ಇಂದು ಮಾನವನ ದುರಾಸೆಯಿಂದ ಪರಿಸರ ದೊಡ್ಡ ಪ್ರಮಾಣದಲ್ಲಿ ಹಾಳಾಗುತ್ತಿದೆ. ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕಾದರೆ ಉತ್ತಮ ಪರಿಸರ ನಿರ್ಮಾಣ ಮಾಡುವುದು ಅನಿವಾರ್ಯವಾಗಿದ್ದು, ಪರಿಸರ ರಕ್ಷಣೆ ನಮ್ಮ ಮುಖ್ಯ ಹೊಣೆಯಾಗಬೇಕೆಂದು ಎಂದು ಪುರಸಭೆ ಉಪಾಧ್ಯಕ್ಷ ಕೃಷ್ಣಪ್ಪ ತಿಳಿಸಿದರು.
ಶ್ರೀರಂಗಪಟ್ಟಣ ಪುರಸಭಾ ವೃತ್ತದ ಬಳಿ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಪರಿಸರವನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ನಮ್ಮ ಮೇಲಿದ್ದು, ಮುಂದಿನ ತಲೆಮಾರಿಗೆ ಉತ್ತಮವಾದ ನೆಲ, ಜಲ,ವಾತಾವರಣ ನೀಡುವ ನಿಟ್ಟಿನಲ್ಲಿ ಬೀದಿ ನಾಟಕಗಳಿಂದ ಜಾಗೃತಿ ಮೂಡಿಸುವುದು ಅನಿವಾರ್ಯ ಎಂದರು.
ಓಂ ಶ್ರೀನಿಕೇತನ ಸ್ಕೂಲ್ ಹಾಗೂ ಕಾಲೇಜು ಮತ್ತು ಸಹ್ಯಾದ್ರಿ ಕಲಾ ತಂಡ ಶಿವಮೊಗ್ಗ ಇವರ ಸಹಯೋಗದಲ್ಲಿ ಬೇಸಿಗೆ ರಂಗ ಶಿಬಿರ, ಅಜ್ಜಿ ಅಂಗಳ, ಅಜ್ಜನ ಜಗಲಿ ಎಂಬ ತರಬೇತಿ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ನೀನಾಸಂನ ಸಂಪನ್ಮೂಲ ವ್ಯಕ್ತಿಗಳಾದ ಸುಮಂತ್, ವೀರೂ ಹಾಗೂ ಕುಶ ಇವರು ಮಕ್ಕಳಿಗೆ ನಾಟಕ ತರಬೇತಿಯನ್ನು ನೀಡಲಿದ್ದಾರೆ.
ಮಕ್ಕಳಿಂದ ಪರಿಸರದ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕಗಳು ಪ್ರದರ್ಶನವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಮಂಜುರಾಮು, ಕೂಡಲಕುಪ್ಪೆ ಗೋಪಾಲ್ ಗೌಡ, ಶಗುಪ್ತಾ, ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು.