Sunday, April 28, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿಗೆ ಆಕ್ರೋಶ: ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಬೆಂಬಲಿಸಲು ನಿರ್ಧಾರ

ಕೆ.ಆರ್.ಪೇಟೆ ತಾಲ್ಲೂಕಿನ ಬಣ್ಣೆ ನಹಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಶ್ರೀನಿವಾಸ್ ಅವರ ತೋಟದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸೀಳನೆರೆ ಅಂಬರೀಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ಅಭಿಮಾನಿಗಳು ಮಾಜಿ ಸಚಿವ ನಾರಾಯಣಗೌಡ ಅವರ ನಡೆ ಹಾಗೂ ಬಿಜೆಪಿ ಜೆಡಿಎಸ್ ಅಪವಿತ್ರ ಮೈತ್ರಿಯನ್ನು ವಿರೋಧಿಸಿ ತಾಲೂಕಿನ ಸಮಗ್ರವಾದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿರ್ಧಾರ ಕೈಗೊಂಡರು.

ಮುಂದಿನ ಭಾನುವಾರ ಕೆ.ಆರ್. ಪೇಟೆಯಲ್ಲಿ ನಡೆಯಲಿರುವ ಮಾಜಿ ಸ್ಪೀಕರ್ ಕೃಷ್ಣ ಅಭಿಮಾನಿಗಳ ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಭಾಗವಹಿಸುತ್ತಿದ್ದು, ಸಚಿವರ ಸಮಕ್ಷಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಸೀಳನೆರೆ ಅಂಬರೀಷ್, ಮನ್ ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆ ಹೊಸಳ್ಳಿ ಜವರಾಯಿಗೌಡ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬೂಕನಕೆರೆ ಜವರಾಯಿ ಗೌಡ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಠಲಾಪುರ ಹರೀಶ್, ಅಘಲಯ ಮಹಡಿ ಮನೆ ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಾಲಿನ ಡೈರಿಗಳ ಅಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪುರಸಭೆಯ ಸದಸ್ಯರುಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಅಂಬರೀಷ್ ನಿಕಟವರ್ತಿಗಳು ತಿಳಿಸಿದರು.

ನಾನು ಜೆಡಿಎಸ್ ಪಕ್ಷವನ್ನು ವಿರೋಧಿಸಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಾಜಕೀಯ ಮಾಡಿದವನಾಗಿದ್ದೇನೆ. ಸೀಳನೆರೆ ಹೋಬಳಿಯ ಕೆರೆ ಕಟ್ಟೆಗಳನ್ನು ಏತ ನೀರಾವರಿ ಯೋಜನೆಯ ಮೂಲಕ ತುಂಬಿಸಿ ರೈತಾಪಿ ವರ್ಗಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆಯಿಟ್ಟು ಉಪಚುನಾವಣೆ ಸಂದರ್ಭದಲ್ಲಿ ಬೇಷರತ್ತಾಗಿ ಬಿಜೆಪಿ ಪಕ್ಷ ಸೇರಿದ್ದೆ. ಈಗ ಏತ ನೀರಾವರಿ ಯೋಜನೆ ಅರ್ಧಕ್ಕೆ ನಿಂತಿದೆ. ಕೆರೆ ಕಟ್ಟೆಗಳನ್ನು ತುಂಬಿಸುವ ಈ ಯೋಜನೆ ಸಂಪೂರ್ಣವಾಗಲು ಸರ್ಕಾರದ ಸಹಾಯಬೇಕು. ಆದ್ದರಿಂದ ನಾನು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಜೆಡಿಎಸ್ ಬಿಜೆಪಿ ಅಪವಿತ್ರ ಮೈತ್ರಿಯ ವಿರುದ್ದ ಹೋರಾಡುವ ನಿರ್ಧಾರ ಮಾಡಿದ್ದೇನೆ ಎಂದು ಅಂಬರೀಶ್ ತಿಳಿಸಿದರು.

ದೇವೇಗೌಡರ ಮನೆಯವರ ಕಿರುಕುಳ

ಮಾಜಿ ಸಚಿವ ನಾರಾಯಣಗೌಡರಿಗೆ ಮಾಜಿ ಪ್ರಧಾನಿ ದೇವೇಗೌಡರ ಮನೆಯವರು ನೀಡಿದ ಕಿರುಕುಳ ಹಾಗೂ ಮಾನಸಿಕ ಹಿಂಸೆಯನ್ನು ಹತ್ತಿರದಿಂದ ಕಂಡಿದ್ದೇನೆ. ಜೆಡಿಎಸ್ ಪಕ್ಷದ ಜೊತೆಯಲ್ಲಿ ಕೈಜೋಡಿಸಿ ಕೆಲಸ ಮಾಡಲು ನನ್ನ ಆತ್ಮ ಸಾಕ್ಷಿ ಒಪ್ಪುತ್ತಿಲ್ಲ, ಆದ್ದರಿಂದ ನಾನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯ ಸ್ವಾಮಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಲೋಕಸಭಾ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ದುಡಿಯುವ ಸಂಕಲ್ಪ ಮಾಡಿದ್ದೇನೆ ಎಂದು ತಿಳಿಸಿದರು.

ನಮ್ಮ ತಾಲ್ಲೂಕಿನ ಸರಳ ಸಜ್ಜನ ರಾಜಕಾರಣಿ ಮಾಜಿ ಸ್ಪೀಕರ್ ಕೃಷ್ಣ ಅವರಿಗೆ ಮೋಸ ಮಾಡಿ ಬೆನ್ನಿಗೆ ಚೂರಿ ಹಾಕಿದ ಜೆಡಿಸ್ ಪಕ್ಷ ಹಾಗೂ ಸ್ವಾರ್ಥ ಸಾಧನೆ ಮಾಡಿ ರಾಜ್ಯವನ್ನು ಹಾಳು ಮಾಡಲು ಹೊರಟಿರುವ ಅಪ್ಪ ಮಕ್ಕಳ ವಿರುದ್ಧ ಹೊರಾಡುವ ನಿರ್ಧಾರ ಮಾಡಿದ್ದೇವೆ ಎಂದು ಅಂಬರೀಶ್ ಹೇಳಿದರು.

ಕೃಷ್ಣ ಅಭಿಮಾನಿಗಳ ಸಭೆಯಲ್ಲಿ ಮುಖಂಡರಾದ ಗೂಡೆಹೊಸಳ್ಳಿ ಜವರಾಯಿಗೌಡ, ಹೈಚನಹಳ್ಳಿ ಶಿವಣ್ಣ, ಸೀಳನೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಯುವರಾಜ್, ಪುರಸಭೆ ಸದಸ್ಯರಾದ ಶುಭಾ ಗಿರೀಶ್, ಶೋಭಾ ದಿನೇಶ್, ಮಾಜಿ ಶಾಸಕ ಎಂ. ಪುಟ್ಟಸ್ವಾಮಿ ಗೌಡರ ಪುತ್ರ ಪ್ರವೀಣ್, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಶೇಖರ್, ಪರಮೇಶ್ ಗೌಡ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮೇಗೌಡ ಸೇರಿದಂತೆ ನೂರಾರು ಜನರು ಹಾಗೂ ಮುಖಂಡರುಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!