Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಚಿವ ಅಶ್ವಥ್ ನಾರಾಯಣ್ ಸಹೋದರನ ಬಂಧನಕ್ಕೆ ಆಗ್ರಹ

ಪಿಎಸ್ಐ ನೇಮಕಾತಿ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಸಹೋದರನ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಹಗರಣದಲ್ಲಿ ದಿನನಿತ್ಯ ಒಬ್ಬೊಬ್ಬರ ಬಂಧನವಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರೀಕ್ಷಾ ಅಕ್ರಮಗಳು ಹೇಗೆ ನಡೆಯುತ್ತಿದೆ ಎಂಬುದಕ್ಕೆ ಈಗ ಸಾಕ್ಷಿಯಾಗಿ ಸಚಿವ ಅಶ್ವಥ್ ನಾರಾಯಣ್ ಸಹೋದರನ ಹೆಸರು ಕೇಳಿ ಬಂದಿದೆ.

ಮಾಗಡಿ ತಾಲೂಕಿನ ಕುಂದೂರು ಹೋಬಳಿಯ ಮುರೂರು ಗ್ರಾಮದ ವಿದ್ಯಾರ್ಥಿ ದರ್ಶನ್ ಸಿಐಡಿ ವಿಚಾರಣೆಯ ಸಂದರ್ಭದಲ್ಲಿ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸಹೋದರ ಕೈಗೆ ಹಣ ನೀಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಆದರೆ ಸಿಐಡಿ ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ಮಾಡದೆ ದರ್ಶನ್ ಎಂಬ ವಿದ್ಯಾರ್ಥಿಯನ್ನು ಬಿಟ್ಟು ಕಳಿಸಿದ್ದಾರೆ.ಅಲ್ಲದೆ ಸಚಿವರ ಸಹೋದರನ ಬಗ್ಗೆ ಚಕಾರ ಎತ್ತುತ್ತಿಲ್ಲ.

ಕೂಡಲೇ ಸರ್ಕಾರ ಸಚಿವರ ಸಹೋದರನ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದರು. ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಸಹೋದರನ ಪಾತ್ರವಿರುವುದರಿಂದ ಬಸವರಾಜ ಬೊಮ್ಮಾಯಿ ಸಚಿವರಿಂದ ರಾಜೀನಾಮೆ ಪಡೆದು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ನೇಮಕಾತಿ ಹಗರಣದ ಸಂಬಂಧ ತಮ್ಮಲ್ಲಿರುವ ಸಂಪೂರ್ಣ ಸಾಕ್ಷ್ಯವನ್ನು ಕೊಡಿ ಎಂದು ಎರಡು ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು ಪ್ರಿಯಾಂಕ ಖರ್ಗೆ ತಮ್ಮಲ್ಲಿರುವ ಸಾಕ್ಷ್ಯವನ್ನು ನೀಡಿ ವಿಚಾರಣೆಗೆ ಸಹಕರಿಸಬೇಕು, ಅವರು ವಿಚಾರಣೆಗೆ ಹೋಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಚಿನಕುರುಳಿ ರಮೇಶ್, ಅಜ್ಜಹಳ್ಳಿ ರಾಮಕೃಷ್ಣ ಸಿ.ಎಂ.ದ್ಯಾವಪ್ಪ, ಕೊತ್ತತ್ತಿ ರಾಜು,ಸಾತನೂರು ಕೃಷ್ಣ ಉಪಸ್ಥಿತರಿದ್ದರು.

ಇದನ್ನು ಓದಿ: ಬಸವೇಶ್ವರ ಜಯಂತಿ ಒಂದು ವರ್ಗಕ್ಕೆ ಸೀಮಿತ ಮಾಡಬೇಡಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!