Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತರಿಗೆ ಸ್ಪಂದಿಸದ ಸಿಎಂ ಗಣಿ ಮಾಲೀಕರ ಬೇಡಿಕೆ ಈಡೇರಿಸಿದ್ದು ನ್ಯಾಯವೇ?

ಕಳೆದ 62 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರಿಗೆ ಸ್ಪಂದಿಸದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 12 ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಗಣಿ ಮಾಲೀಕರಿಗೆ ಸ್ಪಂದಿಸಿರುವುದು ದುರ್ದೈವದ ಸಂಗತಿ. ಇದ್ಯಾವ ನ್ಯಾಯ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತರು ಬೆಳೆದ ಕಬ್ಬಿಗೆ 4500 ರೂ. ಹಾಗೂ ಹಾಲಿಗೆ 40 ರೂ.ಹೆಚ್ಚಳ ಮಾಡಿ ಎಂದು 62 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ.ರೈತರ ನ್ಯಾಯಯುತ ಬೇಡಿಕೆಗಳಿಗೆ ಸಿಎಂ ಸ್ಪಂದಿಸಿಲ್ಲ.ಆದರೆ ಭೂಮಿಯ ಒಡಲು ಬಗೆದು ಪ್ರಕೃತಿ ನಾಶ ಮಾಡುತ್ತಿರುವ ಗಣಿ ಮಾಲೀಕರ ಮುಷ್ಕರ ಸಿಎಂ ಬೊಮ್ಮಯಿಯವರ ಕರುಳು ಕಿವುಚಿದೆ.ಅದಕ್ಕಾಗಿ ಅವರ ರಾಜಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಿದ್ದಾರೆ ಎಂದು ಬೇಸರದಿಂದ ನುಡಿದರು.

ಸಕ್ಕರೆ ಲಾಬಿಗೆ ಮಣಿದಿರುವ ಸರ್ಕಾರ, ಈವರೆಗೆ ಕಬ್ಬಿನ ದರ ನಿಗದಿಪಡಿಸಲು ಹಿಂದೇಟು ಹಾಕುತ್ತಿದೆ.ಲಕ್ಷಾಂತರ ರೈತರಿಗಿಂತ 10-12 ಮಂದಿ ಸಕ್ಕರೆ ಕಾರ್ಖಾನೆ ಮಾಲೀಕರ ಹಿತವೇ ಸರ್ಕಾರಕ್ಕೆ ಮುಖ್ಯವಾಗಿದೆ.ಪ್ರತಿವರ್ಷ ಅಬಕಾರಿ ಇಲಾಖೆಗೆ 30 ಸಾವಿರ ಕೋಟಿ ಆದಾಯ ಬರುತ್ತದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳುತ್ತಾರೆ. ಕಬ್ಬಿನ ಉಪ ಉತ್ಪನ್ನದಿಂದ ಮದ್ಯ ತಯಾರಾಗುತ್ತದೆ. ಆದರೆ ಕಬ್ಬು ಬೆಳೆದ ರೈತರಿಗೆ 6 ಸಾವಿರ ಕೋಟಿ ಕೊಟ್ಟರೆ ಸಾಕು ಟನ್ ಕಬ್ಬಿಗೆ 4,200, 4300 ರೂ.ಸಿಗುತ್ತದೆ. ಇದು ರೈತರಿಗೆ ನೀಡಬೇಕಾದ ವೈಜ್ಞಾನಿಕ ಬೆಲೆ ಎಂದರು‌.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಬ್ಬಿನ ಉಪ ಉತ್ಪನ್ನದಿಂದ ಬರುವ ಆದಾಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ‌.ಅವರು ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ಮಾಡುತ್ತೇನೆಂದು ಹೇಳಿದ್ದಾರೆ.ಆದರೆ ಇನ್ನೂ ಏನು ಆಗಿಲ್ಲ ಎಂದರು.

ಜ.9 ರಂದು ಭಾವೈಕ್ಯತಾ ಜಾಥಾ ಆಗಮನ

ರೈತರ ವಿವಿಧ ಬೇಡಿಕೆಗಳ ಆಗ್ರಹಿಸಲು ಜನಾಂದೋಲನ ಮಹಾಮೈತ್ರಿ ಕರ್ನಾಟಕ(ಜೆಎಂಎಂ ) ಹಮ್ಮಿ ಕೊಂಡಿರುವ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆಯ ಭಾವೈಕ್ಯತೆ ಜಾಥಾ ಮಂಡ್ಯ ನಗರಕ್ಕೆ ಜನವರಿ 9 ರಂದು ಆಗಮಿಸಲಿದೆ ಎಂದು ರೈತ ಸಂಘದ ಮುಖಂಡ ಪ್ರಸನ್ನ ಎನ್.ಗೌಡ ತಿಳಿಸಿದರು.

ಜ.2ರಂದು ರಾಜ್ಯದ ನಾಲ್ಕು ಪ್ರದೇಶಗಳಿಂದ ಪ್ರತ್ಯೇಕವಾಗಿ ಜಾಥಾಗಳು ಹೊರಟಿದ್ದು, ಜ.11ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಸಲಿವೆ. ಮಂಗಳೂರಿನಿಂದ ಮಡಿಕೇರಿ, ಮೈಸೂರು ಭಾಗವಾಗಿ ಬೆಂಗಳೂರಿಗೆ ತೆರಳುವ ಕೋಮು ಸೌಹಾರ್ದತೆಯ ಜಾಥಾ, ಕೃಷಿ ಕೂಲಿಕಾರರ ಕೇಂದ್ರಿತ ಪ್ರಧಾನ ಜಾಥಾವು ಕೂಡಲಸಂಗಮದಿಂದ ಹೊರಟಿದೆ. ದಾವಣಗೆರೆಯ ಕುಸನೂರಿನಿಂದ ಸಾಮೂಹಿಕ ಭೂಮಿ ಸಂರಕ್ಷಣಾ ಕೇಂದ್ರಿತ ಜಾಥಾ ಹಾಗೂ ಕೋಲಾರದಿಂದ ಸಂವಿಧಾನ ಸಂರಕ್ಷಣೆ ಕೇಂದ್ರಿತ ಜಾಥಾ ಹೊರಟಿವೆ ಎಂದರು.

ಸಿಟಿಜನ್ ಫಾರ್ ಡೆಮಾಕ್ರಸಿ, ಜನತಂತ್ರ ಪ್ರಯೋಗಶಾಲೆ ಸಂಘಟನೆಗಳ ಸಹಯೋಗದಲ್ಲಿ ಯಾತ್ರೆ ನಡೆಯುತ್ತಿದೆ. ಜ.9 ಮಂಡ್ಯ ನಗರಕ್ಕೆ ಆಗಮಿಸುವ ಜಾಥಾವನ್ನು ಸರ್ ಎಂ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಅಂದು ಮಧ್ಯಾಹ್ನ 2 ಗಂಟೆಗೆ ಸ್ವಾಗತಿಸಲಾಗುವುದು. ಜಿಲ್ಲೆಯ ಎಲ್ಲಾ ರೈತ, ದಲಿತ ಹಾಗೂ ಕಾರ್ಮಿಕ ಪರ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾವೈಕ್ಯತೆ ಜಾಥಾವನ್ನು ಬೆಂಬಲಿಸಬೇಕೆಂದು ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ರೈತಸಂಘದ ಮುಖಂಡರಾದ ಲಿಂಗಪ್ಪಾಜಿ, ವಿಜಯಕುಮಾರ್, ರವಿಕುಮಾರ್, ಜವರೇಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!