Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರಶಸ್ತಿ-ಪುರಸ್ಕಾರಗಳಿಗೆ ಮಾರಾಟವಾಗದೇ ಅಂಬೇಡ್ಕರ್ ಆಶಯ ಪಾಲಿಸಬೇಕಿದೆ

✍️ ಸಿದ್ದರಾಜು

ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ಜನಶಕ್ತಿ ಸಂಘಟನೆ, ಮಂಡ್ಯ.


  • ವಾಸ್ತವಾಂಶ ಅರಿಯಲು ಪೌರಕಾರ್ಮಿಕರು ಅಲೋಚನೆಗೆ ಒಳಪಡುವ ಅಗತ್ಯವಿದೆ

  • ಅಂಬೇಡ್ಕರ್ ಚಿಂತನೆಗಳು, ವೈಚಾರಿಕ ನಿಲುವುಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಬೇಕಾಗಿದೆ

ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಪೌರಕಾರ್ಮಿಕರ ಮಕ್ಕಳ ಪ್ರತಿಭಾ ಪುರಸ್ಕಾರ ಒಂದು ಒಳ್ಳೆಯ ಕಾರ್ಯಕ್ರಮವಾಗಿತ್ತು ಅಲ್ಲದೇ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವಂತಿತ್ತು. ಹಿಂದೆದೂ ಸಿಗದ ಗೌರವ, ನನ್ನ ಜಾತಿ, ವರ್ಗ, ಸಮುದಾಯಕ್ಕೆ ಸಿಕ್ಕಿದ್ದು, ಸಂತಸ ಉಂಟು ಮಾಡಿತು. ಅಸ್ಪೃಶ್ಯತೆಯ ಕಾರಣದಿಂದ  ದೂರವಿದ್ದೂ ಊರ ಹೊರಗಿದ್ದ, ನನ್ನ ಜನ ಸನ್ಮಾನ ಪಡೆದದ್ದು ಮರೆಯಲಾಗದ ಖುಷಿ ಕೊಟ್ಟಿತು.

ಊಳಿಗಮಾನ್ಯ ವ್ಯವಸ್ಥೆಯ ಕಾಲಘಟ್ಟದಲ್ಲಿ ಪಟ್ಟಣ, ನಗರ ನಿರ್ಮಿಸಲು ಮೇಲ್ವರ್ಗದ ಜನರು ಅರಣ್ಯ ವಾಸಿಗಳಾದ ಬುಡಕಟ್ಟು ಜನರನ್ನು ಅವರ ಮನೆಯ ಕಾರ್ಯಕ್ರಮಗಳಿಗೆ ಚಾಕರಿ ಮಾಡುವುದಕ್ಕೆ, ಗಲೀಜನ್ನು ಸ್ವಚ್ಚಗೊಳಿಸುವುದಕ್ಕೆ ಸೇವಕರಾಗಿ ನೇಮಿಸಿಕೊಂಡಿದ್ದರು. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಅಸಮಾನತೆ, ತಾರತಮ್ಯ ಪದ್ಧತಿಯಾಗಿತ್ತು.

ಮೇಲ್ವರ್ಗದ ಜನರು ತಮ್ಮ ಊರು ಕೇರಿಗಳನ್ನು ಸ್ಚಚ್ಚ ಮಾಡುವ ಪೌರ ಕಾರ್ಮಿಕರನ್ನು ಹಲವಾರು ಹಳ್ಳಿಗಳಲ್ಲಿ ದೂರವಿಟ್ಟಿರುವುದು ಇಂದಿಗೂ ಕಣ್ಣಿಗೆ ಕಾಣುತ್ತದೆ. ಇಂದಿಗೂ ಸಹ ಮೇಲ್ವರ್ಗದ ಮನೆ, ಗದ್ದೆಗಳಲ್ಲಿ ತಳ ಸಮುದಾಯದ ಜನರನ್ನು ಜೀತದಾಳುಗಾಗಿ ದುಡಿಸಿ ಕೊಳ್ಳುತ್ತಿದ್ದರು. ಇವತ್ತಿಗೂ ದುಡಿಸಿಕೊಳ್ಳುತ್ತಿದ್ದಾರೆ‌. ವರ್ಣಾಶ್ರಮದ ಪೂರ್ವದಿಂದಲೂ ಕೂಡ ಬ್ರಾಹ್ಮಣ್ಯ ವ್ಯವಸ್ಥೆಗೆ ಮತ್ತು ಮೆಲ್ವರ್ಗದ ಜನರಿಗೆ ಅಸ್ಪೃಶ್ಯರೇ  ಚಾಕರಿ ಮಾಡುವ ಕಾಲಾಳುಗಳಾಗಿ ದುಡಿಯುತ್ತಿದ್ದಾರೆ.

ಆದರೆ ಇವತ್ತಿನ ಸಮಾಜದಲ್ಲಿ ಕರ್ನಾಟಕ ರಾಜ್ಯದಲ್ಲಿ ಹಾಗೂ ಹಲವು ಕಡೆ ಇರುವ ಮೇಲ್ವರ್ಗದ ಜನ ಸಮುದಾಯವು ಊಳಿಗಮಾನ್ಯ ಪದ್ದತಿಯ ಪಾಳೇಗಾರಿಕೆಯ ಸಂಸ್ಕೃತಿಯನ್ನು ಮುಂದುವರೆಸುತ್ತಿದೆ. ಇದರಲ್ಲಿ ಧಮನಿತ ಜನರೇ ಬಿಟ್ಟಿ ಚಾಕರಿ ಮಾಡಿಕೊಂಡು ಮೇಲ್ವರ್ಗದ ಶ್ರೀಮಂತರಿಗೆ ಸುಖ ಜೀವನ ನಡೆಸಲು ತಮ್ಮ ಶ್ರಮವನ್ನು ಧಾರೆ ಎರೆಯುತ್ತಿದ್ದಾರೆ.

ಆದರೂ, ನಮ್ಮ ಶೋಷಿತ ಜನರನ್ನು ಮೇಲ್ವರ್ಗ ಜನರು, ಸಮಾನವಾಗಿ ನೋಡಲು ಸಾಧ್ಯವಾಗದೆ ಅನುಮಾನಾಸ್ಪದವಾಗಿಯೇ ನೋಡುತ್ತಿರುವುದು, ಶತ ಶತಮಾನಗಳಿಂದ ನಡೆದು ಬಂದಿದೆ. ಪೌರ ಸೇವೆ ಮಾಡುವ ಜಾತಿಯ ಜನರನ್ನು ಮುಖ್ಯವಾಹಿನಿಗೆ ತರಬಯಸುತ್ತಿದದ್ದು ಮೂಗಿಗೆ ತುಪ್ಪ ಸವರಿವಂತಿತ್ತು. ಬ್ರಾಹ್ಮಣ್ಯ ಮತ್ತು ಮೌಢ್ಯಕ್ಕೆ, ಬಲಪಂಥೀಯರ ದಬ್ಬಾಳಿಕೆಗಳಿಗೆ ಸಿಕ್ಕಿ ಕೊಂಡವರು. ಸಹನೆ ತಾಳ್ಮೆಯಿಂದ ಶಿಕ್ಷಣ, ಸಂಘಟನೆ, ಹೋರಾಟಗಳಿಂದ ಗಟ್ಟಿಗೊಳ್ಳುತ್ತಾ ಉನ್ನತಿಕರಣ ಹೊಂದಬೇಕು ಎಂಬ ಕನಸೊತ್ತಿದ್ದರು.

ಬಲಪಂಥೀಯರು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಳ ಸಮುದಾಯಗಳನ್ನೇ ಮೆಟ್ಟಿಲು ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿರುವಾಗ, ಪೌರಕಾರ್ಮಿಕರ ಸಮುದಾಯ ಅಲ್ಪ ತೃಪ್ತ ಕೆಲವು ಸ್ವಾರ್ಥ ನಾಯಕರು ಇಂದು ಈ ತಾರತಮ್ಯ ಇರುವ ಸಮಾಜದಲ್ಲಿ ಉನ್ನತಿಕರಣ ಹೊಂದಲು ಪೌರಕಾರ್ಮಿಕರಿಗೆ ಎಲ್ಲಾ ಮೇಲ್ವರ್ಗದವರು ಸೇರಿ ಮಾಡುತ್ತಿರುವ ಹುನ್ನಾರವನ್ನು ಬಯಲಿಗೆಳೆದು, ಸತ್ಯಾಂಶವನ್ನು ಜಗತ್ತಿಗೆ ಅನಾವರಣಗೊಳಿಸಬೇಕಿದೆ.

ವಾಸ್ತವಾಂಶವನ್ನು ಅರಿಯಲು ಪೌರಕಾರ್ಮಿಕರು ಅಲೋಚನೆಗೆ ಒಳಪಡುವ ಅಗತ್ಯವಿದೆ, ತಳಸಮುದಾಯದ ಜನರಿಗೆ ಇರುವ ಅನುದಾನಗಳನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತಿರುವವವರು ಮೇಲ್ವರ್ಗದವರು ತಮ್ಮ ಅಪ್ಪನ ಮನೆ ಆಸ್ತಿಗಳನ್ನು ತಂದು, ನಮ್ಮ ಕಲ್ಯಾಣ ಯೋಜನೆಗಳಿಗೆ ಬಳಸುವ ಹಾಗೆ ಸಮಾಜದಲ್ಲಿ ಬಿಂಬಿಸುಕೊಳ್ಳುತ್ತಿದ್ದಾರೆ.

ತಳ ಸಮುದಾಯದ ಕೆಲವು ನಾಯಕರು ಸಹ ಜೊಲ್ಲು ಸುರಿಸಿಕೊಂಡು, ಮೇಲ್ವರ್ಗದ ಜನರಿಗೆ ಅಡಿಯಾಳುಗಳಾಗಿದ್ದಾರೆ. ಇಂತಹ ಜೊಲ್ಲು ಸುರಿಸುವ ನಾಯಕರು, ಆತ್ಮ ವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟ ಆಲೋಚನೆ, ಚಿಂತನೆಗಳು, ವೈಚಾರಿಕ ನಿಲುವುಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡದಿದ್ದರೆ ಇವತ್ತಿನ ಅಸ್ಪೃಶ್ಯ ಸಮುದಾಯ ಜನಸಾಮಾನ್ಯರು ಮತ್ತು ನಾಯಕರು ಎಲ್ಲಿ ಇರುತ್ತಿದ್ದೇವು ಎಂದು ಊಹೆ ಮಾಡಿಕೊಳ್ಳುವುದು ಸಹ ಸಾಧ್ಯವಾಗದೇ ಗುಲಾಮಗಿರಿಗೆ ತುತ್ತಾಗಿ, ಜೀತದ ಅಳುಗಳಾಗಿ ಜೈಲು ಹಕ್ಕಿಗಳಂತೆ ವಾಸಿಸುತ್ತಿದ್ದವೇನೂ ಎಂಬುದನ್ನು ಮರೆಯುವಂತಿಲ್ಲ.

ನಾನು ಈ ಲೇಖನದಲ್ಲಿ ಹೇಳಬಯಸುವುದು ಇಷ್ಟೇ. ರಾಜಕೀಯ ಅಧಿಕಾರ ಬೇಕು ಅಂದರೆ ನಾವು, ಹೋರಾಟ ಮಾಡಿ ಪಡೆದುಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸವೆದ ನಂತರವೂ ಶೋಷಿತರಾದ ನಾವು ಇವತ್ತಿನ ಡಿಜಿಟಲ್ ಯುಗದಲ್ಲಿದ್ದರೂ, ನಮ್ಮ ಹಕ್ಕು ಬಾಧ್ಯತೆಗಳಿಗೆ ಹೋರಾಟ ಮಾಡುತ್ತಿರುವುದು ತಪ್ಪಿಲ್ಲ. ಆದ್ದರಿಂದ ವ್ಯಾಪಾರ ಕುದುರಿಸಿಕೊಳ್ಳುವ ಗುಲಾಮರನ್ನಾಗಿಸಿ, ಮತ ಬ್ಯಾಂಕ್ ಮಾಡಿಕೊಳ್ಳುವ ಯಾವುದೇ ರಾಜಕೀಯ ಪಕ್ಷದ ಬಾಲಗೊಂಸಿಗಳಾಗಬಾರದು, ಆದಷ್ಟು ಪ್ರಾಮಾಣಿಕವಾಗಿ ಇರಬೇಕು. ಹೀಗಿರಲು ಯಾವುದೇ ಲಾಭದಾಸೆಯನ್ನು ಕೈ ಬಿಡಬೇಕು.

ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಮನ್ನಣೆ ನೀಡುವುದು ಬಹಳ ಅಗತ್ಯ, ಆಧುನಿಕ ಬ್ರಾಹ್ಮಣ್ಯವನ್ನು ಹೇರಲು ಸುಳ್ಳು ಪೊಳ್ಳು ಭರವಸೆಗಳನ್ನು ನೀಡಿ ರಾಷ್ಟ್ರದ ನಾಯಕರು ನಮ್ಮನ್ನು ನಂಬಿಸಲು ಹೊರಟಿರುವ ಈ ಸಂದರ್ಭದಲ್ಲಿ, ತಮ್ಮ ಜೀವನವನ್ನು ಒತ್ತೆ ಇಟ್ಟು ಸಂವಿಧಾನ ರಚಿಸಿ, ಶೋಷಿತರ ಪರವಾಗಿ ಹಗಲಿರುಳು ಶ್ರಮಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮರೆತು ಮುಂದೆಸಾಗಬಾರದು ಎಂಬ ಎಚ್ಚರಿಕೆಯೊಂದಿಗೆ ನಾವು ಹೆಜ್ಜೆ ಇಡಬೇಕೆಂಬುದು ನನ್ನ ಅಶಯ.

ನಮ್ಮ ಸಮುದಾಯದ ನಾಯಕರಾಗಿ ಬೆಳೆದು ಬಂದ ಮೇಲೆ ಸ್ವಾರ್ಥ, ಹಣದಾಸೆ, ಹಾರ ತುರಾಯಿ, ಸನ್ಮಾನ ಕೀರಿಟ, ವೇದಿಕೆಗಳಿಂದ ದೂರ ಇರಬೇಕು, ಯಾವುದೇ ರಾಜಕೀಯ ಪಕ್ಷದ ಗುಲಾಮರಾಗಬಾರದು, ಅಮಾಯಕ ಜನರ ರಕ್ತ ಹೀರುವ ತಿಗಣೆಗಳಾಗಬಾರದು, ಇಷ್ಟು ಬದ್ದತೆಗಳು ನಮ್ಮ ಪೌರ ಕಾರ್ಮಿಕ ಸಮುದಾಯದ
ಮುಂಖಡರಲ್ಲಿ ಬಂದರೆ ನಾವು ಸಹ ಸಮಾಜದ ನೈಜ್ಯವಾದ ಚಿಂತನೆಯಲ್ಲಿದ್ದೇವೆಂದು ಅನಿಸುತ್ತದೆ, ಅಲ್ಲದೇ ಇದು ದ್ರಾವಿಡ ಸಮುದಾಯಕ್ಕೆ ಸಂದ ಗೌರವವು ಆಗುತ್ತದೆ.

ಸಮಾಜಘಾತುಕ ಶಕ್ತಿಗಳು, ಕೋಮುವಾದದ ಹೆಸರಲ್ಲಿ ಸಾಮರಸ್ಯವನ್ನು ಕದಡಿ, ಎಲ್ಲಾ ವರ್ಗದ ಜನರ ಭಾವನೆಗಳಿಗೆ ಧಕ್ಕೆ ಮಾಡುವ ಕೆಲವೇ ಕೆಲವು ಜನರು ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಂದರ್ಭದಲ್ಲಿ ಉನ್ನತ  ದ್ರಾವಿಡ ಚಳವಳಿಯ ಸಂಸ್ಕೃತಿ-ಪಂರಪರೆ ಹೊಂದಿರುವ ನಾವು ಸಾಮರಸ್ಯ, ಶಾಂತಿ ನೆಲೆಸಲು ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಚಿಸಬೇಕಾಗಿದೆ.

ಪೌರಕಾರ್ಮಿಕರ ಮಕ್ಕಳಿಗೆ ಇತ್ತಿಚೇಗೆ ನಡೆದ ಕಾರ್ಯಕ್ರಮಗಳಂತಹ ಸಮಾರಂಭಗಳನ್ನು ನಮ್ಮ ಸಮುದಾಯದ ಜನರಿಗೆ ನಾವೇ ಏರ್ಪಡಿಸಬೇಕು. ಯಾರೋ ಅಧಿಕಾರ ಹೊಂದಿದ ಮೇಲ್ವರ್ಗದ ಜನ, ಇಂತಹ ಕಾರ್ಯಕ್ರಮಗಳನ್ನು ಮಾಡಿ, ಅವರು  ಪ್ರಚಾರ ಗಿಟ್ಟಿಸಿಕೊಳ್ಳಲು ಬಿಡಬಾರದು ಎಂಬ ಅರಿವು ನಮಗಿರಬೇಕು.
ನನ್ನ ಈ ಅನಿಸಿಕೆಯಲ್ಲಿ ಯಾರಿಗೂ ನೋವು ಉಂಟು ಮಾಡುವ ಉದ್ದೇಶವಿಲ್ಲ, ಆದರೂ ನಮ್ಮ ಜನರು ಎಚ್ಚೆತ್ತುಕೊಳ್ಳಬೇಕು. ಇದು ಅಂಬೇಡ್ಕರ್ ಅವರ ಆಶಯವು ಆಗಿದೆ.

ಪೌರ ಕಾರ್ಮಿಕರ ಸಮುದಾಯಕ್ಕೆ ಸಿಗಬೇಕಾದ ಸವಲತ್ತುಗಳು

  • ಪೌರಕಾರ್ಮಿಕ ಸಮುದಾಯದ ವಿದ್ಯಾರ್ಥಿಗಳಿಗೆ ಸರಿಯಾಗಿ ಸಮಾಜ ಕಲ್ಯಾಣ ಇಲಾಖೆ ಮಾರ್ಗದರ್ಶನ ನೀಡಬೇಕು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಸ್ಪೂರ್ತಿ ತುಂಬಲು ಅಗತ್ಯ ಕ್ರಮ ಕೈಗೊಳ್ಳಬೇಕು.
  • ಪೌರ ಸೇವಾ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು, ವಿಶೇಷ ಅನುದಾನದಡಿಯಲ್ಲಿ ಸರ್ಕಾರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಉಚಿತವಾದ ಕಾನೂನು ಬದ್ಧ ಮೀಸಲಾತಿ ಜಾರಿ ಮಾಡಲು ನಿರ್ಣಯ ಕೈಗೊಳ್ಳಬೇಕು.
  • ಗ್ರಾಮ ಪಂಚಾಯ್ತಿ, ಪೌರಕಾರ್ಮಿಕರಿಗೆ ಸರಿಯಾದ ಕಾನೂನುಗಳನ್ನು ಜಾರಿಮಾಡಬೇಕು, ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು, ಮತ್ತೊಮ್ಮೆ ಪರಿಶೀಲಿಸಿ ಶಿಫಾರಸ್ಸು ಮಾಡಬೇಕು.
  • ಪೌರ ಕಾರ್ಮಿಕ ಸಮುದಾಯವು ಅರ್ಥಿಕ ಸಬಲರಾಗಲೂ ನೆರವು ಮತ್ತು ಪ್ರೋತ್ಸಾಹ ಧನಗಳು, ಮಧ್ಯವರ್ತಿಗಳ ಪಾಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದ ಇಲಾಖೆಗಳು ಕಡಿವಾಣ ಹಾಕಬೇಕು.
  • ಪೌರ ಸೇವಕರಿಗೆ ಬರುವ ಅನುದಾನಗಳನ್ನು, ಕೇವಲ ಕಾರ್ಯಕ್ರಮಗಳಿಗೆ ಬಳಸಿಕೊಳ್ಳದೆ ಅಭಿವೃದ್ಧಿ  ಕಾರ್ಯಗಳಿಗೂ ಬಳಸಿಕೊಳ್ಳಬೇಕು.
  • ವಂಚಿತ ಸಮುದಾಯಗಳಿಗೆ ವಸತಿ ಯೋಜನೆ ಮತ್ತು ಪುನರ್ವಸತಿ ಕಲ್ಪಿಸುವಂತಾಗಬೇಕು. ಯಾವ ಯೋಜನೆಯು ಕಟ್ಟ ಕಡೆಯ ಸಮುದಾಯಕ್ಕೆ ಇಷ್ಟು ವರ್ಷಗಳಾದರೂ ತಲುಪಿಲ್ಲ, ತಲುಪಿಸುವತ್ತಾ ಮುಂದಾಗಬೇಕು.
  • ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು.
  • ಸ್ವಚ್ಚತಾ ಕೆಲಸ ಮಾಡುವ ಎಲ್ಲಾ ಕ್ಷೇತ್ರದ ಕಾರ್ಮಿಕರಿಗೂ ಇತರೆ ಮೇಲ್ವರ್ಗದ ಆಫೀಸರ್ ಹುದ್ದೆಯ ವೇತನ ನೀಡಬೇಕು. ಒಬ್ಬ ಕಾರ್ಮಿಕನಿಗೆ ವೇತನ ಕನಿಷ್ಟ 30 ಸಾವಿರ ರೂ. ಇರಬೇಕು.
  • ಸರ್ಕಾರದ ಉದ್ಯೋಗದಲ್ಲಿರುವ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲೆ ಓದಬೇಕು ಅನ್ನುವ ನಿಯಮ ಜಾರಿ ಆಗಲೇಬೇಕು. ಖಾಸಗಿ ಶಾಲೆಗಳಿಗೆ ಕಟ್ಟುವ ಫೀಜಿನ ಶುಲ್ಕದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸುವ ಕ್ರಮ ಕೈಗೊಳ್ಳಬೇಕು.
  • ತೆರಿಗೆ ನೀಡುತ್ತಿರುವ ಪೌರಕಾರ್ಮಿಕ ಮತ್ತು ಸ್ವಚತಾ ಕಾರ್ಮಿಕ ಸಮುದಾಯದ ಎಲ್ಲಾ ವರ್ಗದ ಬಿ.ಪಿ.ಎಲ್  ಕಾರ್ಡುದಾರ ಕುಟುಂಬಗಳಿಗೆ ಉಚಿತ ಸಾರ್ವತ್ರಿಕ ಪಡಿತರ ಯೋಜನೆ ಕಡ್ಡಾಯವಾಗಿ ಜಾರಿಯಾಗಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗ, ಎಲ್ಲಾ ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಾಗುವಂತೆ ಇರುವಂತೆ ನೋಡಿಕೊಳ್ಳಬೇಕು. ಘನತೆಯ ಬದುಕು, ಗೌರವದ ಬಾಳು ನೀಡುವ ಕರ್ತವ್ಯ ಸರ್ಕಾರಗಳದ್ದೇ ಅಗಿರಬೇಕು.

ಇವು ಜಾರಿಯಾದರೆ, ಎಲ್ಲರಿಗೂ ಭದ್ರತೆ ಒದಗಿಸಿಕೊಟ್ಟಂತೆ ಆಗುತ್ತದೆ, ನಮ್ಮ ಸಂವಿಧಾನದ ಶೇ.90ರಷ್ಟು ಜಾರಿಯಾದಂತೆ ಆಗುತ್ತದೆ ಅಲ್ಲವೇ ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!