Friday, September 20, 2024

ಪ್ರಾಯೋಗಿಕ ಆವೃತ್ತಿ

ನಕಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಪ್ರಧಾನಿ ಸ್ವಾಗತ ದ್ವಾರಕ್ಕೆ ಇಡುವುದು ಎಷ್ಟು ಸರಿ ?

✍️ ನವೀನ್ ಸೂರಿಂಜೆ

ಮಂಡ್ಯ ಎನ್ನುವುದು ಸ್ವಾತಂತ್ರ್ಯ ಚಳವಳಿಯಲ್ಲಿ ದೊಡ್ಡ ಹೆಸರು. ಬ್ರಿಟೀಷರ ಎದೆ ನಡುಗಿಸಿದ ಸ್ವಾತಂತ್ರ್ಯ ಚಳವಳಿ ಈ ನೆಲದಲ್ಲಿ ನಡೆದಿತ್ತು. ಇಂತಹ ಮಂಡ್ಯಕ್ಕೆ ಈ ದೇಶದ ಪ್ರಧಾನಿ ಆಗಮಿಸುವಾಗ ಸ್ವಾಗತ ಧ್ವಾರ ನಿರ್ಮಿಸಲು ಒಬ್ಬ ಅಸಲೀ ಸ್ವಾತಂತ್ರ್ಯ ಹೋರಾಟಗಾರನ ಹೆಸರು ನೆನಪಿಗೆ ಬರಲಿಲ್ಲವೇ ? ಪ್ರಧಾನಿ ಬಿಜೆಪಿಯೇ ಆಗಲಿ, ಸುಳ್ಳುಕೋರನೇ ಆಗಲೀ. ಅವರು ಜಿಲ್ಲೆಗೆ ಬಂದಿದ್ದರು ಎಂಬುದು ಇತಿಹಾಸದ ಪುಟದಲ್ಲಿ ಉಳಿಯುತ್ತದೆ. ಅಂತಹ ಇತಿಹಾಸದ ಪುಟದಲ್ಲಿ ಒಕ್ಕಲಿಗರ ಅವಹೇಳನ ಸೇರ್ಪಡೆಗೊಳ್ಳುವುದು ಸರಿಯೇ ?

ಉರಿಗೌಡ – ನಂಜೇಗೌಡ ಎಂಬವರು ಟಿಪ್ಪುವನ್ನು ಕೊಂದರು ಎಂದು ಯಾವ ಇತಿಹಾಸದ ದಾಖಲೆಗಳೂ ಹೇಳುವುದಿಲ್ಲ. ಉರಿ ಮತ್ತು ನಂಜು ಎಂಬ ಹೆಸರನ್ನು ಸೃಷ್ಟಿಸಿರುವ ಹಿಂದೆ ಒಕ್ಕಲಿಗ ವಿರೋಧಿ ಮನಸ್ಥಿತಿ ಇರುವುದು ಸ್ಪಷ್ಟ. ಟಿಪ್ಪು ಬ್ರಿಟೀಷರ ವಿರುದ್ದ ಹೋರಾಟ ಮಾಡುತ್ತಿರುವಾಗ ಒಕ್ಕಲಿಗರು ಟಿಪ್ಪುವನ್ನು ಕೊಂದರು ಎನ್ನುವ ಮೂಲಕ ಏಕಕಾಲದಲ್ಲಿ ಒಕ್ಕಲಿಗರನ್ನು ದೇಶದ್ರೋಹಿಗಳನ್ನಾಗಿಯೂ, ಕೋಮುವಾದಿಯನ್ನಾಗಿಯೂ ಮಾಡುವ ಕುತಂತ್ರವಲ್ಲದೇ ಇನ್ನೇನೂ ಅಲ್ಲ.

ಪ್ರಧಾನಿಯೊಬ್ಬ ಜಿಲ್ಲೆಗೆ ಬಂದಾಗ ಅವರನ್ನು ಸ್ವಾಗತಿಸಲು ಆ ನೆಲದ ವೀರರ ಹೆಸರುಗಳನ್ನು ದ್ವಾರಕ್ಕೆ ಇಡುವುದು ವಾಡಿಕೆ. ಸ್ವಾತಂತ್ರ್ಯ ಪೂರ್ವದ ಹೆಸರುಗಳೇ ಬೇಕಾಗಿದ್ದರೆ “ಶಿವಪುರ ಮಹಾದ್ವಾರ” ಎಂದು ಹೆಸರಿಡಬಹುದಿತ್ತು.

ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳವಳಿಯ ದಿಕ್ಕುದೆಸೆ ಬದಲಿಸಿದ್ದು ಹಳೇ ಮೈಸೂರು ಭಾಗದ ಮಂಡ್ಯದ ಜಿಲ್ಲೆಯ ಮದ್ದೂರಿನ ಶಿವಪುರದ ಸತ್ಯಾಗ್ರಹ ಸೌಧ. ಕರ್ನಾಟಕದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿದ್ದೇ ಇಲ್ಲಿ. ಅಂದಿನ ಬ್ರಿಟೀಷ್ ಜಿಲ್ಲಾಧಿಕಾರಿಯು ಈ ದ್ವಜಾರೋಹಣಕ್ಕೆ ನಿಷೇಧ ಹೇರಿದ್ದರಂತೆ. ಆದರೂ ನಿಷೇಧ ಉಲ್ಲಂಘಿಸಿ ಹೋರಾಟಗಾರರಾದ ಎಚ್.ಕೆ.ವೀರಣ್ಣಗೌಡ, ಗೋಪಾಲ ಶೆಟ್ಟಿ, ಸಾಹುಕಾರ್ ಚೆನ್ನಯ್ಯ, ಎಂ.ಜಿ.ಬಂಡಿಗೌಡರು ಸೇರಿದಂತೆ ಹಲವಾರು ಧ್ವಜಾರೋಹಣ ನಡೆಸಿದ್ದರಂತೆ. ! 1938 ಏಪ್ರಿಲ್ 09, 10, 11 ರಂದು ಮೂರು ದಿನಗಳ ಕಾಲ ಶಿವಪುರದಲ್ಲಿ ಸತ್ಯಾಗ್ರಹ ನಡೆದಿತ್ತಂತೆ. ಈ ಸ್ವಾತಂತ್ರ್ಯ ಸತ್ಯಾಗ್ರಹದಲ್ಲಿ 40 ಸಾವಿರ ಜನರು ಪಾಲ್ಗೊಂಡಿದ್ದರಂತೆ. ಇಂತಹ ಐತಿಹಾಸಿಕ ಸ್ವಾತಂತ್ರ್ಯದ ನೆಲದಲ್ಲಿ ಕುಹಕ್ಕಾಗಿ ಸೃಷ್ಟಿಸಿಕೊಂಡ ನಕಲಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಪ್ರಧಾನಿ ಸ್ವಾಗತ ದ್ವಾರಕ್ಕೆ ಇಡುವುದು ಎಷ್ಟು ಸರಿ ?

ಪ್ರಧಾನಿ ಸ್ವಾಗತ ದ್ವಾರಕ್ಕೆ ಒಕ್ಕಲಿಗ ಸ್ವಾತಂತ್ರ್ಯ ಹೋರಾಟಗಾರರ ಹೆಸರೇ ಬೇಕಾಗಿದ್ದಲ್ಲಿ ಎಚ್ ಕೆ ವೀರಣ್ಣ ಗೌಡ, ಹೆಚ್ ಜಿ ಮಾದೇಗೌಡ, ಎಂ ಜಿ ಬಂಡೀಗೌಡರ ಹೆಸರುಗಳನ್ನು ಇಡಬಹುದಿತ್ತು. ಪ್ರಧಾನಿಗಳು ಯಾವ ಸಿದ್ದಾಂತಿಯೇ ಆಗಿರಲಿ. ಅವರು ಮಂಡ್ಯಕ್ಕೆ ಬಂದಿದ್ದರು ಎಂಬ ಅಂಶವನ್ನು ಯಾವುದೋ ಒಂದು ಕಾರಣಕ್ಕೆ ಇನ್ನೊಂದು ಐವತ್ತು ವರ್ಷದ ಬಳಿಕ ಓದುವಾಗ ಒಕ್ಕಲಿಗರಿಗೆ ಅವಮಾನ ಆಗುವಂತಿರಬಾರದಲ್ಲವೇ ? ಅದಕ್ಕಾಗಿ ಒಕ್ಕಲಿಗರು ಅಥವಾ ಮಂಡ್ಯದವರು “ಉರಿ-ನಂಜಿ ಗೌಡ ಎಂಬ ಒಕ್ಕಲಿಗರನ್ನು ಅವಮಾನಿಸುವ ದ್ವಾರ”ವನ್ನು ಕಿತ್ತೆಸೆಯಲು ಒತ್ತಾಯಿಸಬೇಕಲ್ಲವೇ ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!