Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ

ದೇಶದಲ್ಲಿ ಎನ್ ಡಿ ಎ ಸರಕಾರ ಅಸ್ತಿತ್ವಕ್ಕೆ ಬಂದು ಹತ್ತು ವರ್ಷಗಳಾಗಿದ್ದು, ಎರಡು ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ, ಡಾಕ್ಟರ್ ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆಗೆ ಕಾನೂನು ರೂಪಿಸಲಾಗುವುದೆಂದು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿ, ಅದನ್ನು ಈಡೇರಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಖಂಡಿಸಿ ವಿವಿಧ ಜನಪರ ಸಂಘಟನೆಗಳು ಮಂಡ್ಯದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಯುಕ್ತ ಹೋರಾಟ ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಶ್ರಯದಲ್ಲಿ ಮಂಡ್ಯನಗರದ ಸಿಲ್ವರ್ ಜೂಬಿಲಿ ಪಾರ್ಕ್ ನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ರವಾನಿಸಿದರು.

ಕೇಂದ್ರ ಸರ್ಕಾರ ಆಹಾರ, ಆರೋಗ್ಯ, ಶಿಕ್ಷಣದ ಅನುದಾನ ಕಡಿತ ಮಾಡಿದ್ದಲ್ಲದೆ ಆರೋಗ್ಯ ಮತ್ತು ಶಿಕ್ಷಣವನ್ನು ಖಾಸಗೀಕರಣ ಮಾಡಿ ಜನತೆಗೆ 2007 ಕ್ಯಾಲೋರಿ ಆಹಾರ ಸಿಗದಂತೆ ಮಾಡಿದ ಪರಿಣಾಮ ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ಕುಸಿದಿದೆ, ಆರ್ಥಿಕ ಬಿಕಟ್ಟು ಸುಧಾರಿಸಿದೆ ಎಂದಾದರೆ ದೇಶದಲ್ಲಿ ಶೇ 42,3 ರಷ್ಟು ನಿರುದ್ಯೋಗ ಏಕಿದೆ, ಶೇ 60ರಷ್ಟು ಗುತ್ತಿಗೆ -ಹೊರಗುತ್ತಿಗೆ ಹುದ್ದೆಗಳನ್ನು ಏಕೆ ಸೃಷ್ಟಿಸುತ್ತಿದೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯ, ಒಕ್ಕೂಟ ರಚನೆ ಮೇಲಿನ ಆಕ್ರಮಣ ಒಳ್ಳೆಯ ಬೆಳವಣಿಗೆ ಅಲ್ಲ, ಧರ್ಮನಿರಪೇಕ್ಷ, ಪ್ರಜಾಪ್ರಭುತ್ವ, ಗಣತಂತ್ರದ ಸಂವಿಧಾನ ರಕ್ಷಣೆಗೆ ಮುಂದಾಗಬೇಕು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರು ಬದುಕುವ ನೀತಿ ಜಾರಿಗೊಳಿಸಬೇಕು, ರೈಲ್ವೆ,ವಿದ್ಯುತ್ ಸೇರಿ ಸಾರ್ವಜನಿಕ ಕ್ಷೇತ್ರಗಳ ರಾಸಾಯೀಕರಣ ಕೈಬಿಡಬೇಕು, ಸಾರ್ವಜನಿಕ ಕ್ಷೇತ್ರದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.

ಡಾ.ಸ್ವಾಮಿನಾಥನ್ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸಬೇಕು, ಕೃಷಿ ಕಾರ್ಮಿಕರ ಸಮಗ್ರ ಕಲ್ಯಾಣಕ್ಕೆ ಯೋಜನೆ ಜಾರಿಗೊಳಿಸಬೇಕು, ನರೇಗಾ ಕೆಲಸದ ದಿನವನ್ನು 200 ದಿನಕ್ಕೆ ಹೆಚ್ಚಿಸಿ ಪ್ರತಿ ದಿನಕ್ಕೆ 600 ರೂ ಕೂಲಿ ನಿಗದಿ ಮಾಡಿ ಬಯೋಮೆಟ್ರಿಕ್ ಪದ್ಧತಿಯನ್ನು ಕೈಬಿಡಬೇಕು, ಜಿಎಸ್‌ಟಿ ಪಾಲನ್ನು ರಾಜ್ಯಗಳಿಗೆ ನೀಡುವ ಮೂಲಕ ಒಕ್ಕೂಟ ವ್ಯವಸ್ಥೆ ಬಲಪಡಿಸಬೇಕು ಎಂದು ಆಗ್ರಹಿಸಿದರು.

ಸಂವಿಧಾನದ ಆಶಯದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿಪಡಿಸಬೇಕು, ಗುತ್ತಿಗೆ ಹೊರಗುತ್ತಿಗೆ ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆ ತಪ್ಪಿಸಬೇಕು, ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಶಾಸನ ಜಾರಿಗೊಳಿಸಬೇಕು, ಅಸಂಘಟಿತ ಕಾರ್ಮಿಕರ ಕನಿಷ್ಠ ಮಾಸಿಕ ಪಿಂಚಣಿ ಹೆಚ್ಚಿಸಬೇಕು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಕಾನೂನು -1996 ಹಾಗೂ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸೆಸ್ ಕಾನೂನು -1996 ನ್ನು ಪುನರ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಆಹಾರ ಆರೋಗ್ಯ ಶಿಕ್ಷಣ, ಪೌಷ್ಟಿಕ ಆಹಾರ ಯೋಜನೆಗಳನ್ನು ಖಾಯಂ ಮಾಡಬೇಕು, ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲು ಕಾನೂನು ರೂಪಿಸಬೇಕು, ಅಂಗನವಾಡಿ, ಬಿಸಿ ಊಟ, ಆಶಾ ಕಾರ್ಯಕರ್ತೆಯರು ಇತರ ಸಿಬ್ಬಂದಿಗಳಿಗೆ ಕನಿಷ್ಠ ವೇತನ 31,000, ಪಿಂಚಣಿ 10,000 ಹಾಗೂ ನಿವೃತ್ತಿ ಸೌಲಭ್ಯ ನೀಡಬೇಕು, 29 ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈ ಬಿಟ್ಟು ಕಾರ್ಮಿಕ ಪರ ನೀತಿ ಜಾರಿಗೊಳಿಸಬೇಕು, ಬರ ಪೀಡಿತ ಕರ್ನಾಟಕದ ಕರ್ನಾಟಕದ ರೈತರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕೋಮು ವಿಷ ಬೀಜ ಭಿತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬೇಕು, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ನಿರ್ಮೂಲನೆಗೆ ಕ್ರಮ ವಹಿಸಬೇಕು, ಮಹಿಳೆಯ ಮೇಲೆ ದೌರ್ಜನ್ಯ ಮಾಡಿರುವ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ಅಯ್ಯನಗೌಡ ನನ್ನ ಸೇವೆಯಿಂದ ವಜಾ ಮಾಡಬೇಕು, ದೌರ್ಜನ್ಯಕ್ಕೆ ಸಹಕರಿಸಿರುವ ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಸಿಐಟಿಯು ಸಿ.ಕುಮಾರಿ, ಚಂದ್ರಶೇಖರ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಎಂ.ಪುಟ್ಟಮಾದು, ಅಮವಾಸ್ಯೆ, ಆರ್ ರಾಜು, ಕರ್ನಾಟಕ ರಾಜ್ಯ ರೈತ ಸಂಘದ ಲಿಂಗಪ್ಪಾಜಿ, ಶಿವಳ್ಳಿ ಚಂದ್ರಶೇಖರ್, ಅಂಚೆ ನೌಕರರ ಸಂಘದ ಪ್ರಮೀಳಾ ಕುಮಾರಿ, ಅಂಗನವಾಡಿ ನೌಕರರ ಸಂಘದ ವಿಜಯಲಕ್ಷ್ಮಿ, ಮಂಗಳ, ಗಾಯಿತ್ರಿ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!