Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೊಟ್ಟೆಯ ಹಳದಿ ಭಾಗ ತಿನ್ನುವುದು ಒಳ್ಳೆಯದೋ ಅಲ್ಲವೋ?

ಡಾ. ವಾಸು ಹೆಚ್. ವಿ

ಮೊಟ್ಟೆಯು ಸಾಕಷ್ಟು ಪ್ರೋಟಿನ್ ಅಂಶ ಹೊಂದಿದ್ದು ಅದೊಂದು ಉತ್ತಮ ಆಹಾರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಹಾಗಾಗಿಯೇ ಸಸ್ಯಾಹಾರಿಗಳಲ್ಲೂ ಹಲವರಿಗೆ ಮೊಟ್ಟೆ ತಿನ್ನುವ ಅಭ್ಯಾಸ ಇವೆ.

ಮೊಟ್ಟೆ ತಿನ್ನುವವರ ಬಹುದೊಡ್ಡ ಗೊಂದಲ ಅಥವಾ ಪ್ರಶ್ನೆ ಇರುವುದು – ಮೊಟ್ಟೆಯ ಹಳದಿ ಭಾಗದ ಬಗ್ಗೆ “ಬಿಳಿ ಭಾಗ ತಿನ್ನುವುದು ಒಳ್ಳೆಯದು. ಆದರೆ, ಹಳದಿ ಭಾಗ ತಿನ್ನಬಾರದು ಎಂದು ಹೇಳುತ್ತಾರಲ್ಲ?” ಎಂಬ ಗೊಂದಲ.

ಕೆಲವರಿಗೆ ಅಭ್ಯಾಸವಿಲ್ಲದ ಕಾರಣ ಮೊಟ್ಟೆಯ ಹಳದಿ ಭಾಗ ತಿನ್ನಲು ಇಷ್ಟವಿರುವುದಿಲ್ಲ. ಮತ್ತೆ ಕೆಲವರಿಗೆ ಇಷ್ಟವಿದ್ದರೂ, ವಿಪರೀತ ಕೊಲೆಸ್ಟೆರಾಲ್‌ ಇರುತ್ತದೆ ಎಂಬ ಇತರರ ಮಾತು ಕೇಳಿ ಹಿಂಜರಿಕೆ, ಭಯ ಹಾಗಾದರೆ ವಾಸ್ತವವೇನು?

ಸುಮಾರು 55 ಗ್ರಾಮಗಳಿಂದ 70 ಗ್ರಾಮ್‌ಗಳವರೆಗೆ ತೂಗುವ ಮೊಟ್ಟೆಯಲ್ಲಿ ಏಳು ಗ್ರಾಂನಷ್ಟು ಪ್ರೋಟಿನ್ ಇರುತ್ತದೆ. ಅದರಲ್ಲಿ ಹೆಚ್ಚಿನಂಶ ಪ್ರೋಟಿನ್ ಬಿಳಿ ಭಾಗದಲ್ಲಿ ಇರುತ್ತದೆ ಆದರೆ, ಹಳದಿ ಭಾಗದಲ್ಲೂ ಪ್ರೋಟಿನ್ ಅಂಶ ಇರುತ್ತದೆ.

ಅಸಲಿಗೆ ಮೊಟ್ಟೆಯ ಹಳದಿ ಭಾಗವು ಬಿಳಿ ಭಾಗಕ್ಕಿಂತ ಹಲವು ರೀತಿಯಲ್ಲಿ ಪೌಷ್ಟಿಕವಾದುದು. ವಿಟಮಿನ್ ಎ, ವಿಟಮಿನ್ ಡಿ ವಿಟಮಿನ್ ಬಿ2, ವಿಟಮಿನ್ ಬಿ 12, ಫೋಲಿಕ್ ಆಸಿಡ್, ಬಯೋಟಿನ್, ಪ್ಯಾಂಥೋಧಿನಿಕ್ ಆಸಿಡ್, ಕೋಲಿನ್ ಇವೆಲ್ಲವೂ ಯಥೇಚ್ಛವಾಗಿರುವುದು ಮೊಟ್ಟೆಯ ಹಳದಿ ಭಾಗದಲ್ಲೇ ಈ ಎಲ್ಲ ವಿಟಮಿನ್‌ಗಳು ನಮ್ಮ ದೇಹಕ್ಕೆ ಅತ್ಯಗತ್ಯ. ಇದಲ್ಲದೆ ಫಾಸ್ಪರಸ್, ಅಯೋಡಿನ್ ಹಾಗೂ ಸೆಲೆನಿಯಮ್ ಲವಣಾಂಶಗಳು ಮೊಟ್ಟೆಯ ಹಳದಿ ಭಾಗದಲ್ಲಿರುತ್ತವೆ.

ಆದರೆ, ಎಲ್ಲರ ಚಿಂತೆಯಿರುವುದು ಕೊಬ್ಬಿನ ಅಂಶದ ವಿಷಯದಲ್ಲಿ ಮೊಟ್ಟೆಯ ಹಳದಿ ಭಾಗದಲ್ಲಿ ಕೊಬ್ಬು ಹೆಚ್ಚಿರುತ್ತದೆ ಎಂಬುದು ಈ ಆತಂಕಕ್ಕೆ ಕಾರಣ. ನಮ್ಮ ದೇಹ ಆರೋಗ್ಯಕರ ಸ್ಥಿತಿಯಲ್ಲಿರಬೇಕೆಂದರೆ ಆಹಾರದಲ್ಲಿ ಕೊಬ್ಬಿನ ಅಂಶ ಇರುವುದೂ ಅತ್ಯಗತ್ಯ. ಅತಿಯಾದ ಕೊಬ್ಬು ದೇಹದಲ್ಲಿ ಇರುವುದು ನಿಜಕ್ಕೂ ತೊಂದರೆಯೇ ಆದರೆ, ಆಹಾರದಲ್ಲಿನ ಕೊಬ್ಬ ದೇಹದ ಕೊಬ್ಬಿಗೆ ದಾರಿ ಮಾಡಿಕೊಡುತ್ತದೆ ಎಂಬುದು ಅಷ್ಟು ನಿಜವಲ್ಲ.

ಕಳೆದ ಶತಮಾನದ ಕಡೆಯ ದಶಕಗಳಲ್ಲಿ ಕೊಬ್ಬಿನ ಸಮಸ್ಯೆಯ ವಿಚಾರದಲ್ಲಿ ಅತಿಯಾದ ಪ್ರಚಾರ ನಡೆದದ್ದು ಇಂಥ ಗೊಂದಲ ಸೃಷ್ಟಿಗೆ ಒಂದು ಕಾರಣ ನಿಜ ಹೇಳಬೇಕೆಂದರೆ, ನಮ್ಮ ಆಹಾರದ ಶರ್ಕರಪಿಷ್ಟದ *(ಕಾರ್ಬೋ ಹೈಡೇಟ್)
ಅಪಾಯದ ಕುರಿತಾಗಿ ಇರಬೇಕಾದಷ್ಟು ಕಾಳಜಿ ಕೂಬ್ಬಿನ ಕುರಿತಾಗಿ ಇರಬೇಕಿಲ್ಲ.

ಇನ್ನು ಒಳ್ಳೆಯ ಕೊಬ್ಬಿನ ಕುರಿತಾಗಿ ಇತ್ತೀಚೆಗೆ ಬಹಳಷ್ಟು ಚರ್ಚೆ ನಡೆದಿವೆ ಅದರಲ್ಲೂ ಒಮೆಗಾ 3 ಕೊಬ್ಬಿನ ಆಮ್ಲ ಎಂಬ ಒಳ್ಳೆಯ ಕೊಬ್ಬಿನ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಅಂದಹಾಗೆ, ಮೊಟ್ಟೆಯ ಹಳದಿ ಭಾಗದಲ್ಲಿ ಈ ಒಮೆಗಾ 3 ಕೊಬ್ಬಿನಾಂಶ ಇದೆ, ಹಾಗಾಗಿ ಅದನ್ನು ತಿನ್ನುವುದು ಒಳ್ಳೆಯದೇ.

ಇನ್ನು ಮುಂದೆ ಮೊಟ್ಟೆಯ ಹಳದಿ ಭಾಗ ತಿನ್ನುವುದಕ್ಕೆ ಯಾವ ಹಿಂಜರಿಕೆ ಬೇಡ. ಗೊಂದಲ ಮತ್ತು ಹೆದರಿಕೆಯಂತೂ ಬೇಡವೇ ಬೇಡ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!