Thursday, September 19, 2024

ಪ್ರಾಯೋಗಿಕ ಆವೃತ್ತಿ

ಈದಿನ.ಕಾಮ್‌ ವತಿಯಿಂದ ನಡೆಸಲಾದ ಕರ್ನಾಟಕದ ವಿಧಾನಸಭಾ ಚುನಾವಣೆಯ ಮೆಗಾ ಸರ್ವೇ

ನಿನ್ನೆಯಿಂದ ಈದಿನ.ಕಾಮ್ ನಲ್ಲಿ ಮುಂದಿಡಲಾಗುತ್ತಿರುವ ಸಮೀಕ್ಷೆಯ ವಿವರಗಳನ್ನು ನೀವು ಗಮನಿಸಿರಬಹುದು. ಈದಿನ.ಕಾಮ್  ನಡೆಸಿದ ಸಮೀಕ್ಷೆ ಇದು

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಒಲವು ಯಾವ ಕಡೆ ಇದೆ ಎಂಬುದನ್ನು ಅರಿಯುವ ಚುನಾವಣಾ ಪೂರ್ವ ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಿದ ತಕ್ಷಣ ಈ ಕ್ಷೇತ್ರದ ಅತ್ಯಂತ ಹಿರಿಯ ತಜ್ಞರ ಜೊತೆ ಚರ್ಚಿಸಿದೆವು. ಇಂತಹ ಸಮೀಕ್ಷೆನಡೆಸುವ ವಿಧಾನವೇ ಒಂದು ವಿಜ್ಞಾನವಾಗಿ ಬೆಳೆದಿದ್ದು, ಅದೂ ಸಹಾ ನಮ್ಮ ಓದುಗರಿಗೆ ತಲುಪಲಿ ಎಂದು ನಾವು ಭಾವಿಸುತ್ತೇವೆ. ಮುಂದಿನ ಆರು ದಿನಗಳಲ್ಲಿ ಸಮೀಕ್ಷೆಯ ಪೂರ್ಣ ವಿವರಗಳನ್ನು ಹಂತಹಂತವಾಗಿ ನಿಮ್ಮ ಮುಂದಿಡಲಾಗುತ್ತದೆ. ಕಡೆಯದಾಗಿ, ಕರ್ನಾಟಕದ ಮತದಾರರ ಒಲವು ಯಾವ ಪ್ರಮಾಣದಲ್ಲಿ ಯಾವ ಪಕ್ಷಗಳ ಕಡೆಗಿದೆ ಎಂಬುದನ್ನು ತಿಳಿಸಲಾಗುತ್ತದೆ.

ಚುನಾವಣೆ 2023’ರ ಸಮೀಕ್ಷೆಯ ವ್ಯಾಪ್ತಿ, ವಿಧಾನ ಮತ್ತು ಸ್ಯಾಂಪಲ್‌ ಆಯ್ಕೆ

ಸಮೀಕ್ಷೆಯ ವ್ಯಾಪ್ತಿ

  • ಇಲ್ಲಿಯವರೆಗೆ ಸಮೀಕ್ಷೆ ನಡೆಸಲಾದ ಕ್ಷೇತ್ರಗಳ ಸಂಖ್ಯೆ: 183 (ಬೆಂಗಳೂರಿನ 28 ಕ್ಷೇತ್ರಗಳು ಸೇರಿದಂತೆ ಕೆಲವೆಡೆ ಕ್ಷೇತ್ರ ಕಾರ್ಯ ಇನ್ನೂ ನಡೆಯುತ್ತಿದೆ)
  • ಇಲ್ಲಿಯವರೆಗೆ ಸಮೀಕ್ಷೆ ನಡೆಸಲಾದ ಮತಗಟ್ಟೆಗಳ ಸಂಖ್ಯೆ: 1,483
  • ಇಲ್ಲಿಯವರೆಗೆ ನಡೆಸಲಾದ ಸಂದರ್ಶನಗಳ ಸಂಖ್ಯೆ: 39,181
  • ಕ್ಷೇತ್ರ ಕಾರ್ಯದ ಅವಧಿ: ಮಾರ್ಚ್‌ 3ರಿಂದ ಇಂದಿನ ದಿನದವರೆಗೆ

ಸಮೀಕ್ಷೆಯ ವಿಧಾನ:
ಸಮೀಕ್ಷೆಯನ್ನು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಾಡಲಾಗುತ್ತಿದೆ (ಇಲ್ಲಿಯವರೆಗೆ ಎಷ್ಟು ಆಗಿದೆ ಎಂಬುದರ ವಿವರ ಮೇಲೆ ಕೊಡಲಾಗಿದೆ). ಎಂಟೆಂಟು ಜೋಡಿ ಮತಗಟ್ಟೆಗಳನ್ನು, ವೈಜ್ಞಾನಿಕವಾಗಿ ಯಾವುದೇ ಒಲವು/ಪೂರ್ವಗ್ರಹಕ್ಕೆ ಅವಕಾಶವಿಲ್ಲದಂತೆ ಮತದಾರರ ಪಟ್ಟಿಯಿಂದ ಆಯ್ದುಕೊಂಡು (random sampling) ಗುರುತಿಸಿಕೊಳ್ಳಲಾಯಿತು. ನಂತರ ಆಯಾ ಮತಗಟ್ಟೆಗಳಲ್ಲಿ ಮತದಾರರನ್ನೂ ವೈಜ್ಞಾನಿಕವಾಗಿ ಯಾವುದೇ ಒಲವು/ಪೂರ್ವಗ್ರಹವಿಲ್ಲದೇ ಮತದಾರರ ಪಟ್ಟಿಯಿಂದ ಆಯ್ದುಕೊಂಡು (random sampling) ಮಾತನಾಡಿಸಲಾಯಿತು. ಇದು ಮತದಾರರನ್ನು ಅವರುಗಳ ಮನೆಗಳಲ್ಲಿ ಮುಖಾಮುಖಿ ಭೇಟಿ ಮಾಡಿ ನಡೆಸಲಾದ ಸಮೀಕ್ಷೆಯಾಗಿದೆ, ಫೋನಿನಲ್ಲಿ ಮಾತನಾಡಿಸಿ ಮಾಡಿದ್ದಲ್ಲ. ಈ ಸಂದರ್ಶನಗಳನ್ನು ಮಾಡಿರುವವರಲ್ಲಿ ಬಹುತೇಕರು, ‘ಈ ದಿನ’ ಮಾಧ್ಯಮ ನೆಟ್ವರ್ಕ್‌ ಜೊತೆಗಿರುವ ವಾಲಂಟಿಯರುಗಳಾಗಿದ್ದಾರೆ. ಕನ್ನಡದಲ್ಲಿ ತಯಾರಿಸಲಾದ ಪ್ರಶ್ನಾವಳಿಯನ್ನು ಇಟ್ಟುಕೊಂಡು, ಈ ದಿನ ಸರ್ವರ್‌ಗೆ ನೇರವಾಗಿ ತಲುಪುತ್ತಿದ್ದ ಆನ್‌ ಲೈನ್‌ ಸಾಫ್ಟ್‌ ವೇರ್‌ ಅನ್ನು ಈ ವಾಲಂಟಿಯರುಗಳು ಬಳಸಿದ್ದಾರೆ.

ಪ್ರತಿಕ್ರಿಯಿಸಿದ ಮತದಾರ ಸಮೂಹದ ಸ್ವರೂಪ
ಸಮಾಜದ ಎಲ್ಲ ಸಮುದಾಯಗಳ ಪ್ರಾತಿನಿಧ್ಯ ಖಾತರಿಯಾಗುವಂತೆ ನಾವು ಸಮೀಕ್ಷೆ ನಡೆಸಬೇಕು. ಅಂದರೆ, ರಾಜ್ಯದಲ್ಲಿ ಶೇ.18ರಷ್ಟು ಪರಿಶಿಷ್ಟ ಜಾತಿಗೆ ಸೇರಿದ ಮತದಾರರಿದ್ದರೆ, ನಾವು ಇಡೀ ರಾಜ್ಯದಲ್ಲಿ ಆಯ್ಕೆ ಮಾಡಿಕೊಂಡ ಒಟ್ಟೂ ಮತದಾರರಲ್ಲಿ ಆ ಸಮುದಾಯಕ್ಕೆ ಸೇರಿದವರು ಹೆಚ್ಚು ಕಡಿಮೆ ಶೇ.18 ಇರಬೇಕು. ಇದು ಎಲ್ಲಾ ಸಮುದಾಯಗಳಿಗೆ ಅನ್ವಯಿಸುತ್ತದೆ. ಇದು ಕೇವಲ ಜಾತಿ ಸಮುದಾಯಗಳ ಪ್ರಶ್ನೆ ಅಲ್ಲ, ಗಂಡು-ಹೆಣ್ಣು, ವಿವಿಧ ವಯೋಮಾನದವರು, ಎಲ್ಲಾ ಪ್ರದೇಶದವರು – ಹೀಗೆ ಎಲ್ಲರೂ ರಾಜ್ಯದಲ್ಲಿ ಅವರ ಜನಸಂಖ್ಯೆಯಲ್ಲಿ ಯಾವ ಪ್ರಮಾಣದಲ್ಲಿ ಇದ್ದಾರೋ ಅದೇ ಪ್ರಮಾಣದಲ್ಲಿ ನಮ್ಮ ಸಮೀಕ್ಷೆಯಲ್ಲೂ ಸಿಗಬೇಕು. ಆ ರೀತಿ ನಮ್ಮ ಒಟ್ಟು ಪ್ರತಿಕ್ರಿಯಿಸಬೇಕಾದ ಮತದಾರರನ್ನು ಆಯ್ದುಕೊಳ್ಳುವ ವಿಧಾನವನ್ನು ಇಲ್ಲಿ ಅಳವಡಿಸಲಾಗಿದೆ. ಆದರೆ, ನಮ್ಮ ವಾಲಂಟಿಯರ್‌ ಹೋದಾಗ ಸಂಬಂಧಪಟ್ಟವರು ಲಭ್ಯವಿಲ್ಲದೇ ಹೋಗುವುದು ಅಥವಾ ಉತ್ತರಿಸಲು ನಿರಾಕರಿಸುವುದು ಸಮಾಜದಲ್ಲಿನ ಅವರ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗಲು ಕಾರಣವಾಗಿರಬಹುದು. ಅದನ್ನು ಹೊರತುಪಡಿಸಿದರೆ ಆಯಾ ಸಮುದಾಯಗಳ ಪ್ರಮಾಣವು ಕರ್ನಾಟಕದಲ್ಲಿ ಅವರವರ ಪ್ರಾತಿನಿಧ್ಯಕ್ಕೆ ತೀರಾ ಹತ್ತಿರವಿದೆ.

  • ನಗರ ಮತ್ತು ಗ್ರಾಮೀಣ ಭಾಗದಿಂದ ಪ್ರತಿಕ್ರಿಯಿಸಿದವರ ಪ್ರಮಾಣ ರಾಜ್ಯದ ಜನಸಂಖ್ಯೆಯಲ್ಲಿ ಅವರ ಪ್ರಮಾಣಕ್ಕೆ ಅನುಗುಣವಾಗಿಯೇ ಇದೆ.
  • ಪ್ರತಿಕ್ರಿಯಿಸಿದವರಲ್ಲಿ ಶೇ.55ರಷ್ಟು ಪುರುಷರು ಮತ್ತು ಶೇ.45ರಷ್ಟು ಮಹಿಳೆಯರು ಇದ್ದಾರೆ.
  • ಕರ್ನಾಟಕದ ಜಾತಿ ಸಮುದಾಯಗಳ ಪ್ರಮಾಣವು ಬಹುತೇಕ ಕರ್ನಾಟಕದ ಅವರವರ ಜನಸಂಖ್ಯೆಗೆ ಸಮೀಪದಲ್ಲೇ ಇದೆ. ಸಮೀಕ್ಷೆಯಲ್ಲಿ ಶೇ. 17ರಷ್ಟು ಪರಿಶಿಷ್ಟ ಜಾತಿ (ಬಲಗೈ, ಎಡಗೈ ಮತ್ತು ಇತರೆಯನ್ನು ಒಳಗೊಂಡು), ಶೇ. 8ರಷ್ಟು ಪರಿಶಿಷ್ಟ ಪಂಗಡ, ಶೇ.11ರಷ್ಟು ಮುಸ್ಲಿಮರು, ಶೇ.17ರಷ್ಟು ಲಿಂಗಾಯಿತರು, ಶೇ.11ರಷ್ಟು ಒಕ್ಕಲಿಗರು, ಶೇ.10ರಷ್ಟು ಕುರುಬ ಸಮುದಾಯಕ್ಕೆ ಸೇರಿದವರಿಂದ ಅಭಿಪ್ರಾಯ ಪಡೆಯಲಾಗಿದೆ.
  • ಸಮೀಕ್ಷೆಯು ಮುಗಿದ ನಂತರ ನಿರ್ದಿಷ್ಟ ಸಂಖ್ಯೆಗಳನ್ನೂ ನೀಡಲಾಗುವುದು.

ಸಮೀಕ್ಷೆಯಲ್ಲಿ ನಾವು ಮಾತನಾಡಿಸಿದ ಮತದಾರರ ಜಾತಿವಾರು ವಿವರ ಹೀಗಿದೆ:
(ಇದರಲ್ಲಿ ಬೆಂಗಳೂರಿನ ಮತದಾರರ ಸಮೀಕ್ಷೆಯು ಸೇರಿಲ್ಲ. ಸಮೀಕ್ಷೆ ಮತ್ತು ಅದರ ವಿಶ್ಲೇಷಣೆ ಇನ್ನೂ ಮುಂದುವರೆಯುತ್ತಿರುವುದರಿಂದ ಅದನ್ನು ಹೊರತುಪಡಿಸಿದ ವಿವರಗಳು ಇಲ್ಲಿವೆ. ಬೆಂಗಳೂರಿನ ಸಮೀಕ್ಷೆಯ ವಿಶ್ಲೇಷಣೆಯ ಜೊತೆಗೆ ಮೂರನೆಯ ದಿನ ನಾವು ರಾಜ್ಯದ ಎಷ್ಟು ಶೇಕಡಾ ಮತದಾರರು ಯಾವ ಪಕ್ಷಗಳಿಗೆ ಒಲವು ತೋರಿಸಿದ್ದಾರೆ ಎಂಬುದನ್ನು ಮುಂದಿಡಲಿದ್ದೇವೆ. ವಿ.ಸೂ: ಏಪ್ರಿಲ್‌ 26ಕ್ಕೆ ಅದೂ ಸಹಾ ಮುಗಿದಿದೆ.)

ಈಗ ಒಂದಾದ ಮೇಲೆ ಒಂದರಂತೆ ಸಮೀಕ್ಷೆಯ ವಿವರಗಳು ನಿಮ್ಮ ಮುಂದೆ ಲಭ್ಯವಾಗುತ್ತಾ ಹೋಗುತ್ತದೆ. ಮೊದಲಿಗೆ ಆಡಳಿತ ವಿರೋಧಿ ಅಲೆ ಇದೆಯೇ ಇಲ್ಲವೇ ಎಂಬುದರ ಕುರಿತು ಸಮೀಕ್ಷೆ ಏನು ಹೇಳುತ್ತದೆ ನೋಡಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!