Saturday, July 13, 2024

ಪ್ರಾಯೋಗಿಕ ಆವೃತ್ತಿ

ರೈತರ ಕುಂದುಕೊರತೆ ನಿವಾರಣೆಗೆ ಅಗತ್ಯ ಕ್ರಮ : ಡಿಸಿ

ರೈತರು ಆರ್ಥಿಕವಾಗಿ ಸಧೃಡವಾಗಬೇಕಾದರೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ನಿಗದಿತವಾಗಿ ತಲುಪಬೇಕು. ರೈತರ ಕುಂದುಕೊರತೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ರವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರೈತರ ಕುಂದು-ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಣ್ಣು ಆರೋಗ್ಯ ಅಭಿಯಾನದಡಿ ಜಿಲ್ಲೆಯಲ್ಲಿ ಹಲವು ಗ್ರಾಮಗಳನ್ನು ಆಯ್ಕೆ ಮಾಡಿ ಮಣ್ಣಿನ ಸ್ಯಾಂಪಲ್ ತೆಗೆದು, ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಆಯೋಜಿಸಿ ರೈತರಿಗೆ ಅರಿವು ಮೂಡಿಸಬೇಕು ಎಂದರು.

ಮಂಡ್ಯದಲ್ಲಿ ಕೃಷಿಗೆ ಬಳಸಲಾಗುವ ಎಲ್ಲಾ ರಸ ಗೊಬ್ಬರ ಕೃಷಿ ಇಲಾಖೆಯ ಪ್ರಯೋಗಾಲಯಗಳಲ್ಲಿ ಗುಣಮಟ್ಟ ಪರೀಕ್ಷಿಸಲ್ಪಟ್ಟು ನಂತರ ಮಾರುಕಟ್ಟೆಗೆ ಬರುತ್ತದೆ. ಆದ್ದರಿಂದ ರೈತರು ಪ್ರತ್ಯೇಕ ಗೊಬ್ಬರದ ಬ್ರಾಂಡ್‍ಗಳ ಮೇಲೆ ಅವಲಂಬಿತವಾಗದೆ ಗೊಬ್ಬರಗಳನ್ನು ಉಪಯೋಗಿಸಬಹುದು ಎಂದರು.

ರೈತರಿಗೆ ಬರುವ ಇತರೆ ಸರ್ಕಾರದ ಅನುದಾನವನ್ನು ಸಾಲದ ಹೆಸರಿನಲ್ಲಿ ಕಡಿತಗೊಳಿಸದೆ ರೈತರಿಗೆ ಸೌಲಭ್ಯವನ್ನು ಒದಗಿಸಬೇಕು ಎಂದು ಬ್ಯಾಂಕ್ ಸಿಬ್ಬಂದಿಗಳಿಗೆ ಸೂಚಿಸಿದರು.

ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ರೈತರ ಬೇಡಿಕೆಗಳನ್ನು ಕುರಿತು ಚರ್ಚಿಸಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ಫಲಾನುಭವಿಗಳನ್ನು ಗುರುತಿಸಿ ಯಂತ್ರೋಪಕರಣಗಳನ್ನು ಅವರಿಗೆ ವಿತರಿಸುವ ಸಂದರ್ಭದಲ್ಲಿ ಅದನ್ನು ಬಳಸುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ರೈತರ ಜಮೀನುಗಳ ದುರಸ್ತಿ, ಕೋಡಿ, ಸಾಗುವಳಿ ಚೀಟಿ ವಿತರಣೆ ಮಾಡುವ ಸಂದರ್ಭದಲ್ಲಿ ಅವ್ಯವಹಾರ ಮಾಡಿದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಊಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಎಷ್ಟು ಬೆಳೆ ನಷ್ಟವಾಗಿದೆ ಮತ್ತು ಬಾಕಿ ಉಳಿದಿರುವ ಸರ್ವೇ ಪ್ರಕ್ರಿಯೆ ಶೀಘ್ರದಲ್ಲಿ ಸರ್ವೇ ಮಾಡಿ ಅದಕ್ಕೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಲು ಸರಬರಾಜು ನಿರಂತವಾಗಿ ನಡೆಯಬೇಕು ಹಾಲು ಪರೀಕ್ಷೆಯಲ್ಲಿ ಯಾವುದೇ ಲೋಪದೋಷಕ್ಕೆ ಆಹ್ವಾನ ನೀಡದೆ ಲೋಪವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತರಿಗೆ ಬಹಳ ಮುಖ್ಯವಾದ ಕೃಷಿ, ಬ್ಯಾಂಕ್, ವಿದ್ಯುತ್, ತೋಟಗಾರಿಕೆ, ಕಂದಾಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಗುಣಮಟ್ಟದ ಬಿತ್ತನೆ ಬೀಜ, ಲೋಪವಿಲ್ಲದ ಶುದ್ಧ ರಸಗೊಬ್ಬರ, ವಿಳಂಬ ವಿಲ್ಲದೆ ಬ್ಯಾಂಕ್‍ಗಳ ಸಾಲ ಸೌಲಭ್ಯ ಹಾಗೂ ರೈತರಿಗೆ ಯಾವುದೇ ವಿಳಂಬವಾಗದೆ ಸಮರ್ಪಕ ವಿದ್ಯುತ್ ನೀಡುವಂತೆ ತಿಳಿಸಿದರು.

ರೈತ ಬೆಳೆಯುವ ರಾಗಿ ಮತ್ತು ಭತ್ತ ಖರೀದಿಗೆ ನೊಂದಣಿ ಸರಿಯಾದ ಸಮಯಕ್ಕೆ ಪ್ರಕ್ರಿಯೆ ಪ್ರಾರಂಭಿಸಿ ರೈತರಿಗೆ ಅನುಕೂಲವಾಗುವ ಹಾಗೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ರೈತರಿಗೆ ಸರ್ಕಾರ ನೀಡುವಂತಹ ಬಿತ್ತನೆ ಬೀಜಗಳು, ರಸಗೊಬ್ಬರ, ಸಾಲ ಸೌಲಭ್ಯ, ಸರ್ಕಾರದಿಂದ ಬರುವಂತಹ ಅನುದಾನ ಸೂಕ್ತವಾಗಿ ಪಲಾನುಭವಿಗಳಿಗೆ ಸಮರ್ಪಕವಾಗಿ ತಲುಪಬೇಕು. ಬ್ಯಾಂಕ್ ನಲ್ಲಿ ರೈತರಿಗೆ ಇರುವ ಕುಂದು ಕೊರತೆಯ ಮಾಹಿತಿ ಪಡೆದು ನಿಯಮಾನುಸಾರವಾಗಿ ಪರಿಹರಿಸಿ ಎಂದರು.

ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಐಶ್ವರ್ಯ, ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕ ಸ್ವಾಮಿಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್. ಅಶೋಕ್, ಜಿ.ಪಂ ಉಪಕಾರ್ಯದರ್ಶಿ ಧನರಾಜ್,ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಜಿ.ಸೌಮ್ಯ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಮಂಜುನಾಥ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ದೀಪಕ್, ರೈತ ನಾಯಕಿ ಸುನಂದಾ ಜಯರಾಂ, ರೈತ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!