Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಂಗ್ಲೀಷ್-ಹಿಂದಿ ಹೇರಿಕೆ ಅತಿಯಾಗಿದೆ

ಕನ್ನಡ ಭಾಷೆಗೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದ್ದು,ಪ್ರಸ್ತುತ ರಾಜ್ಯದಲ್ಲಿ
ಇಂಗ್ಲೀಷ್ ಹಾಗೂ ಹಿಂದಿಯ ಹೇರಿಕೆ, ದಬ್ಬಾಳಿಕೆ ಅತಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ವಿಷಾದ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸೇನೆ ಆಯೋಜಿಸಿದ್ದ ‘ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು’ ಒಂದು ಚಿಂತನೆ, ವಿಚಾರ ಸಂಕಿರಣ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದು ಜನರೆಲ್ಲರೂ ಇಂಗ್ಲಿಷ್ ಭಾಷೆಯ ದಾಸರಾಗುತ್ತಿದ್ದಾರೆ.ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ನಿರ್ಲಕ್ಷಿಸಿ ತುಳಿಯಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತ್ರಿಭಾಷಾ ಸೂತ್ರವನ್ನು ಒಪ್ಪಿದ ತಪ್ಪಿನ ಪರಿಣಾಮ ಇಂದು ಹಿಂದಿ,ಇಂಗ್ಲಿಷ್ ನಡುವೆ ಸಿಲುಕಿಕೊಂಡಿರುವ ಕನ್ನಡಿಗರ ಮೇಲೆ ಪರಭಾಷಿಕರು ಸವಾರಿ ಮಾಡುತ್ತಿದ್ದಾರೆ. ರಾಜಧಾನಿಯಲ್ಲೇ ಅನ್ಯ ಭಾಷಿಕರು ಕನ್ನಡಿಗರನ್ನು ನಿಯಂತ್ರಣ ಮಾಡುವ ಹಂತಕ್ಕೆ ಬೆಳೆದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದನ್ನು ಸಾಬೀತು ಪಡಿಸಬೇಕಿದೆ ಎಂದರು.

ಕನ್ನಡ ಭಾಷೆಗೆ ಪಂಪನಿಂದ ಕುವೆಂಪುರವರ ಕೊಡುಗೆ ಅನನ್ಯವಾದುದು. ಕನ್ನಡ ಭಾಷೆ ಇಂದು ಎದುರಿಸುತ್ತಿರುವ ಸವಾಲುಗಳ ಪರಿಹಾರಕ್ಕೆ ಎಲ್ಲರೂ ಯತ್ನಿಸಬೇಕಿದೆ. ಸಂವಿಧಾನ ಬದಲಾಗಬಾರದು, ಆದರೆ ಅದರಲ್ಲಿ ಹೇಳಿರುವಂತೆ ರಾಜ್ಯ ಕೇಂದ್ರ 23 ಭಾಷೆಗಳ ಅಭಿವೃದ್ಧಿಗೆ ಸಮಾನವಾದ ಅವಕಾಶವನ್ನು ನೀಡಬೇಕು.

ಆದರೆ ಈ ಪರ ಆಡಳಿತ ವ್ಯವಸ್ಥೆಯ ನಿಟ್ಟಿನಲ್ಲಿ ಹೈದರಾಬಾದ್ ಪ್ರಾಂತ್ಯ, ಹಳೇ ಮೈಸೂರು ಪ್ರಾಂತ್ಯ ಮತ್ತು ಮಂಗಳೂರು ಹೀಗೆ ಭಾಷಾ ವೈವಿಧ್ಯತೆಯಿಂದಾಗಿ ಭಾಷೆಯ ಒಗ್ಗೂಡುವಿಕೆ ಬಹುದೊಡ್ಡ ಸವಾಲಾಗಿದೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದ್ದು, ಎಲ್ಲರೂ ಕೂಡ ಭಾಷಾಭಿಮಾನದ ವಿಷಯದಲ್ಲಿ ನೆರೆಯ ತಮಿಳುನಾಡಿನ ಜನತೆಯನ್ನು ನೋಡಿ ಕಲಿಯಬೇಕಾಗಿದೆ ಎಂದರು.

ಮಂಡ್ಯ ಜಿಲ್ಲೆ ಸ್ವಚ್ಛ ಕನ್ನಡ ಮಾತನಾಡುವ ಶ್ರೇಷ್ಠ ಜಿಲ್ಲೆ. ಜನಪದ ಸಂಸ್ಕೃತಿಯ ತವರು ಜಿಲ್ಲೆಯಾಗಿದೆ. ರಾಗಿ ಪದ,ತತ್ವಪದ,ಸೋಬಾನೆ ಪದಗಳು, ನಾಟಕ, ರಂಗ ಚಟುವಟಿಕೆಗಳು ಎಲ್ಲೂ ಇಲ್ಲದ ವೈಶಿಷ್ಟತೆಯನ್ನು ಮಂಡ್ಯ ಜಿಲ್ಲೆಗೆ ತಂದು ಕೊಟ್ಟಿದೆ. ಮಂಡ್ಯ ಜಿಲ್ಲೆಯ ಭಾಷಾ ಸೊಗಡು ವಿಶಿಷ್ಟವಾಗಿದ್ದು, ಅಚ್ಚ ಕನ್ನಡವನ್ನು ಮಾತನಾಡುವ ರಾಜ್ಯದ ಮೊದಲ ಜಿಲ್ಲೆಯಾಗಿದೆ ಎಂದು ಅಭಿಮಾನದಿಂದ ಹೇಳಿದರು.

ಸಮಾರಂಭದಲ್ಲಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಜಯಮ್ಮ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ನಗರಸಭೆ ಸದಸ್ಯೆ ಸೌಭಾಗ್ಯಮ್ಮ, ಮುನಿಕೃಷ್ಣ, ಮುನಿಗೌಡ ಸೇರಿದಂತೆ ನೂರಾರು ಮಂದಿ ಕನ್ನಡಾಭಿಮಾನಿಗಳು, ಕನ್ನಡ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!