Thursday, September 19, 2024

ಪ್ರಾಯೋಗಿಕ ಆವೃತ್ತಿ

EWS ಮೀಸಲಾತಿ : ಶೋಷಿತ-ಹಿಂದುಳಿದವರಿಗೆ ಮಾಡಿದ ವಂಚನೆ

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಬಡವರಿಗೆ ನೀಡಿರುವ ಶೇ.10ರ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತು ಹಿಡಿದಿರುವುದಕ್ಕೆ ಮಂಡ್ಯ ಜಿಲ್ಲೆ ವಿವಿಧ ಸಂಘಟನೆಗಳ ಮುಖಂಡರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದು, ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ಮಾಡಿದ ದ್ರೋಹವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶೋಷಿತ-ಹಿಂದುಳಿದ ಜಾತಿಗಳಿಗೆ ಮಾಡಿದ ವಂಚನೆ

ಈ ದೇಶದಲ್ಲಿ ಬಹು ಸಂಖ್ಯಾತರಾಗಿರುವ ಶೋಷಿತರು ಹಾಗೂ ಹಿಂದುಳಿದವರಿಗೆ ಮಾಡಿದ ವಂಚನೆ.

ಯಾರು ಈ ಮೀಸಲಾತಿ ಬಗ್ಗೆ ಧ್ವನಿ ಎತ್ತಬೇಕಾಗಿತ್ತೋ ಅವರಿಗೆ ಈ ಬಗ್ಗೆ ಅರಿವೇ ಇಲ್ಲವಾಗಿದೆ. ನನ್ನ ಪ್ರಕಾರ  ಈ ತೀರ್ಪು ಶೋಷಿತರು ಹಾಗೂ ಹಿಂದುಳಿದವರ ಶವದ ಪಟ್ಟಿಗೆ ಹೊಡೆದ ಕೊನೆಯ ಮೊಳೆಯಾಗಿದೆ. ಇದರ ವಿರುದ್ಧ ಜನಾಂದೋಲನವನ್ನು ರೂಪಸುವುದಷ್ಟೆ ನಮಗೆ ಉಳಿದಿರುವ ಕೆಲಸ, ಆ ನಿಟ್ಟಿನಲ್ಲಿ ಮುಂದೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಸುಪ್ರೀಂ ತೀರ್ಪನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಅವರ ಅಭಿಪ್ರಾಯವಷ್ಟೆ, ಒಂದು ರಾಜಕೀಯ ಪಕ್ಷದ ನಾಯಕರಾಗಿ, ಅವರು ಮಾತನಾಡಿರಬಹುದು ಎಂದರು.

  • ಗುರುಪ್ರಸಾದ್ ಕೆರಗೋಡು
  • ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ

ಜೀವ ವಿರೋಧಿ ಆರ್ಯ ಕುಲದ ಬ್ರಾಹ್ಮಣ್ಯದ ಸಂರಕ್ಷಣೆಯ ಹುನ್ನಾರ

ಮನುಸ್ಮೃತಿ ಪ್ರೇರಿತ ಆರ್.ಎಸ್.ಎಸ್ ಸಂಘ ಪರಿವಾರದ ಬಿಜೆಪಿ ಸರ್ಕಾರದ ಪ್ರಧಾನಿ ಮೋದಿ ಸರ್ಕಾರ ಭಾರತ ಸಂವಿಧಾನವನ್ನು ಜಾರಿ ಮಾಡಲೊಪ್ಪದ ಸರ್ಕಾರವಾಗಿದೆ.

ಜೀವ ವಿರೋಧಿ ಆರ್ಯ ಕುಲದ ಬ್ರಾಹ್ಮಣ್ಯದ ಸಂರಕ್ಷಣೆಯ ಹುನ್ನಾರವೇ ಆರ್ಥಿಕ ದುರ್ಬಲತೆಯ ಮಾನದಂಡದ ಮೀಸಲಾತಿ ನೀತಿ. ವಾಸ್ತವವಾಗಿ ಸರ್ವ ಜಾತಿಗಳ ಪ್ರಾತಿನಿಧ್ಯದ ಸಲುವಾಗಿ ಜಾತಿ ಆಧಾರಿತ ವ್ಯವಸ್ಥೆಯ ಭಾರತದಲ್ಲಿ ಜಾತಿ ಆಧಾರಿತ ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ.

ಆದರೆ ಪ್ರಧಾನಿ ಮೋದಿ ಸರ್ಕಾರ, ಇದರ ವಿರೋಧಿಯಾಗಿರುವ ಕಾರಣ EWS ಆರ್ಥಿಕ ದುರ್ಬಲ ವರ್ಗದ ನೆಪದಲ್ಲಿ ಬ್ರಾಹ್ಮಣ, ಬನಿಯಾ ಠಾಕೂರ್ಸ್ ಗಳಿಗೆ ಮತ್ತಷ್ಟು ಉತ್ತೇಜನ ನೀಡಿ, ಶೇ.95ರಷ್ಟಿರುವ ಅಬ್ರಾಹ್ಮಣ, ಶೂದ್ರಾತಿಶೂದ್ರರ ವಿರೋಧಿಯಾದ EWS ನೀತಿಯನ್ನು ಕದಸಂಸ ತೀವ್ರವಾಗಿ ಖಂಡಿಸುತ್ತದೆ.

ಇಂತಹ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆ ಸುಪ್ರೀಂಕೋರ್ಟ್ ಕೂಡ ಅಸ್ತು ಎಂದಿರುವುದು ವಿಷಾದಕರ ಸಂಗತಿ. ಈ ಅನೀತಿಯನ್ನು ಜನತಾ ನ್ಯಾಯಾಲಯದಿಂದಲೇ…ರದ್ದುಪಡಿಸಲು ಜನಾಂದೋಲನವಾಗಬೇಕು. ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಕದಸಂಸ ಅಭಿಪ್ರಾಯ ಪಡುತ್ತದೆ.

  • ವೆಂಕಟಗಿರಿಯಯ್ಯ
  • ರಾಜ್ಯಾಧ್ಯಕ್ಷರು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಂಡ್ಯ

ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ಮೆಲ್ಜಾತಿಯ ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ

ತಾರತಮ್ಯ, ದಮನ ಹಾಗೂ ಅವಕಾಶ ನಿರಾಕರಣೆ ಮತ್ತು ಸಾಮಾಜಿಕ ಅಸಮಾನತೆಯ ಆಧಾರದಲ್ಲಿ ಸಂವಿಧಾನವು ಮೀಸಲಾತಿ ಎಂಬ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ರೂಪಿಸಿದೆ.

ಮೊದಲು ಮೀಸಲಾತಿಯು ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ಜಾರಿಗೆ ಬಂದರೂ ಆನಂತರ ಹಿಂದುಳಿದ ವರ್ಗಗಳು ,ಮಹಿಳೆಯರು, ಅಂಗವಿಕಲರು ,ತೃತೀಯ ಲಿಂಗಿಗಳು ಹೀಗೆ ವಿಸ್ತರಿಸುತ್ತಾ ಬರಲಾಗಿದೆ.

ಮೀಸಲಾತಿಯ ಸಂವಿಧಾನ ನಿರೂಪಣೆಗಳಲ್ಲಿ ಅವಕಾಶ ಇಲ್ಲದಿದ್ದರೂ ಮೆಲ್ಜಾತಿಯಲ್ಲಿ ಇರುವ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ವಿಸ್ತರಣೆ ಈಗ ಸುಪ್ರೀಂ ಕೋರ್ಟ್ ನಿಂದ ಮನ್ನಣೆ ಪಡೆದಿದೆ.

ಆದರೆ ಈ ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಜಾರಿ ಮಾಡಲು ಅಳವಡಿಸಿಕೊಂಡಿರುವ ಮಾನದಂಡಗಳು ಆರ್ಥಿಕ ವಾಗಿ ಹಿಂದುಳಿದ ಮೇಲ್ಜಾತಿ ಬಡವರ ಹೆಸರಿನಲ್ಲಿ ಮೇಲ್ಜಾತಿಗಳ ಜಾತಿ ಹಿರಿಮೆಯನ್ನು ಪುನರ್ ಸ್ಥಾಪಿಸುವ ಕೇಂದ್ರ ಸರ್ಕಾರದ ದುರುದ್ದೇಶವನ್ನು ಬಯಲುಗೊಳಿಸಿದೆ.

  • ಟಿ.ಯಶವಂತ
  • ರಾಜ್ಯ ಪ್ರಧಾನ ಕಾರ್ಯದರ್ಶಿ
  • ಕರ್ನಾಟಕ ಪ್ರಾಂತ ರೈತ ಸಂಘ (KPRS)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!