Friday, September 20, 2024

ಪ್ರಾಯೋಗಿಕ ಆವೃತ್ತಿ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

✍️ ಕೃಷ್ಣ ಎಂ.ವಿ, ನಿವೃತ್ತ ಪ್ರಾಂಶುಪಾಲರು, ಮಳವಳ್ಳಿ

ಮಾನವ ಆಹಾರವನ್ನು ಬೇಯಿಸಿ ತಿನ್ನುವುದನ್ನು ಆರಂಭಿಸಿದ ದಿನದಿಂದ ಅಂದರೆ ಬೆಂಕಿ ಕಂಡು ಹಿಡಿದಾಗಿನಿಂದ ಇಂಧನದ ಬಳಕೆ ಆರಂಭವಾಯಿತು ಎನ್ನಬಹುದು. ಇಂದು ಇಂಧನ ಅನೇಕ ರೂಪಗಳಲ್ಲಿ ಬಳಕೆಯಾಗುತ್ತಿದೆ. ಅವು ಘನರೂಪದ ಇಂಧನಗಳಾದ ಮರ, ಕಲ್ಲಿದ್ದಲು, ಇದ್ದಿಲು, ಪೇಪರ್, ಪ್ಯಾರಥಿನ್, ಮೇಣ ಮುಂತಾದವುಗಳು (ದ್ರವ ಇಂಧನಗಳು ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಮೆಥನಾಲ್ ಇತ್ಯಾದಿ ಅನಿಲ ರೂಪದ ಇಂಧನಗಳು ಗ್ಯಾಸೋಲಿನ್, ಸ್ವಾಭಾವಿಕ ಅನಿಲ, ಪ್ರೊಫೈಲ್, ಪೈಂಟ್ ಗಳಿಂದ ಬರುವ ಆವಿ, ಕಲ್ಲಿದ್ದಲಿನ ಅನಿಲ, ಎಲ್ಪಿಜಿ ಇತ್ಯಾದಿ) ಮಾನವ ನಾಗರಿಕನಾಗುತ್ತಿದ್ದಂತೆ ಇಂಧನ ಬಳಕೆ ಹೆಚ್ಚಾಗತೊಡಗಿತ್ತು ಪರಿಣಾಮವಾಗಿ ಹೊಸ ಹೊಸ ಇಂಧನಗಳು ಆವಿಷ್ಕಾರವಾದವು.

ಬೆಂಕಿಯಿಂದ ಜಲ ವಿದ್ಯುತ್ ಮತ್ತು ಸೌರಶಕ್ತಿಯವರೆಗೆ, ಹೆಚ್ಚಿನ ಸಂದರ್ಭಗಳಲ್ಲಿ ಇಂಧನ ದುರ್ಬಳಕೆ ಆಗುತ್ತಿದೆ. ವಿಶೇಷವಾಗಿ ಕೈಗಾರಿಕೀಕರಣ ಹೆಚ್ಚಾದಂತೆ ಇಂಧನದ ವ್ಯಾಪಾರೀಕರಣವಾಗತೊಡಗಿದಂತೆ ಇಂಧನದ ಅತಿ ಹಾಗೂ ಅನಗತ್ಯವಾಗಿ ಬಳಕೆಯಾಗತೊಡಗಿತು. ಇದರ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಅನೇಕ ಏರುಪೇರುಗಳಾಗುತ್ತಿವೆ. ಪ್ರಕೃತಿಯ ಮೇಲೂ ಒತ್ತಡ ಹೆಚ್ಚಾಗತೊಡಗಿದೆ. ಅರಣ್ಯನಾಶ, ಅಂತರ್ಜಲ ಕುಸಿತ, ವಾತಾವರಣ ಕಲುಷಿತತೆ, ನದಿ, ಸಮುದ್ರಗಳ ನೀರಿನ ಮಲಿನತೆ, ಮಣ್ಣಿನ ಫಲವತ್ತತೆ ನಾಶ, ಓಝೋನ್ ಪದರದ ದುರ್ಬಲತೆ, ಮಳೆಯ ಪ್ರಮಾಣದಲ್ಲಿ ಅಸಮತೋಲನ, ಪ್ರವಾಹ, ಸುನಾಮಿ, ಚಂಡಮಾರುತ, ಭೂಕಂಪ ಮುಂತಾದ ವಿಕೋಪಗಳ ಜೊತೆಗೆ ಖನಿಜ ಸಂಪತ್ತಿನ ಶೋಷಣೆ ಹೆಚ್ಚಾಗತೊಡಗಿದೆ.

ಮಾನವ ಕುಲವೇ ಆತಂಕದ ಸ್ಥಿತಿಯಲ್ಲಿ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಇಂಧನಗಳನ್ನು ತ್ಯಜಿಸಿ, ಬದುಕಲು ಸಾಧ್ಯವಿಲ್ಲದ ಸ್ಥಿತಿ ತಲುಪಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ಈ ಇಂಧನಗಳನ್ನು ಹಿತಮಿತವಾಗಿ ಸಮರ್ಪಕವಾಗಿ ಬಳಸಬೇಕಾಗಿರುವುದು ನಮ್ಮ ಮುಂದಿರುವ ಸವಾಲಾಗಿದೆ. ಪ್ರತಿ ಹಂತದಲ್ಲೂ ಇಂಧನದ ಉಳಿತಾಯ ಮಾಡುವ ಪ್ರಯತ್ನ ಮಾಡಬೇಕಿದೆ. ಕಾಳು ಕಾಳು ಸೇರಿದರೆ ಕಣಜ ಎಂಬ ಮಾತಿನಂತೆ ಯಾವುದನ್ನು ನಗಣ್ಯವೆಂದು ಪರಿಗಣಿಸದೆ, ಪ್ರತಿಯೊಂದು ಉಳಿತಾಯ ಮಾಡಬೇಕು. ಸೈಕಲ್ ಬಳಸುವುದು ಅನಿವಾರ್ಯವಾದರೆ ಮಾತ್ರ ಸ್ವಂತ ವಾಹನಗಳನ್ನು ಬಳಸುವುದು. ಉಳಿದಂತೆ ಸಾರ್ವಜನಿಕ ವಾಹನಗಳನ್ನು ಬಳಸಿಕೊಳ್ಳುವುದು. ಸಾಧ್ಯವಾದಷ್ಟು ಕಾಲು ನಡಿಗೆ ಮಾಡುವುದು. ನಿಸರ್ಗಕ್ಕೆ ತೊಂದರೆ ಆಗುವ ಯೋಜನೆಗಳಿಂದ ದೂರವಿರುವುದು. ಹಗಲಲ್ಲಿ ಉರಿಯುವ ಬೀದಿ ದೀಪಗಳನ್ನು ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಗಳು ನಂದಿಸುವುದು ಮತ್ತು ಸಾರ್ವಜನಿಕರು ಕಾಳಜಿ ವಹಿಸುವುದು. ಎಲ್ಲೆಲ್ಲಿ ಇಂಧನ ಪೋಲಾಗುತ್ತದೋ ಅಲ್ಲೆಲ್ಲಾ ಕಟ್ಟುನಿಟ್ಟಾಗಿ ಸೋರಿಕೆ ತಡೆಯುವುದು. ಸೌರ ವಿದ್ಯುತ್, ಜೈವಿಕ ಇಂಧನಗಳನ್ನು ಸುಸ್ಥಿರ ಶಕ್ತಿಗಳು ಅಥವಾ ಪುನರ್ ನವೀಕರಿಸಬಲ್ಲ ಶಕ್ತಿಗಳು (ಸಸ್ಟೈನಬಲ್ ಎನರ್ಜಿ) ಎನ್ನಲಾಗುವುದು. ಇವು ಸಾಂಪ್ರದಾಯಿಕ ಇಂಧನಗಳ ಬಳಕೆಗೆ ಪರ್ಯಾಯವಾಗಬಲ್ಲವು, ನಾವು ಬಳಸುವ ವಿದ್ಯುತ್ ನಲ್ಲಿ ಶೇ.36 ರಿಂದ 40 ರಷ್ಟು ಸೋರಿಕೆಯಾಗುತ್ತದೆ. ಸುಸ್ತಿರ ಶಕ್ತಿಗಳ ಬಳಕೆಯಿಂದ ಈ ಸೋರಿಕೆಯನ್ನು ತಡೆಗಟ್ಟಬಹುದು.

ಹೇಗೆಂದರೆ ಸ್ಥಳೀಯವಾಗಿ ಇಂಧನ ಘಟಕಗಳನ್ನು ಸ್ಥಾಪಿಸಿ ಸಮುದಾಯಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದರಿಂದ ದೂರ ದೂರದಿಂದ ವಿದ್ಯುತ್ತನ್ನು ಸಾಗಿಸುವ ಖರ್ಚು ಹಾಗೂ ಸೋರಿಕೆ ಎರಡನ್ನು ತಡೆಗಟ್ಟಬಹುದು. ಜೈವಿಕ ಇಂಧನ ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಬಹುದು. ತ್ಯಾಜ್ಯ ನಿರ್ವಹಣೆ ಸಮಸ್ಯೆ ನೀಗಿಸಬಹುದು. ಸಗಣಿ, ಮಾನವ ತ್ಯಾಜ್ಯ, ಅಡುಗೆ ಮನೆ ತ್ಯಾಜ್ಯ ಮುಂತಾದ ತ್ಯಾಜ್ಯಗಳನ್ನು ಅಡುಗೆ ಅನಿಲವಾಗಿ ಮಾರ್ಪಡಿಸಿ ಬಳಕೆ ಮಾಡುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡಬಹುದು. ಅರಣ್ಯ ನಾಶ ತಡೆಯಬಹುದು.

ಜೈವಿಕ ಇಂಧನದ ಘಟಕ ಮೊದಲಿಗೆ ಆರಂಭವಾದದ್ದು ಭಾರತದ ಮುಂಬೈಯಲ್ಲಿ. ಅದಕ್ಕೂ ಮೊದಲು ಈ ತಂತ್ರಜ್ಞಾನ ಜರ್ಮನಿಯಲ್ಲಿತ್ತಾದರೂ ಒಂದು ವ್ಯವಸ್ಥಿತ ಘಟಕ ಆರಂಭವಾಗಿದ್ದು ಭಾರತದಲ್ಲಿ. ಆದರೆ ಇಲ್ಲಿ ಯಶಸ್ವಿಯಾಗಲಿಲ್ಲ. ಇದಕ್ಕೆ ಕಾರಣಗಳು, ಹಲವು ಆದರೆ ಈ ತಂತ್ರಜ್ಞಾನವನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿರುವ ದೇಶ ಚೀನಾ. ಭಾರತ ಕೇವಲ ಎಮ್ಮೆ ದನದ ಸಗಣಿಯ ಗೋಬರ್ ಗ್ಯಾಸ್ ಅನ್ನು ನಂಬಿ ಕೂತಿತ್ತು. ಆದರೆ ಚೀನಾ, ಮೀನು ತ್ಯಾಜ್ಯ, ಹಂದಿ ತ್ಯಾಜ್ಯ, ಅಡುಗೆ ಮನೆ ತ್ಯಾಜ್ಯ, ಮಾನವ ತ್ಯಾಜ್ಯ… ಹೀಗೆ ಸುಮಾರು ಏಳು ವಿಧದ ಜೈವಿಕ ಇಂಧನದ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಈ ಹೊಸ ತಂತ್ರಜ್ಞಾನಗಳ ಮೂಲಕ ಸುಸ್ಥಿರ ಇಂಧನಗಳನ್ನು ಸಮರ್ಥವಾಗಿ ಬಳಸುತ್ತಿದೆ.

ಭೂಮಿಯ ಮೇಲೆ ಸುಮಾರು ಶೇಕಡ 33 ರಷ್ಟು ಅರಣ್ಯ ಇರಬೇಕು. ಆದರೆ ಅರಣ್ಯ ಅಷ್ಟು ಪ್ರಮಾಣದಲ್ಲಿ ಇಲ್ಲ. ಕೆಲವು ವರದಿಗಳ ಪ್ರಕಾರ ಶೇಕಡ 31 ರಷ್ಟು ಅರಣ್ಯ ಮಾತ್ರೆ ಇದೆ. ಅಲ್ಲದೇ ದಿನೇ ದಿನೇ ಇದು ಕಡಿಮೆಯಾಗುತ್ತಿದೆ ಭಾರತದಲ್ಲಿ ಅಂತೂ ಅರಣ್ಯ ಪ್ರಮಾಣ ತುಂಬಾ ಕಡಿಮೆ ಇದೆ. ಒಟ್ಟು ಭೂ ಪ್ರದೇಶದ ಶೇಕಡ 24.62 ರಷ್ಟು ಅರಣ್ಯವಿದೆ. ಕರ್ನಾಟಕದಲ್ಲಲಿ ಮತ್ತಷ್ಟು ಶೋಚನಿಯವಾಗಿದ್ದು, ಶೇಕಡ 22.61 ರಷ್ಟು ಅರಣ್ಯವಿದೆ. ಅಂದರೆ ನಾವೀಗ ಅಪಾಯದ ಅಂಚಿನಲ್ಲಿದ್ದೇವೆ.

ಇತ್ತೀಚೆಗೆ ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಎತ್ತಿನಹೊಳೆ ಪರ ಮತ್ತು ವಿರೋಧವಾಗಿ ಹೋರಾಟಗಳು ನಡೆಯುತ್ತಿವೆ. ಮೇಕೆದಾಟು ಯೋಜನೆ, ರಾಜಕೀಯ ಲಾಭ ನಷ್ಟದ ವ್ಯವಹಾರವಾಗಿದೆ. ವಸ್ತುನಿಷ್ಠವಾಗಿ ವೈಜ್ಞಾನಿಕವಾಗಿ ಈ ವಿಚಾರಗಳ ಬಗ್ಗೆ ಅವಲೋಕಿಸಿದಾಗ ಕಂಡು ಬರುವ ಸತ್ಯವೆಂದರೆ, ಕಾಡು ನಾಶ, ಪಕ್ಷಿಗಳು, ಪ್ರಾಣಿಗಳು, ಗಿಡಮೂಲಿಕೆಗಳ ಮೇಲೆ ಅಗಾಧ ಪರಿಣಾಮ ಉಂಟಾಗುತ್ತದೆ. ಅಪಾರ ಪ್ರಮಾಣದ ವಿದ್ಯುತ್ ಬಳಕೆ ಮತ್ತು ಹಣ ಖರ್ಚಾಗುತ್ತದೆ. ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ ಇದು.  ಇದಕ್ಕೆ ಸಮರ್ಪಕವಾಗಿ ಇಂಧನವನ್ನು ಬಳಸದೆ, ಅರಣ್ಯ ನಾಶ ಮಾಡದೆ, ಅರಣ್ಯ ಅಭಿವೃದ್ಧಿಪಡಿಸುತ್ತಲೇ ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಬಹುದು.

ಒಂದನೆಯದು ಕೆರೆಗಳಲ್ಲಿ ತುಂಬಿರುವ ಹೂಳು ತೆಗೆಸಿ, ಮಳೆಗಾಲದಲ್ಲಿ ನೀರು ಶೇಖರಣೆ ಮಾಡುವುದು. ಸಾವಿರಾರು ಕೆರೆಗಳನ್ನು ಪುನರ್ಜೀವಗೊಳಿಸಿ ವ್ಯವಸ್ಥಿತವಾಗಿ ಬಳಸುವಂತೆ ಮಾಡುವುದು. ಈ ವರ್ಷ ಪೂರ್ತಿ ಸುರಿದ ಮಳೆ ಕೆರೆಗಳಲ್ಲಿ ನಿಲ್ಲದೆ ಸಮುದ್ರದ ಪಾಲಾಯಿತು. ಜಾಣತನದಿಂದ ಸಂಗ್ರಹಿಸಿ ಇಟ್ಟಿದ್ದರೆ ವರ್ಷ ಪೂರ್ತಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿತ್ತು. ಮತ್ತೊಂದು ಮಳೆ ಕೊಯ್ಲಿನ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ನಾಲ್ಕು ಸದಸ್ಯರು ಇರುವ ಕುಟುಂಬಕ್ಕೆ ದಿನಕ್ಕೆ ಕುಡಿಯಲು ಮತ್ತು ಅಡುಗೆಗೆ ಸುಮಾರು 30 ಲೀಟರ್ ನೀರು ಬೇಕಾಗಬಹುದು. ಅಂದರೆ ತಲಾ ಆರು ಲೀಟರ್ ಎಂದುಕೊಂಡರೆ ತಿಂಗಳಿಗೆ 900 ಲೀಟರ್ ನೀರಿನ ಅಗತ್ಯವಿದೆ.

ವರ್ಷಕ್ಕೆ 10,800 ಲೀಟರ್ ನೀರು ಬೇಕಾಗುವುದು. 9×8 ಅಡಿ ಅಗಲ, 14 ಅಡಿ ಉದ್ದ ಮತ್ತು 9 ಅಡಿ ಆಳದ ತೊಟ್ಟಿಯಲ್ಲಿ ಸುಮಾರು 21,000 ಲೀಟರ್ ನೀರು ಸಂಗ್ರಹವಾಗುವುದು, ಇದನ್ನು ಕೇವಲ ಐದಾರು ಮಳೆಯಲ್ಲಿಯೇ ಸಂಗ್ರಹಿಸಬಹುದು. ಈ ನೀರು ಆ ಕುಟುಂಬಕ್ಕೆ ಎರಡು ವರ್ಷಕ್ಕೆ ಬಳಕೆಗೆ ಬರುತ್ತದೆ. ಇದಕ್ಕೆ ತಗಲುವ ಖರ್ಚು ಎರಡರಿಂದ ಎರಡುವರೆ ಲಕ್ಷ ಮಾತ್ರ. ಕೋಲಾರ ಸುತ್ತಮುತ್ತಲಿನ ಜಿಲ್ಲೆಗಳಿಗೆ ನೀರು ಪೂರೈಸಲು ಎತ್ತಿನಹೊಳೆ ಜಲಾಶಯಕ್ಕೆ ಖರ್ಚು ಮಾಡುವ ಹಣದಲ್ಲಿ ಶೇಕಡ 10 ರಷ್ಟು ಹಣವನ್ನು ಬಳಸಿದರೆ ಸಾಕು. ಇದರಿಂದ ಅಪಾರ ಪ್ರಮಾಣದ ಅರಣ್ಯ ನಾಶವನ್ನು, ಭೂಮಿ ಕೊರೆದು ಪೈಪುಗಳನ್ನು ಹೂತುವುದನ್ನು ತಪ್ಪಿಸಬಹುದು. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಇಷ್ಟು ಪ್ರಮಾಣದ ನೀರು ಸಂಗ್ರಹಿಸಲು ಮತ್ತು ಮರು ಬಳಸಲು ಕಿಂಚಿತ್ತು ಇಂಧನ ಬಳಸಬೇಕಿಲ್ಲ. ಮನೆ ಚಾವಣಿಯಿಂದ ತೊಟ್ಟಿಯಲ್ಲಿ ತುಂಬಿರುವ ನೀರನ್ನು ಕೈ ಪಂಪಿನಿಂದ ಎತ್ತಿಕೊಳ್ಳಬಹುದು. ಇಂಧನ ಉಳಿತಾಯ ಮಾತ್ರವಲ್ಲ, ಪ್ಲೋರೈಡ್  ಮುಕ್ತ ಶುದ್ಧ ನೀರು ಕುಡಿಯಬಹುದು. ಇದರಿಂದ ಶುದ್ಧೀಕರಣ ಘಟಕಗಳಲ್ಲಿ ಬಳಸುವ ವಿದ್ಯುತ್ ಮತ್ತು ಪೋಲಾಗುವ ನೀರು ಎರಡನ್ನು ಉಳಿಸಬಹುದು.

ಸುಮಾರು 100 ಕುಟುಂಬಗಳಿರುವ ಒಂದು ಗ್ರಾಮಕ್ಕೆ ಪ್ರತಿ ಕುಟುಂಬಕ್ಕೆ 30 ಲೀಟರ್ ನೀರು ಸರಬರಾಜು ಮಾಡಲು ಅಪಾರ ಹಣ ಖರ್ಚಾಗುತ್ತದೆ. ಕೊಳವೆ ಕೊರೆಯಲು, ನೀರು ಎತ್ತುವ ಮಿಷನ್ ಗಳಿಗೆ, ನೀರು ಸಂಗ್ರಹಿಸುವ ಟ್ಯಾಂಕುಗಳನ್ನು ಕಟ್ಟಲು, ಟ್ಯಾಂಕಿನಿಂದ ಮನೆ ಮನೆಗೆ ನೀರು ತಲುಪಿಸಲು ಪೈಪುಗಳು, ನಲ್ಲಿಗಳು ಮುಂತಾದ ಸಲಕರಣೆಗಳಿಗೆ ಕೋಟ್ಯಂತರ ರೂಪಾಯಿಗಳು ಪೋಲಾಗುತ್ತದೆ. ಇದನ್ನು ಮಳೆ ಕೊಯ್ಲಿನಿಂದ ತಪ್ಪಿಸಬಹುದು. ಇದೇ ರೀತಿ ರೈತರು ಸಹ ತಮ್ಮ ಜಮೀನಿನಲ್ಲಿ ಮಳೆ ಕೊಯ್ಲಿನ ಕೊಟ್ಟಿಗೆಗಳಲ್ಲಿ ನೀರು ಸಂಗ್ರಹಿಸಿ ಇಟ್ಟುಕೊಂಡು ಬೆಳೆ ತೆಗೆಯಬಹುದು. 25x25x25 ಅಡಿ ಉದ್ದ ಅಗಲ ಮತ್ತು ಆಳದ 156 ಚದರಡಿ ವಿಸ್ತೀರ್ಣದ ತೊಟ್ಟಿಯನ್ನು ಕಟ್ಟಿಸಲು ತಗಲುವ ಖರ್ಚು ಮೂರರಿಂದ ನಾಲ್ಕು ಲಕ್ಷ ಮಾತ್ರ. ಇಲ್ಲಿ ಸಂಗ್ರಹವಾಗುವ ಎರಡರಿಂದ ಮೂರು ಲಕ್ಷ ಲೀಟರ್ ನೀರಿನಿಂದ ಸುಮಾರು ಮೂರು ಎಕರೆಗಳಿಗೆ ವರ್ಷ ಪೂರ್ತಿ ನೀರುಣಿಸಿ ಬೆಳೆ ತೆಗೆಯಬಹುದು. ಇಲ್ಲಿಯೂ ಇಂಧನ ಬಳಕೆ ಕಡಿಮೆಯಾಗಿ ಮಾನವ ಶಕ್ತಿಯ ಸದ್ಬಳಕೆಯಾಗುತ್ತದೆ. ಅಂತರ್ಜಲದ ಶೋಷಣೆ ತಪ್ಪುತ್ತದೆ. ಸಹಜ ಕೃಷಿಯ ಮೂಲಕ ಫಸಲು ತೆಗೆಯುವುದರಿಂದ ಪೌಷ್ಠಿಕ ಆಹಾರ ಸಿಗುತ್ತದೆ. ಪರಿಸರ ರಕ್ಷಣೆಯ ಜೊತೆಗೆ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿ ಆತ್ಮಹತ್ಯೆಯು ನಿಲ್ಲಬಹುದು.

ಸೌರವಿದ್ಯುತ್ ಕೂಡ ಒಂದು ಪುನರುತ್ಪಾದಿಸಬಲ್ಲ ಶಕ್ತಿಯಾಗಿದ್ದು, ಇದನ್ನು ಸಮರ್ಪಕವಾಗಿ ಬಳಸುವ ಮೂಲಕ ನೈಸರ್ಗಿಕ ಇಂಧನಗಳ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಆದರೆ ಇದೆಲ್ಲದರ ಬಳಕೆ ಮಾಡುವಲ್ಲಿ ಸರ್ಕಾರಗಳು ಮತ್ತು ಜನಸಾಮಾನ್ಯರ ಭಾಗವಹಿಸುವಿಕೆ ಬಹಳ ಮುಖ್ಯ. ಒಂದು ಸದೃಢ ದೇಶ ಕಟ್ಟಬೇಕೆಂಬ ಇಚ್ಛಾಶಕ್ತಿ ಇರುವ ಸರ್ಕಾರ, ಇದನ್ನು ಸವಾಲಾಗಿ ಸ್ವೀಕರಿಸಿ ಕಾರ್ಯರೂಪಕ್ಕೆ ತರಲು ಶ್ರಮಿಸಬೇಕು. ದೊಡ್ಡ ದೊಡ್ಡ ಯೋಜನೆಗಳಿಗೆ ಅಪಾರ ಪ್ರಮಾಣದ ಹಣ ಪೋಲು ಮಾಡುವ ಬದಲು ಮಳೆ ನೀರು ಸಂಗ್ರಹ ಮಾಡುವವರಿಗೆ ಸೌರ ವಿದ್ಯುತ್ ಬಳಸುವವರಿಗೆ, ರಾಸಾಯನಿಕ ಮುಕ್ತ ಸಹಜ ಬೇಸಾಯ ಮಾಡುವವರಿಗೆ ದೊಡ್ಡ ಪ್ರಮಾಣದ ಸಹಾಯಧನ ಮತ್ತು ಸಹಕಾರ ನೀಡಬೇಕು. ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಎಚ್ಚರ ವಹಿಸಬೇಕು. ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಜಾಗೃತಗೊಳಿಸಬೇಕು. ಆ ಮೂಲಕ ಅವರು ಪೂರ್ಣ ಪ್ರಮಾಣದಲ್ಲಿ ಭಾಗವಹಿಸುವಂತಾಗಬೇಕು. ಆಗ ಭವಿಷ್ಯದ ಭಾರತ ವಿಶ್ವ ಮಾದರಿಯಾಗುತ್ತದೆ. ಜಗತ್ತು ಮಲಿನ ಮುಕ್ತವಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!