ಪೂರ್ವಜರು ಕಟ್ಟಿ ಬೆಳೆಸಿದ ಜಾನಪದವನ್ನು ಐಎಎಸ್ ಅಧಿಕಾರಿಯಾಗಿದ್ದ ಡಾ.ಎಚ್.ಎಲ್.ನಾಗೇಗೌಡರು ಸಂಗ್ರಹಿಸಿ ಕಾಪಿಟ್ಟುಕೊಂಡರು, ಅಂತಹ ಜಾನಪದ ನಾಡಿನಲ್ಲಿ ಉಳಿಯಬೇಕು, ಜನಪದ ಸಂಸ್ಕೃತಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪಸರಿಸಬೇಕು, ಇದಕ್ಕೆ ಬೇಕಾದಂತಹ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ, ಸ್ವಾಗತ ಸಮಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ಮಂಡ್ಯ ಜಿಲ್ಲೆಯ ಅಂಬೇಡ್ಕರ್ ಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಅಖಿಲ ಕರ್ನಾಟಕ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಕಲೆಗೆ ಸಂಪೂರ್ಣವಾದ ಜೀವವನ್ನು ತುಂಬಿ ಕಲೆ ಉಳಿಸಲು ಹಿರಿಯ ಐಎಎಸ್ ಅಧಿಕಾರಿ ಡಾ.ಹೆಚ್.ಎಲ್.ನಾಗೇಗೌಡರು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಜನಪದ ಲೋಕವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವಂತಹ ಪ್ರಯತ್ನವನ್ನು ಇಂದು ಈ ಕಾರ್ಯಕ್ರಮ ಮಾಡುತ್ತಿದೆ ಎಂದರು.
”ಜನವಾಣಿ ಬೇರು ಕವಿವಾಣಿ ಹೂವು” ಎಂಬ ಮಾತನ್ನು ಕನ್ನಡದ ಕಣ್ವ ಬಿ.ಎಂ.ಶ್ರೀ ಅವರು ಹೇಳಿದ್ದಾರೆ. ಈ ಮಾತು ಜನಪದದ ಶ್ರೀಮಂತಿಕೆಯನ್ನು ಹಾಗೂ ಪರಂಪರೆಯನ್ನು ಸಾರುತ್ತದೆ. ಜನಪದ, ಸಾಹಿತ್ಯ, ಕಾವ್ಯ, ಕಲೆಗಳ ತವರೂರು ಕರ್ನಾಟಕ ಎಂದು ಹೇಳಿದರು.
ಮಲೆ ಮಹದೇಶ್ವರ, ಮಂಟೇಸ್ವಾಮಿ, ಸೌದತ್ತಿಯಲ್ಲಮ್ಮ ಮೈಲಾರಲಿಂಗ, ಚುಂಚನಗಿರಿ ಭೈರವ, ಬಿಳಿಗಿರಿರಂಗನ ಬಗ್ಗೆ ಅಂತರ್ ಸತ್ಯ ಜಾನಪದ ಪರಂಪರೆಯಲ್ಲಿ ಅಮರವಾಗಿ ಉಳಿದಿದೆ. ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲು ರಾಜ್ಯದ ಮೂಲೆ ಮೂಲೆಗಳಿಂದ ಜನಪದ ಕಲಾವಿದರು, ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಹಳ ಉತ್ತಮವಾಗಿ ಧ್ವಜಾರೋಹಣವನ್ನು ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಜಯರಾಂ ರಾಯಪುರ ಮಾತನಾಡಿ, ಜನಪದ ಕಲೆಯನ್ನು ಉಳಿಸಲು ಇಂದಿನ ದಿನಗಳಲ್ಲಿ ಗಂಭೀರ ಚಿಂತನೆ ನಡೆಯಬೇಕಿದೆ. ಪೂಜಾ ಕುಣಿತ ಡೊಳ್ಳುಕುಣಿತ, ಇನ್ನಿತರ ಕಲೆಗಳನ್ನು ಶಾಲೆಗಳಲ್ಲಿ ಅಭ್ಯಾಸ ಮಾಡಿಸಿ ಆಧುನಿಕ ಕಾಲದಲ್ಲಿ ಜಾನಪದ ಕಲೆಗಳು ಉಳಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಜನಪದ ಕಲೆಗಳನ್ನು ಕಲಿಯುವುದರ ಜೊತೆಗೆ ಬೆಳೆಸಬೇಕು. ಮುಂದಿನ ಪೀಳಿಗೆಗೂ ಸಹ ಜನಪದದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು




