜಾನುವಾರುಗಳಿಗೆ ಒದಗಿದ ಈ ದುಸ್ಥಿತಿಗೆ ಬ್ರಿಟಿಷರು ತಂದಿರುವ ಯುರೋಪ್ ವಿದೇಶಿ ರಾಸುಗಳೇ ಕಾರಣ ಎಂದು ನಂಬಿದರು. ನಮ್ಮ ನೆಲದ ಮೇಲೆ ವಿದೇಶಿ ರಾಸುಗಳು ಕಾಲಿರಿಸಿರುವುದರಿಂದ ನಮ್ಮ ದೈವಗಳು ಸಿಟ್ಟಾಗಿ, ದೇಶಿ ದನಕರುಗಳಿಗೆ ಈ ಶಿಕ್ಷೆ ಕೊಡುತ್ತಿವೆ ಎಂಬುದು ಅವರ ಮೂಢನಂಬಿಕೆಯಾಗಿತ್ತು.

ಸಾಮಾನ್ಯವಾಗಿ ಜನ ಈ ರೀತಿ ಹತಾಶೆ ಮತ್ತು ಅಸಹಾಯಕತೆಗೆ ಸಿಲುಕಿದ ಸಂದರ್ಭಗಳಲ್ಲೆ ಅವರನ್ನು ದಿಕ್ಕುತಪ್ಪಿಸುವ ‘ಅವತಾರ’ (!?) ವ್ಯಕ್ತಿಗಳು ಸೃಷ್ಟಿಯಾಗೋದು. ನಂಗ್ಕುವೂಸೆ ಹೆಸರಿನ ಹದಿನಾಲ್ಕು ವರ್ಷದ ಪೋರಿ ಕೂಡಾ ಅಂತವರಲ್ಲಿ ಒಬ್ಬಳು. ಚಿಕ್ಕ ವಯಸ್ಸಿಗೇ ತಂದೆತಾಯಿಯನ್ನು ಕಳೆದುಕೊಂಡಿದ್ದ ಆಕೆಯನ್ನು ಅವರ ಸೋದರ ಸಂಬಂಧಿ ಮ್ಹಲಕಾಝಾ ಎಂಬಾತ ಸಾಕುತ್ತಿದ್ದ. ಆತನೋ ಅಪ್ಪಟ ವಾಮಾಚಾರಿ, ಅರ್ಥಾತ್ ಮಂತ್ರವಾದಿ. ಜನ ಅವನ ಮಾತಿಗೆ ವಿಪರೀತ ಹೆದರುತ್ತಿದ್ದರು. ಅವನ ಮಾಟ ಮಂತ್ರ, ಪೂಜೆ, ಪ್ರತಿಪೂಜೆಗಳು ಕೂಡಾ ದೇಶಿ ರಾಸುಗಳಿಗೆ ಬಂದೊದಗಿದ್ದ ಕಾಯಿಲೆಯಿಂದ ಮುಕ್ತಿ ಕೊಡಿಸುವಲ್ಲಿ ಸೋತುಹೋಗಿ, ಜನರ ವಿಶ್ವಾಸವನ್ನು ಕಳೆದುಕೊಳ್ಳುವ ಹಾದಿಯಲ್ಲಿದ್ದ.

ಅಂಥಾ ಒಂದು ಸಂದರ್ಭದಲ್ಲಿ, ದನ ಕಾಯುವುದಕ್ಕೆಂದು ತನ್ನ ಗೆಳತಿಯ ಜೊತೆಗೆ ಹೋಗಿದ್ದ ನಂಗ್ಕುವೂಸೆ ಸಂಜೆ ಗಾಬರಿಯಿಂದ, ಬಿರುನಡಿಗೆಯಿಡುತ್ತಾ ಚಿಕ್ಕಪ್ಪ ಮ್ಹಲಕಾಝಾನ ಬಳಿ ಬಂದು ತಾನು ಕಂಡ, ಕೇಳಿದ ಸುದ್ದಿಯೊಂದನ್ನು ಹೇಳಿದಳು. ಸುದ್ದಿಯ ಸಾರಾಂಶ ಹೀಗಿತ್ತು. ಆಕೆ ಸಂಜೆ ದನಗಳಿಗೆ ನೀರು ಕುಡಿಸುವುದಕ್ಕೆಂದು ಕೆರೆಯ ಬಳಿ ಕರೆದೊಯ್ದು, ಬಂಡೆಯ ಮೇಲೆ ಕೂತಿದ್ದಾಗ ನೀರಿನ ಅಲೆಯಲ್ಲಿ ಇದ್ದಕ್ಕಿದ್ದಂತೆ ಎರಡು ಮುಖಗಳ ಮೂಡಿದವು. ಕೆಲ ಕ್ಷಣದಲ್ಲೆ ಅವು ಮಾತನಾಡಲಾರಂಭಿಸಿ, ನಾವು, ಸತ್ತುಹೋದ ನಿಮ್ಮ ಪೂರ್ವಜರು. ನಿಮಗೆ ಒದಗಿರುವ ಈ ದುರವಸ್ಥೆಗೆ ಆ ಬಿಳಿತೊಗಲಿನ ಪರಕೀಯರೇ ಕಾರಣ. ಅವರ ಧರ್ಮದಿಂದಾಗಿ ನಮ್ಮ ಪೂರ್ವಜರ ಆತ್ಮಗಳು ಸಿಟ್ಟು ಮಾಡಿಕೊಂಡಿವೆ. ನಾವೆಲ್ಲ ಒಟ್ಟಾಗಿ ಅವರನ್ನು ನಮ್ಮ ನೆಲದಿಂದ ಗುಡಿಸಿ, ಸಮುದ್ರಕ್ಕೆ ಎಸೆಯಲು ಸಿದ್ದರಾಗಿದ್ದೇವೆ. ಆಗ ನಿಮಗೂ ಆ ಬಿಳಿಯರ ಉಪಟಳದಿಂದ ಮುಕ್ತಿ ಸಿಗುತ್ತೆ. ಆದರೆ ಅದಕ್ಕೂ ಮೊದಲು, ನಾವು ನಿಮ್ಮ ನಿಷ್ಠೆಯನ್ನು ಪರೀಕ್ಷೆ ಮಾಡಲು ನಿರ್ಧರಿಸಿದ್ದೇವೆ. ಅದಕ್ಕಾಗಿ ನೀವೆಲ್ಲ ಈ ಕೂಡಲೇ ನಿಮ್ಮ ಬಳಿಯಿರುವ ಎಲ್ಲಾ ದನಕರುಗಳನ್ನು ಹಾಗೂ ಬೆಳೆದು ನಿಂತಿರುವ ಬೆಳೆ, ದವಸ ಧಾನ್ಯಗಳನ್ನು ನಾಶ ಮಾಡಿ ಸುಟ್ಟುಹಾಕಬೇಕು. ಹಾಗೆ ಮಾಡಿದ ಹದಿನೈದು ದಿನಕ್ಕೆ, ಒಂದು ಬೆಳಗಿನ ಜಾವ ಸೂರ್ಯ ಕೆಂಪಗೆ ಉದಯಿಸುತ್ತಾನೆ. ಅವತ್ತು, ಸತ್ತಿರುವ ನಾವೆಲ್ಲ ಮರುಜನ್ಮ ಪಡೆದು, ಆ ಬಿಳಿಯರನ್ನು ಒದ್ದು ಸಮುದ್ರಕ್ಕೆ ಎಸೆಯುತ್ತೇವೆ. ಅಲ್ಲದೇ ನಿಮಗೆ ಹೊಸ ಸುಂದರ ರಾಸುಗಳನ್ನು ನೀಡುತ್ತೇವೆ. ಸಮೃದ್ಧ ಬೆಳೆ ದಯಪಾಲಿಸುತ್ತೇವೆ ಎಂದವಂತೆ.

nudikarnataka.com

ಮೊದಮೊದಲು ಮ್ಹಲಕಾಝಾ ಆಕೆಯ ಮಾತನ್ನು ಅನುಮಾನಿಸಿದ. ಆದರೆ ನಂಗ್ಕುವೂಸೆ, ತಾನು ನೀರಿನಲ್ಲಿ ಕಂಡ ಮುಖಗಳು ಹೇಗಿದ್ದವು ಎಂದು ವಿವರಿಸಿದಳು. ಅದರಲ್ಲಿ ಒಂದು, ಸತ್ತುಹೋದ ಅವನ ಸೋದರನ ಮುಖ ಹೋಲುತ್ತಿತ್ತು. ಆಗ ಅವನೂ ಆಕೆಯ ಮಾತು ದಿಟವೆಂದು ನಂಬಿದ. ಅವನು ಸಣ್ಣಗೆ ಅನುಮಾನಿಸಿದ್ದರೂ ಆಕೆಯ ಮಾತು ಅಪ್ಪಟ ಸುಳ್ಳು, ಕಲ್ಪಿತ ಭ್ರಮೆ ಎನ್ನುವುದು ಅರ್ಥವಾಗುತ್ತಿತ್ತು. ಆದರೆ ಸುಳ್ಳು, ಸತ್ಯಕ್ಕಿಂತ ಮಿಗಿಲಾಗಿ ನಶಿಸಿಹೋಗುತ್ತಿರುವ ತನ್ನ ವಾಮಾಚಾರಿ ಪ್ರಭಾವವನ್ನು ಮತ್ತೆ ಗಿಟ್ಟಿಸಿಕೊಳ್ಳುವ ಅವಕಾಶ ಆ ಹುಡುಗಿಯ ಕಥೆಯಲ್ಲಿ ಅವನಿಗೆ ಕಂಡಿದ್ದರಿಂದ ಅದಕ್ಕೆ ಮತ್ತಷ್ಟು ಬಣ್ಣ ಕಟ್ಟಿ ಪ್ರಚಾರ ಮಾಡಿದ.

ನೋಡನೋಡುತ್ತಿದ್ದಂತೆಯೆ ನಂಗ್ಕುವೂಸೆ ಪವಾಡದ ಹುಡುಗಿಯಾದಳು. ಅವಳ ಪೂರ್ವಜ ಪ್ರೇತಾತ್ಮದ ಕಥೆ, ಆ ಪ್ರಾಂತ್ಯದ ರಾಜ ‘ಸರೀಲಿ ಕಾ ಹಿನ್ಸ್ಟಾ’ ಕಿವಿಗೂ ತಲುಪಿತು. ಹಿಂದೆಮುಂದೆ ಯೋಚಿಸದೆ, ನಂಗ್ಕುವೂಸೆಗೆ ವಿಶೇಷ ಆತಿಥ್ಯ ನೀಡಿ, ಕೂಡಲೇ ಆಕೆ ಹೇಳಿದಂತೆ ಎಲ್ಲರೂ ತಮ್ಮ ಜಾನುವಾರುಗಳನ್ನು, ಬೆಳೆ, ದವಸಗಳನ್ನು ನಾಶ ಮಾಡಬೇಕು ಎಂದು ಆಜ್ಞೆ ಹೊರಡಿಸಿದ. ಮೌಢ್ಯಗಳಿಗೆ ಕಟ್ಟುಬಿದ್ದಿದ್ದ ಜನ ಕೂಡಾ ಪೂರ್ವಜ ಪ್ರೇತಾತ್ಮಗಳ ಭವಿಷ್ಯವಾಣಿಗೆ ಹೆದರಿ ತಮ್ಮ ಆದಾಯದ ಮೂಲವೇ ಆಗಿದ್ದ ಜಾನುವಾರುಗಳನ್ನು ಹಾಗೂ ಕೃಷಿ ಬೆಳೆಯನ್ನು ನಾಶ ಮಾಡಲು ಸಿದ್ಧರಾದರು.

ಆದರೆ ಆಮಗೋಗೋತ್ಯೆ ಎಂಬ ಸಮುದಾಯದ ಒಂದಷ್ಟು ಬುದ್ದಿವಂತರು ಆಕೆಯ ಮಾತನ್ನು ಅನುಮಾನಿಸಿದರು. ಇದೆಲ್ಲ ಕಟ್ಟುಕಥೆ, ಆಕೆ ಸುಳ್ಳು ಹೇಳುತ್ತಿದ್ದಾಳೆ, ಅವಳ ಮಾತನ್ನು ಕೇಳಿ ನಮ್ಮ ಆದಾಯದ ಮೂಲಗಳನ್ನು ನಾಶ ಮಾಡಿಕೊಂಡರೆ ಮುಂದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತೆ ಅಂತ ತಗಾದೆ ತೆಗೆದರು. ಯಥಾ ಪ್ರಕಾರ ಜನ ಅವರನ್ನು ಧರ್ಮದ್ರೋಹಿಗಳು, ಬ್ರಿಟಿಷರ ಏಜೆಂಟರು, ಗುಲಾಮರು ಅಂತೆಲ್ಲ ದೂರಿ ನಂಗ್ಕುವೂಸೆ ಹೇಳಿದ ಆಚರಣೆಗೆ ಮುಂದಾದರು.

ಅಂದಾಜಿನ ಲೆಕ್ಕದ ಪ್ರಕಾರ ಮೂರು ಲಕ್ಷದಿಂದ ನಾಲ್ಕು ಲಕ್ಷ ಜಾನುವಾರಗಳನ್ನು ಸಾಯಿಸಿ ಸುಟ್ಟುಹಾಕಿದರು. ಕಟಾವಿಗೆ ಬಂದಿದ್ದ ಒಣ ಪೈರುಗಳಿಗೆ ಬೆಂಕಿಯಿಟ್ಟು ಬೂದಿ ಮಾಡಿದರು. ಆಗವರಿಗೆ ಯಾವ ಪಾಪಪ್ರಜ್ಞೆಯೂ ಇರಲಿಲ್ಲ. ಬ್ರಿಟಿಷರಿಂದ ಮುಕ್ತಿ ಸಿಕ್ಕಿಬಿಡುತ್ತೆ, ಪೂರ್ವಜರನ್ನು ಸಂತೃಪ್ತಗೊಳಿಸುತ್ತಿದ್ದೇವೆ ಎಂಬ ನಂಬಿಕೆಯಷ್ಟೇ ಅವರನ್ನು ಆಳುತ್ತಿದ್ದುದು. ಈ ಸ್ವಯಂ ನಾಶದ ಅಭಿಯಾನ ಒಮ್ಮಿಂದೊಮ್ಮೆಲೇ ಶುರುವಾಗಲಿಲ್ಲ. ಪರ-ವಿರೋಧದ ಚರ್ಚೆಯ ನಡುವೆ ಸುಮಾರು ಹತ್ತು ತಿಂಗಳ ಅವಧಿಯವರೆಗೆ ಇದು ವಿಸ್ತರಿಸಿತು. ಈ ಅವಧಿಯಲ್ಲಿ ಇಡೀ ಸಮುದಾಯ ತನ್ನ ಆದಾಯದ ಮೂಲವನ್ನೇ ನಾಶ ಮಾಡಿಕೊಂಡು, ಭವಿಷ್ಯವಾಣಿಗಾಗಿ ಎದುರುನೋಡುತ್ತಿತ್ತು.

ಕೆಲವೊಂದಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರೂ ಬಹಳಷ್ಟು ಮಂದಿ ನಂಗ್ಕುವೂಸೆ ಮಾತಿನಂತೆಯೇ ನಡೆದುಕೊಂಡರು ಸಹಾ ಸೂರ್ಯ ಕಡುಕೆಂಪಗೆ ಉದಯಿಸುವ, ಸತ್ತ ಪೂರ್ವಜರು ಮತ್ತೆ ಜನ್ಮವೆತ್ತುವ, ಬಿಳಿ ತೊಗಲಿನ ಪರಕೀಯರನ್ನು ಗುಡಿಸಿ ಸಮುದ್ರಕ್ಕೆಸೆಯುವ ದಿನ ಮಾತ್ರ ಬರಲೇ ಇಲ್ಲ. ಕೊನೆಗೆ ತಾಳ್ಮೆಗೆಟ್ಟ ರಾಜ ಸರೀಲಿ, ಮ್ಹಲಕಾಝಾನ ಮನೆಗೆ ಬಂದು ನಂಗ್ಕುವೂಸಿಯ ಬಳಿ ತನ್ನ ಅಸಮಾಧಾನ ಕಾರಿಕೊಂಡ. ಆಗ ಆಕೆ ಫೆಬ್ರವರಿ 18, 1857 ರಂದು ಆ ದಿನ ಬರುತ್ತೆ ಅಂತ ಭವಿಷ್ಯ ನುಡಿದಳು. ರಾಜನಿಗೆ ಖುಷಿಯಾಯ್ತು. ಜಾನುವಾರುಗಳನ್ನು ಬಲಿಕೊಡುವ ಕಾರ್ಯ ಮತ್ತಷ್ಟು ಚುರುಕಾಯಿತು.

ಕಡೆಗೂ ಜನರೆಲ್ಲ ಕಾತರದಿಂದ ಕಾಯ್ದಿದ್ದ ದಿನ ಬಂತು. ಆದರೆ ಸೂರ್ಯ ಕಡುಕೆಂಪು ಬಣ್ಣದ ಬದಲಿಗೆ ತನ್ನ ಸಹಜ ಬಂಗಾರದ ವರ್ಣದಲ್ಲೆ ಮೂಡಿದ. ಯಾವ ಬಿರುಗಾಳಿಯೂ ಬೀಸಲಿಲ್ಲ, ಯಾವ ಸಮಾಧಿಯಿಂದ ಯಾವೊಬ್ಬ ಪೂರ್ವಜನೂ ಎದ್ದು ಬರಲಿಲ್ಲ. ಬಿಳಿತೊಗಲಿನವರು ಕೂದಲು ಕೂಡಾ ಕೊಂಕಲಿಲ್ಲ! ನಂಗ್ಕುವೂಸಿಯ ಭವಿಷ್ಯವಾಣಿ ಅಕ್ಷರಶಃ ಸುಳ್ಳಾಗಿತ್ತು. ಅವಳ ಮಾತನ್ನು ನಂಬಿ ಇದ್ದಬದ್ದ ಆದಾಯದ ಮೂಲವನ್ನೆಲ್ಲ ಬೆಂಕಿಗರ್ಪಿಸಿದ ಜನ ಕಂಗಾಲಾಗಿ ಹೋದರು.

ಆದಗ್ಯೂ ನಂಗ್ಕುವೂಸಿಯನ್ನು ಸುಳ್ಳುಗಾತಿ ಎನ್ನುವ ಬದಲು, ಆಕೆಯ ಒಂದಷ್ಟು ಚೇಲಾಗಳು ‘ಆಕೆಯ ಮಾತನ್ನು ಸುಳ್ಳೆಂದು ವಿರೋಧಿಸಿ, ಜಾನುವಾರುಗಳನ್ನು ಬಲಿಕೊಡದ, ಬೆಳೆಗೆ ಬೆಂಕಿಯಿಡದ ವಿರೋಧಿಗಳಿಂದಾಗಿಯೇ ಪೂರ್ವಜರು ಸಂತೃಪ್ತರಾಗದೆ ಪುನರ್ಜನ್ಮರಾಗಲಿಲ್ಲ’ ಎಂಬ ಪುಕಾರನ್ನು ಎಬ್ಬಿಸಿದರು. ಆದನ್ನು ಕೂಡಾ ಮೊದಮೊದಲು ಅದನ್ನು ನಂಬಿದರು. ಕ್ರಮೇಣ ಆಕೆಯ ವಂಚನೆ, ಮೋಸ, ಸುಳ್ಳುಗಳು ಜನರಿಗೆ ಅರ್ಥವಾದವು. ಅಷ್ಟರಲ್ಲಾಗಲೆ ಕಾಲ ಮಿಂಚಿಹೋಗಿತ್ತು. ಇಡೀ ರಾಜ್ಯದ ಆದಾಯದ ಮೂಲಗಳೇ ಬತ್ತಿಹೋಗಿದ್ದವು. ತಿನ್ನುವ ಅನ್ನಕ್ಕೆ ತಾವೇ ಬೆಂಕಿಯಿಟ್ಟಿದ್ದರಿಂದ, ಊಟವೂ ಇಲ್ಲದೇ ಹಸಿವಿನ ತಾಂಡವ ಶುರುವಾಯ್ತು. ಆ ಹಸಿವು ಎಷ್ಟು ಭೀಕರವಾಗಿತ್ತೆಂದರೆ, ಒಂದೂ ಲಕ್ಷ ಐದು ಸಾವಿರದಷ್ಟಿದ್ದ ಆ ಸಮುದಾಯದ ಜನಸಂಖ್ಯೆ ಕೇವಲ ಒಂದು ವರ್ಷದಲ್ಲಿ ಇಪ್ಪತ್ತೇಳು ಸಾವಿರಕ್ಕೆ ಕುಸಿಯಿತು. ಸಹಜವಾಗಿಯೇ ಇದು ಸ್ವದೇಶಿ ಪ್ರತಿರೋಧವನ್ನು ಹತ್ತಿಕ್ಕಲು ಬ್ರಿಟಿಷರಿಗೆ ತುಂಬಾ ಅನುಕೂಲವಾಯಿತು. ಹಿಂದೆಮುಂದೆ ಯೋಚಿಸದೆ ಆ ಹುಡುಗಿಯ ಮಾತು ಕೇಳಿ ಇಂಥಾ ಕಾರ್ಯಕ್ಕೆ ಮುಂದಾದ ತಮ್ಮದೇ ರಾಜನ ವಿರುದ್ಧ ಜನ ತಿರುಗಿಬಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಬ್ರಿಟಿಷ್ ಗೌರ್ನರ್ ಜನರಲ್ ಸರ್ ಜಾರ್ಜ್ ಗ್ರೇ ಎಂಬಾತ, ರಾಜನ ಸೈನಿಕ ಶಕ್ತಿಯನ್ನೇ ನಾಶ ಮಾಡಿ, ಬ್ರಿಟಿಷ್ ಅಧಿಪತ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದ. ಕೊನೆಗೆ ದಂಗೆಯೆದ್ದ ಜನರಿಂದ ರಕ್ಷಿಸುವ ಸಲುವಾಗಿ ನಂಗ್ಕುವೂಸಿಯನ್ನೂ ಬಂಧಿಸಿ ಜೈಲಿನಲ್ಲಿಟ್ಟರು. ಹಲವಾರು ವರ್ಷಗಳ ನಂತರ ಜೈಲಿನಿಂದ ಬಿಡುಗಡೆಗೊಂಡು ಹೊರಬಂದ ಆಕೆ ಪುಟ್ಟದೊಂದು ಜಮೀನು ನೋಡಿಕೊಳ್ಳುತ್ತಾ, 1898ರಲ್ಲಿ ಸತ್ತುಹೋದಳು.

ಕಡೇಪಕ್ಷ ವಿಜ್ಞಾನ ಮತ್ತು ಆರ್ಥಿಕತೆಯಂತಹ ವಿಚಾರಗಳನ್ನಾದರು ನಾವು ಮೌಢ್ಯ, ಅಜ್ಞಾನ ಮತ್ತು ಅಂಧಾಭಿಮಾನಗಳಿಂದ ದೂರ ಇಡಬೇಕಾಗುತ್ತೆ. ಇಲ್ಲವಾದರೆ ಏನಾಗುತ್ತೆ ಅನ್ನೋದಕ್ಕೆ ಕ್ಸೋಸಾ ಸಮುದಾಯದ ಈ ದುರಂತವೇ ಸಾಕ್ಷಿ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!