Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್‌ ಗ್ಯಾರಂಟಿಯಿಂದ ಆರ್ಥಿಕ ಬಲ; ಬಿಜೆಪಿ ಅಪಪ್ರಚಾರಕ್ಕೆ ತಿರುಗೇಟು ನೀಡಿದ ದಿನೇಶ್ ಗೂಳಿಗೌಡ


  • ಕೇಂದ್ರ ಸರ್ಕಾರದ ಲೋಪ ಮುಚ್ಚಿಕೊಳ್ಳಲು ಬಿಜೆಪಿಗರಿಂದ ಇಲ್ಲದ ಆರೋಪ

  • ಬಡ ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ನೆರವಾಗುತ್ತಿರುವ ಕಾಂಗ್ರೆಸ್‌ ಸರ್ಕಾರ

ವಾಸ್ತವ ಅರಿಯದೇ, ಕೇಂದ್ರ ಸರ್ಕಾರದ ಲೋಪಗಳನ್ನು ಮುಚ್ಚಿಕೊಳ್ಳಲು ಬಿಜೆಪಿಗರು ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಇಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬರಗಾಲದ ಮಧ್ಯೆ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ದೈನಂದಿನ ಖರ್ಚುಗಳಿಗೆ ಆಸರೆಯಾಗಿ ಕಾಂಗ್ರೆಸ್‌ ನಿಂತಿದೆ ಎಂಬ ಸತ್ಯವನ್ನು ಮರೆಮಾಚಲು ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಶಾಸಕ, ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷರಾದ ದಿನೇಶ ಗೂಳಿಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಇಂಥ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಬಡ ಜನರ ಬದುಕಿಗೆ ಭರವಸೆ ನೀಡಿವೆ. ಅವರಿಗೆ ದಿನನಿತ್ಯದ ಖರ್ಚುಗಳನ್ನು ತೂಗಿಸಲು ಜೀವನಾಧಾರವಾಗಿ ಕಾಂಗ್ರೆಸ್‌ ಸರ್ಕಾರ ನಿಂತಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೂ ರಾಜ್ಯದ ಬರ ಪರಿಸ್ಥಿತಿ ನಿಭಾಯಿಸಲು ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರದ ನೆರವು ಕೋರಿದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರದ ಈ ಅಸಹಕಾರ ಹಾಗೂ ವೈಫಲ್ಯವನ್ನು ಮುಚ್ಚಿಕೊಳ್ಳಲು ರಾಜ್ಯದ ಬಿಜೆಪಿ ನಾಯಕರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಪ್ಪು ಸಂದೇಶಗಳನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆ.

ಯಜಮಾನಿಯರ ಖಾತೆಗೆ ನೇರ ಜಮೆ
ಗೃಹ ಲಕ್ಷ್ಮಿ ಯೋಜನೆಯು ರಾಜ್ಯದ 1 ಕೋಟಿ 17 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಪ್ರತಿ ತಿಂಗಳು ತಲುಪುತ್ತಿದೆ. ತಲಾ 2 ಸಾವಿರ ರೂ.ಗಳಂತೆ ಒಟ್ಟಾರೆ ಮಾಸಿಕ 2340 ಕೋಟಿ ರೂಪಾಯಿಯನ್ನು ಪ್ರತಿ ಕುಟುಂಬದ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

3.92 ಕೋಟಿ ಸದಸ್ಯರಿಗಾಗಿ ಮಾಸಿಕ 646 ಕೋಟಿ ರೂ. ವೆಚ್ಚ
ಅನ್ನ ಭಾಗ್ಯ ಯೋಜನೆಯಲ್ಲಿ 1.8 ಕೋಟಿ ಕುಟುಂಬಗಳ 3.92 ಕೋಟಿ ಸದಸ್ಯರಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ ಒಟ್ಟು 170 ರೂ.ಗಳನ್ನು ಪ್ರತಿ ತಿಂಗಳು ನೀಡಲಾಗುತ್ತಿದೆ. ಅದಕ್ಕಾಗಿ ಮಾಸಿಕ ಮಾಸಿಕ 646 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ವ್ಯಯಿಸುತ್ತಿದೆ.

ಹಣದ ವಹಿವಾಟಿಗೆ ಕಾರಣವಾದ ಶಕ್ತಿ ಯೋಜನೆ
ಶಕ್ತಿ ಯೋಜನೆಗಳಲ್ಲಿ ಮಹಿಳೆಯರಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಮಾಡಿದ್ದು, ಬಡ, ಕೂಲಿ ಕಾರ್ಮಿಕರಿಗೆ, ಅನುಕೂಲವಾಗಿದೆ. ದೇವಸ್ಥಾನ, ಪ್ರವಾಸಿ ತಾಣಗಳ ವ್ಯಾಪಾರ ವಹಿವಾಟು ಹೆಚ್ಚಿ ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ಇದುವರೆಗೆ 7 ತಿಂಗಳಲ್ಲಿ ರಾಜ್ಯದಲ್ಲಿ 129 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅದಕ್ಕಾಗಿ 3,080 ಕೋಟಿ ರೂ.ಮೌಲ್ಯದ ಟಿಕೆಟ್ ವೆಚ್ಚವನ್ನು ನಮ್ಮ ರಾಜ್ಯ ಸರ್ಕಾರ ಭರಿಸಿದೆ.

ಆರ್ಥಿಕ ಬಲ ತುಂಬಿದ ಗೃಹ ಜ್ಯೋತಿ ಯೋಜನೆ
ಗೃಹಜ್ಯೋತಿ ಯೋಜನೆ ಅಡಿ ರಾಜ್ಯದ 1 ಕೋಟಿ 62 ಲಕ್ಷ ಕುಟುಂಬಗಳು ಪ್ರತಿ ತಿಂಗಳು ಶೂನ್ಯ ವಿದ್ಯುತ್‌ ಬಿಲ್‌ ಪಡೆಯುತ್ತಿವೆ. ಈ ಹಣವನ್ನು ಅವರು ದೈನಂದಿನ ಖರ್ಚುಗಳಿಗೆ ವ್ಯಯ ಮಾಡುತ್ತಿದ್ದಾರೆ. ಇನ್ನು ಕೆಲವರು ಭವಿಷ್ಯದ ಕಷ್ಟಗಳಿಗೆ ಉಳಿತಾಯ ಮಾಡುತ್ತಿದ್ದಾರೆ. ಇದು ಏಕೆ ಬಿಜೆಪಿಯವರ ಕಣ್ಣಿಗೆ ಕಾಣುತ್ತಿಲ್ಲ? ಇದೆಲ್ಲವೂ ಕಣ್ಣಿಗೆ ಕಾಣುತ್ತಿಲ್ಲವೇ ಅಥವಾ ಜನರ ದಿಕ್ಕು ತಪ್ಪಿಸುವ ತಂತ್ರವೇ ಎಂದು ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷರಾ ದಿನೇಶ ಗೂಳಿಗೌಡ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಎಲ್ಲವೂ ದಾಖಲೆ ಇದೆ; ಕೇಳಿ ಪಡೆಯಿರಿ!
ಈ ಅಂಕಿ, ಅಂಶಗಳು ನಿಖರವಾಗಿದ್ದು, ದಾಖಲೆ ಸಮೇತ ಇವೆ. ಒಂದು ವೇಳೆ ಇದರ ಬಗ್ಗೆ ಅನುಮಾನವಿದ್ದರೆ ಪ್ರತಿಪಕ್ಷಗಳು ರಾಜ್ಯದ ಮುಖ್ಯ ಕಾರ್ಯದರ್ಶಿ ಅಥವಾ ಜಿಲ್ಲಾಧಿಕಾರಿಗಳ ಬಳಿ ಕೇಳಿ ಮಾಹಿತಿಯನ್ನು ಖಚಿತ ಮಾಡಿಕೊಳ್ಳಲಿ. ಇದರ ಹೊರತಾಗಿ ತಪ್ಪು ಮಾಹಿತಿ ನೀಡಿ, ಅಪ ಪ್ರಚಾರ ಮಾಡುವುದು ಸರಿಯಲ್ಲ ಎಂದು ದಿನೇಶ್‌ ಗೂಳಿಗೌಡ ಅಸಮಾಧಾನವನ್ನು ಹೊರಹಾಕಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!