Monday, April 29, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಡಿ.ಸಿ. ತಮ್ಮಣ್ಣ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲು ಉದಯ್ ಗೆ ಕಾಂಗ್ರೆಸ್ ಟಿಕೆಟ್ : ಟಿ.ಎಸ್. ಸತ್ಯಾನಂದ

ವರದಿ : ಪ್ರಭು ವಿ.ಎಸ್.

ಮಂಡ್ಯ ಜಿಲ್ಲೆ ಇಬ್ಬರು ರಾಜಕೀಯ ಮುತ್ಸದ್ಧಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪ್ರತಿ ಚುನಾವಣೆಯಲ್ಲೂ ಕುತಂತ್ರ ರಾಜಕಾರಣದ ಮೂಲಕ ಗೆಲುವು ಪಡೆಯುತ್ತಿರುವ ಡಿ.ಸಿ. ತಮ್ಮಣ್ಣ ಅವರನ್ನು ಪಕ್ಕಕ್ಕಿಟ್ಟು ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ರಾಜ್ಯ ಘಟಕ ಕೆ.ಎಂ. ಉದಯ್ ಅವರಿಗೆ ಟಿಕೆಟ್ ನೀಡಿರುವುದಾಗಿ ಕೆಪಿಸಿಸಿ ರಾಜ್ಯ ವಕ್ತಾರ ವಕೀಲ ಟಿ.ಎಸ್. ಸತ್ಯಾನಂದ ತಿಳಿಸಿದರು.

ಮದ್ದೂರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಅವರು 1999ರಲ್ಲಿ ಕಿರುಗಾವಲು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಮಾದೇಗೌಡ ಅವರ ಅಣತಿಯಂತೆ ಚುನಾವಣೆಗೆ ಸ್ಪರ್ಧಿಸಿ ಅಂದಿನ ರಾಜಕೀಯ ಮುಂದಾಳು, ಸಚಿವ ಕೆ.ಎಂ. ನಾಗೇಗೌಡ ಅವರನ್ನು ಎಸ್.ಎಂ. ಕೃಷ್ಣ ಮತ್ತು ಜಿ. ಮಾದೇಗೌಡ ಅವರ ಕೃಪಾಶೀರ್ವಾದದಿಂದ ಸೋಲಿಸಿ ಶಾಸಕರಾದ ತಮ್ಮಣ್ಣ ಬಳಿಕ ಜಿ.ಮಾದೇಗೌಡ ಅವರಿಗೆ ನೀಡಿದ ಪ್ರತಿಫಲವೇನೆಂಬುದು ಜಿಲ್ಲೆಯ ಜನರಿಗೆ ಗೊತ್ತೆಂದರು.

2004ರಲ್ಲಿ ತಮ್ಮ ಕುಟುಂಬದ ಕುಡಿ ಎಸ್. ಗುರುಚರಣ್ ಅವರನ್ನು ಬದಿಗಿಟ್ಟು ಡಿ.ಸಿ. ತಮ್ಮಣ್ಣ ಅವರಿಗೆ ಮದ್ದೂರು ಕ್ಷೇತ್ರ ಬಿಟ್ಟುಕೊಟ್ಟ ಎಸ್.ಎಂ. ಕೃಷ್ಣ ಅವರು ನಂತರದಲ್ಲಿ ಇವರಿಂದ ಪಡೆದ ಉಡುಗೊರೆ ಸ್ಥಳೀಯ ಕಾರ್ಯಕರ್ತರ ಕಡೆಗಣನೆ, ಪಕ್ಷ ನಿಷ್ಠೆ ಮರೆತು ನಂತರದ ದಿನಗಳಲ್ಲಿ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ್ದೇ ಸಾಧನೆ ಎಂದರು.

ಕುತಂತ್ರ ರಾಜಕಾರಣಕ್ಕೆ ಸಿದ್ಧ ಹಸ್ತರಾದ ಡಿ.ಸಿ. ತಮ್ಮಣ್ಣ 2004ರಲ್ಲಿ ಸ್ಥಳೀಯ ಜನಪ್ರಿಯ ನಾಯಕ ಎಂ.ಎಸ್. ಸಿದ್ದರಾಜು ಅವರ ಗೆಲುವನ್ನು ತಪ್ಪಿಸಲು ಅನ್ಯ ಮಾರ್ಗದಲ್ಲಿ 2 ಬಿ ಫಾರಂ ಕೊಡಿಸಿ ಜೆಡಿಎಸ್ ಸೋಲಿಸಿ ಗೆದ್ದಿದ್ದು 2008ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತ ಬಳಿಕ ಶಾಸಕ ಸಿದ್ದರಾಜು ಅವರ ಅಕಾಲಿಕ ಮರಣದಿಂದ ಎದುರಾದ ಮರು ಚುನಾವಣೆಯಲ್ಲಿ ಅಧಿಕಾರಕ್ಕೆಂದೇ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ತಮ್ಮ ಹಿಂದಿದ್ದ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರನ್ನು ಬೀದಿಗೆ ಬಿಟ್ಟರೆಂದು ದೂರಿದರು.

ಮರುಚುನಾವಣೆಯಲ್ಲಿ ಕಲ್ಪನಾಸಿದ್ದರಾಜು ವಿರುದ್ಧ ಸೋತು ಮನೆ ಸೇರಿದ್ದ ಡಿ.ಸಿ. ತಮ್ಮಣ್ಣ 2013ರ ಚುನಾವಣೆಯಲ್ಲಿ ಮತ್ತೆ ಕುತಂತ್ರದೊಡನೆ ಜೆಡಿಎಸ್ ಸೇರ್ಪಡೆಯಾಗಿ ಸಿದ್ದರಾಜು ಅವರ ಮನೆತನಕ್ಕೆ ನೀಡಿದ ಕೊಡುಗೆಯನ್ನು ಹಾಗೂ ಎಸ್.ಎಂ. ಕೃಷ್ಣ, ಜಿ.ಮಾದೇಗೌಡ ಅವರೊಟ್ಟಿಗೆ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರ ಹಿತ ಮರೆತರೆಂದು ಟೀಕಿಸಿದರು.

ಎಸ್. ಗುರುಚರಣ್ ದುಡುಕಿನ ನಿರ್ಧಾರ ಕೈಗೊಂಡು ಕುತಂತ್ರ ರಾಜಕಾರಣಕ್ಕೆ ಬಲಿಯಾಗಿದ್ದು ಚುನಾವಣೆ ಮುಗಿದು ಒಂದು ತಿಂಗಳ ಅವಧಿಯಲ್ಲೇ ಮಾತೃಪಕ್ಷ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೇ ಕುತಂತ್ರ ರಾಜಕಾರಣ ಹೊರಗಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರ ವಶಕ್ಕೆ ಪಡೆಯುವ ಸದುದ್ದೇಶ ಡಿ.ಕೆ. ಶಿವಕುಮಾರ್ ಅವರದ್ಧಾಗಿದ್ದು ಮುಂದಿನ ದಿನಗಳಲ್ಲಿ ಇದು ಹೊರ ಬೀಳಲಿರುವುದು ಸತ್ಯವೆಂದರು.

ಮನವಿ :
ಮಂಡ್ಯ ಜಿಲ್ಲೆ ಶಾಂತಿ ಸಹಬಾಳ್ವೆಗೆ ಹೆಸರಾಗಿದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ರೋಡ್‌ಶೋ ನಿಗಧಿಯಾಗಿದ್ದು ಈ ವೇಳೆ ನಾಥ ಪರಂಪರೆಯ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಶ್ರೀಕ್ಷೇತ್ರದ ಶಾಂತಿ ಮಂತ್ರ ಮನದಲ್ಲಿಟ್ಟುಕೊಂಡು ಕೇವಲ ಚುನಾವಣಾ ಪ್ರಚಾರವಷ್ಟೇ ಮಾಡಿ ಕೋಮು ಸಾಮರಸ್ಯ ಕಾಯ್ದುಕೊಂಡು ತೆರಳುವಂತೆ ಮನವಿ ಮಾಡುವುದಾಗಿ ಹೇಳಿದರು.

ಗೋಷ್ಠಿ ವೇಳೆ ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಉದಯ್, ಸೋಮನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಟಿ. ಶಂಕರ್, ಹಿರಿಯ ಮುಖಂಡ ತೈಲೂರು ರಘು, ತಾ.ಪಂ. ಮಾಜಿ ಸದಸ್ಯ ಚಲುವರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!