Thursday, November 19, 2026

ಪ್ರಾಯೋಗಿಕ ಆವೃತ್ತಿ

ಪರಿಸರ ಪ್ರೇಮಿಯ ಅವಹೇಳನ: ಅರಣ್ಯಾಧಿಕಾರಿ ವಿರುದ್ದ ರೈತಸಂಘ ಪ್ರತಿಭಟನೆ

ಪರಿಸರ ಕಾಳಜಿಯಿಂದ ಗಿಡಗಳನ್ನು ನೆಟ್ಟು ಪೋಷಿಸುವ ಕಾಯಕ ಮಾಡಿಕೊಂಡು ಬರುತ್ತಿರುವ ರಮೇಶ್ ಅವರನ್ನು ಅವಹೇಳನ ಮಾಡಿರುವ ಅರಣ್ಯಾಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ರೈತಸಂಘವು ಗುರುವಾರ ಮಂಡ್ಯದಲ್ಲಿ ಪ್ರತಿಭಟಿಸಿದರು.

ಮಂಡ್ಯ ನಗರದ ಅರಣ್ಯ ಇಲಾಖೆಯ ಜಿಲ್ಲಾ ಅರಣ್ಯಾಧಿಕಾರಿ ಕೊಠಡಿ ಎದುರು ರೈತರು ಧರಣಿ ನಡೆಸಿ ಪರಿಸರ ಪ್ರೇಮಿಯನ್ನು ಅವಮಾನಿಸಿರುವ ವಲಯ ಅರಣ್ಯ ಅಧಿಕಾರಿ ಮಹಾದೇವಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 20 ವರ್ಷದಿಂದ ಶ್ರೀರಂಗಪಟ್ಟಣ ಸುತ್ತಮುತ್ತಲ ಪ್ರದೇಶದ ಅರಣ್ಯ ವ್ಯಾಪ್ತಿಯಲ್ಲಿ ಗಿಡಗಳನ್ನು ಪೋಷಿಸಿ ಮರಗಳನ್ನು ಬೆಳೆಸುತ್ತಾ ಬಂದಿರುವ ಪರಿಸರ ರಮೇಶ್ಅವರು, ಇತ್ತೀಚೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಹುಟ್ಟುಹಬ್ಬದ ನಿಮಿತ್ತ ಕರಿಘಟ್ಟದ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲು ಮುಂದಾಗಿ, ಅರಣ್ಯ ಇಲಾಖೆ ಅನುಮತಿ ಕೇಳಿದಾಗ, ಅರಣ್ಯಾಧಿಕಾರಿಗಳು ಅರಣ್ಯ ಬೆಳೆಸುವ ಕೆಲಸವನ್ನು ಪ್ರೋತ್ಸಾಹಿಸುವ ಬದಲು ಪರಿಸರ ಪ್ರೇಮಿಯನ್ನು ನಿಂದನೆ ಮಾಡಿ ಅವಹೇಳನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಸಂರಕ್ಷಣೆ ಮಾಡುವ, ಗಿಡ ಮರಗಳನ್ನು ಬೆಳೆಸುವ ಪರಿಸರ ಪ್ರೇಮಿಗಳನ್ನು ವಿಶ್ವಾಸಕ್ಕೆ  ತೆಗೆದುಕೊಳ್ಳಬೇಕಾದ ಅರಣ್ಯ ಇಲಾಖೆಯ ಅಧಿಕಾರಿ ಅವಹೇಳನ ಮಾಡುವುದು ಸರಿಯಲ್ಲ, ಈ ರೀತಿ ಅವಮಾನ ಮಾಡುವುದು ಒಳ್ಳೆಯ ನಡತೆಯಲ್ಲ, ಸಾಲುಮರ ತಿಮ್ಮಕ್ಕ ಅವರನ್ನು ಸರ್ಕಾರ ಗೌರವಯುತವಾಗಿ ಕಂಡಿದೆ, ಅದೇ ರೀತಿಯ ಕೆಲಸದಲ್ಲಿ ಸಕ್ರಿಯರಾಗಿರುವ ಪರಿಸರ ಪೋಷಕರನ್ನು ಅವಮಾನಿಸುವುದು ಎಷ್ಟು ಸರಿ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು.

ಪ್ರತಿಭಟನಕಾರರು ಅರಣ್ಯಾಧಿಕಾರಿ ಮಹದೇವಸ್ವಾಮಿ ಅವರನ್ನು ಸ್ಥಳಕ್ಕೆ ಕರೆಯಿಸಿ ಎಂದು ಪಟ್ಟು ಹಿಡಿದರೂ, ಅಧಿಕಾರಿಗಳು ಕರೆಸಲೂ ವಿಫಲರಾದರು. ಸ್ವತಃ ಜಿಲ್ಲಾ ಅರಣ್ಯ ಅಧಿಕಾರಿಯೇ ಸ್ಥಳಕ್ಕೆ ಬರುವಂತೆ ತಿಳಿಸಿದರೂ ಆ ಅಧಿಕಾರಿ ಉಡಾಫೆಯಿಂದ ವರ್ತಿಸಿದ್ದಾರೆ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್ ಕೆಂಪೂ ಗೌಡ ಕಿಡಿಕಾರಿದರು. ಪ್ರತಿಭಟನೆಯಲ್ಲಿ ರೈತಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ