Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಲ್ಲಾ ವರ್ಗದವರಿಗೂ ಉನ್ನತ ಶಿಕ್ಷಣ ನೀಡುವುದು ಕರಾಮುವಿ ಉದ್ದೇಶ

ಬಡಜನರೂ ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಜನರಿಗೂ ಉನ್ನತ ಶಿಕ್ಷಣ ನೀಡುವುದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉದ್ದೇಶವಾಗಿದೆ ಎಂದು ಕರಾಮುವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ತಿಳಿಸಿದರು.

ಮಂಡ್ಯ ನಗರದ ವಿವೇಕಾನಂದ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಖಾಸಗಿ ಕಾಲೇಜುಗಳ ರೀತಿ ಕೋರ್ಸ್ ಗಳ ಕರಪತ್ರವನ್ನು ಸಿದ್ಧಪಡಿಸಿ ಪ್ರಚಾರ ನಡೆಸುತ್ತಿದೆ. ಕರಪತ್ರದಲ್ಲಿರುವ ಕ್ಯೂಆರ್ ಕೋಡ್ ಉಪಯೋಗಿಸಿ ಕಾ.ರ.ಮು.ವಿ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಎಲ್ಲಾ ಮಾಹಿತಿಗಳನ್ನು ಪಡೆಯಬಹುದಾಗಿದೆ. ದಾಖಲಾತಿಗೆ ಪ್ರವೇಶ ಶುಲ್ಕ ವನ್ನು ಸಂಪೂರ್ಣವಾಗಿ ಅನ್ ಲೈನ್ ನಲ್ಲಿ ಪಾವತಿ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಡವರು ಸೇರಿದಂತೆ ಸಮಾಜದಲ್ಲಿರುವ ಎಲ್ಲಾ ವರ್ಗದವರೂ ಉನ್ನತ ಶಿಕ್ಷಣ ಪಡೆಯುವುದು ನಮ್ಮ ಉದ್ದೇಶ.ಉನ್ನತ ಶಿಕ್ಷಣ ಕಷ್ಟಕರ ಎಂಬುವವರಿಗೂ ಉನ್ನತ ಶಿಕ್ಷಣ ನೀಡುವ ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ದೈಹಿಕ ಅಂಗವಿಕಲರಿಗೆ ಶೇ.50, ಬಿಪಿಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಶೇ. 25, ಆಟೋ/ ಕ್ಯಾಬ್‍ಚಾಲಕರ ಮಕ್ಕಳಿಗೆ ಶೇ. 30 ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು.

ಕೋವಿಡ್ ನಿಂದ ತಂದೆ-ತಾಯಿ ಕಳೆದು ಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಆನ್ ಲೈನ್ ಮುಖಾಂತರ ಬೋಧನಾ ಸಾಮಗ್ರಿಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ. 15 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದರು.

ಕರಾಮುವಿನಿಂದ ಯೂಟ್ಯೂಬ್ ಚಾನೆಲ್ ಮೂಲಕ ಬೋಧನ ವಿಷಯಗಳನ್ನು ನಿರಂತರವಾಗಿ ಅಪ್ಲೋಡ್ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಸಮಯವಿದ್ದಾಗ ಅದನ್ನು ಕೇಳಬಹುದು. ಪಾಠದ ಜೊತೆ ಕಾರ್ಯಕ್ರಮ, ವ್ಯಕ್ತಿ ಪರಿಚಯ, ಜ್ಞಾನಪೀಠ ಪ್ರಶಸ್ತಿ ವಿಜೇತರ ಬಗ್ಗೆ ಉಪನ್ಯಾಸ ಯೂಟ್ಯೂಬ್ ನಲ್ಲಿ ಲಭ್ಯವಿರುತ್ತದೆ ಎಂದರು.

ವಿಜ್ಞಾನಕ್ಕೆ ಸಂಬಂಧಿಸಿದಂತೆ ಬಿ.ಎಸ್.ಸಿ, ಎಂ.ಎಸ್‍ಸಿ. ವಿವಿಧ ಕೋರ್ಸ್‍ಗಳನ್ನು ಪ್ರಾರಂಭಿಸಲಾಗಿದೆ. ಸಂಶೋಧನೆಯ ಚಟುವಟಿಕೆಗಳು, ಲ್ಯಾಬ್ ನಲ್ಲಿ ನಡೆಯುವ ಪ್ರಯೋಗಗಳು ಹಾಗೂ ವಿಡಿಯೋಕರಣಕ್ಕೆ ಲ್ಯಾಬ್ ಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಕರಾಮುವಿ ಆಧುನಿಕ ಹಾಗೂ ತಾಂತ್ರಿಕ ಶಿಕ್ಷಣ ವ್ಯವಸ್ಥೆ ವಿಶ್ವವಿದ್ಯಾಲಯದ ಹೆಗ್ಗಳಿಕೆಯೂ ಆಗಿದ್ದು , ನಿಯಮಿತವಾಗಿ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಅಂತರಾಷ್ಟ್ರೀಯ ವಿವಿಗಳ ಜೊತೆಯು ಎಂಓಯು ಮುಖಾಂತರ ವಿವಿಯ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಕೂಡ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಮಂಡ್ಯ ಪ್ರಾದೇಶಿಕ ಕೇಂದ್ರದಲ್ಲಿ ಕಳೆದ ವರ್ಷ 1200 ಪ್ರವೇಶಾತಿಯಾಗಿದ್ದು. ಈ ವರ್ಷ 5000 ಪ್ರವೇಶಾತಿ ಗುರಿಯನ್ನು ಹೊಂದಿದೆ. ಡ್ಯುಯಲ್ ಪದವಿ ಪಡೆಯಲು ಮಾನ್ಯತೆ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯು ಹೆಚ್ಚಳವಾಗುವ ಸಾಧ್ಯತೆ ಇದ್ದು , ಈ ವರ್ಷ ರಾಜ್ಯಾದ್ಯಂತ ಒಂದು ಲಕ್ಷ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡು ಗುಣಮಟ್ಟದ ಶೈಕ್ಷಣಿಕ ಸವಲತ್ತುಗಳನ್ನು ಒದಗಿಸಲಾಗುವುದು.

ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ, ಎಂ.ಸಿ.ಎ ಕೋರ್ಸ್‌ಗಳ ಮಾನ್ಯತೆ ಕೋರಿ ಯುಜಿಸಿಗೆ ಅರ್ಜಿ ಸಲ್ಲಿಸಲಾಗಿದೆ. ಮಾನ್ಯತೆ ದೊರಕುವ ಭರವಸೆ ಇದ್ದು ಈ ಬಾರಿ ಮೂರು ಕೋರ್ಸ್ ಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು ಎಂದರು.

ಸಂಪೂರ್ಣ ಪ್ರವೇಶಾತಿ ಮತ್ತು ಅಂಕ ಪಟ್ಟಿಯು ಡಿಜಿಟಲೀಕರಣವಾಗಿದೆ. ಪ್ರವೇಶಾತಿಯನ್ನು ಅನ್ ಲೈನ್ ಮೂಲಕವೇ ನಡೆಸಲಾಗುತ್ತಿದೆ. ಸಂಪೂರ್ಣ ಪಾರದರ್ಶಕತೆಗೆ ಅನುಗುಣವಾಗಿ ಶುಲ್ಕದ ಮುಖಾಂತರ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ತಾವಿರುವ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಯೋಜನ ಪಡೆದುಕೊಳ್ಳಲು ಸುಸಜ್ಜಿತ ಪ್ರಾದೇಶಿಕ ಕೇಂದ್ರಗಳು ಲಭ್ಯವಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಾದೇಶಿಕ ನಿರ್ದೇಶಕ ಡಾ. ಸುಧಾಕರ್ ಹೊಸಳ್ಳಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!