Thursday, September 19, 2024

ಪ್ರಾಯೋಗಿಕ ಆವೃತ್ತಿ

ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದೆ : ಎನ್. ಮಹೇಶ್

ಬಿಜೆಪಿ ಹಾಗೂ ಬಿಎಸ್ಪಿ ತತ್ವ ಸಿದ್ದಾಂತಗಳಲ್ಲಿ ಸಾಮ್ಯತೆ ಇದ್ದು, ಕ್ಷೇತ್ರದ ಮತ್ತು ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.

ಮಂಡ್ಯದ ಗುರುರಾಜ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಆಯೋಜಿಸಿದ್ದ ಮಾಜಿ ಸಚಿವ, ಶಾಸಕ ಎನ್.ಮಹೇಶ್ ಅವರ ಅಭಿಮಾನಿಗಳು ಮತ್ತು ಬೆಂಗಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

೨೦ ವರ್ಷಗಳ ಕಾಲ ಬಹುಜನ ಸಮಾಜ ಪಕ್ಷದಲ್ಲಿ ನನ್ನ ಸರ್ವಸ್ವವನ್ನೂ ಧಾರೆ ಎರೆದು ಸಂಘಟನೆ ಮಾಡಿದ್ದೆ. ಆದರೆ ಆ ಪಕ್ಷದಲ್ಲಿ ಕೆಲವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಪಕ್ಷದಿಂದಲೇ ಉಚ್ಚಾಟನೆ ಮಾಡಿಸಿದರು. ಹೀಗಾಗಿ ನಾನು ಬಿಜೆಪಿ ಸೇರ ಬೇಕಾಯಿತು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಪರಿಶಿಷ್ಟ ಜಾತಿ ಹಾಗೂ ವರ್ಗದವರ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆಗಳು ಹಾಗೂ ಅಂಬೇಡ್ಕರ್ ಅವರ ಪಂಚತೀರ್ಥ ಅಭಿವೃದ್ದಿ ಪಡಿಸಿದ ಕಾರಣಕ್ಕಾಗಿ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನದುದ್ದಕ್ಕೂ ಕಿರುಕುಳ ಅಪಮಾನ ಮಾಡಿದ ಕಾಂಗ್ರೆಸ್‌ಗೆ ನಾನು ಹೋಗಬೇಕಾ ಅಥವಾ ವಿಶ್ವ ಮಟ್ಟದಲ್ಲಿ ಅಂಬೇಡ್ಕರ್ ಅವರಿಗೆ ಗೌರವ ತಂದು ಕೊಟ್ಟ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಹೋಗಿದ್ದು ಸರಿಯಲ್ಲವೇ ಎಂದು ಬೆಂಬಲಿಗರಿಗೆ ಪ್ರಶ್ನಿಸಿದರು.

ಕುಮಾರಸ್ವಾಮಿ ಸರ್ಕಾರದ ಪತನವಾದ ಐದೇ ನಿಮಿಷದಲ್ಲಿ ನನ್ನನ್ನು ಬಿಎಸ್‌ಪಿಯಿಂದ ಉಚ್ಚಾಟನೆ ಮಾಡಲಾಯಿತು. ತಕ್ಷಣದಲ್ಲಿಯೇ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮಾಯಾವತಿ ಅವರು ನನ್ನನ್ನು ಮತ್ತೆ ಪಕ್ಷಕ್ಕೆ ಬರಮಾಡಿ ಕೊಳ್ಳುತ್ತಾರೆ ಎಂಬ ಆಶಾಭಾವನೆಯಿಂದ ಕಾದು ಕುಳಿತೆ.ಆದರೆ ಅವರು ಕರೆಯಲೇ ಇಲ್ಲ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ನನ್ನನ್ನು ಬಹಳ ಗೌರವಯುತವಾಗಿ ನೋಡಿಕೊಂಡಿತು ಎಂದರು.

ಬಿಎಸ್ಪಿಯ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಹೇಳಿಕೆ ನೀಡುತ್ತಿದ್ದಾರೆ. ಇಂಥ ಯಾವುದೇ ವಿಚಾರಗಳಿಗೆ ನನ್ನ ಬೆಂಬಲಿಗರು ಹೆದರಬಾರದು ಎಂದರು.

ಕಾನ್ಶಿರಾಂಜೀ ಅವರ ವಿಚಾರಧಾರೆಗಳು ನನ್ನ ರಕ್ತದ ಕಣಕಣದಲ್ಲಿವೆ. ನಮ್ಮ ಮೆದುಳಿನಲ್ಲಿ ಡಾ.ಬಾಬಾ ಸಾಹೇಬರ ಆಶಯಗಳಿವೆ. ಇವುಗಳ ಜಾರಿಗಾಗಿ ಜೀವವಿರುವವರೆಗೂ ಹೋರಾಡುತ್ತೇನೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿರುವ ಎನ್.ಮಹೇಶ್ ಅವರ ಬೆಂಬಲಿಗರು ಬಿಜೆಪಿ ಸೇರ್ಪಡೆಗೊಂಡು ತತ್ವ ಸಿದ್ದಾಂತಗಳ ಅನುಸಾರ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇವೆ ಎಂದು ಪ್ರಮಾಣ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ವಿಜಯಕುಮಾರ್, ಮಾಜಿ ಶಾಸಕ ನಂಜುಂಡ ಸ್ವಾಮಿ, ಎಸ್ಸಿ ಮೋರ್ಚಾ ಕಾರ್ಯದರ್ಶಿ ಪರಮಾನಂದ, ಮುಖಂಡರಾದ ಡಾ.ಸಿದ್ದರಾಮಯ್ಯ, ಚಂದಗಾಲು ಶಿವಣ್ಣ, ಮೈಶುಗರ್ ಅಧ್ಯಕ್ಷ ಶಿವಲಿಂಗೇಗೌಡ, ವೆಂಕಟರಾಜು, ಎಚ್.ಆರ್.ಅರವಿಂದ್, ಯಮದೂರು ಸಿದ್ದರಾಜು, ಶಂಕರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!