Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಸತ್ಯಶೋಧನ ಸಮಿತಿ ಹೇಳಿದ್ದೇನು ?

ಇತ್ತೀಚಿಗೆ ಪಾಂಡವಪುರ ತಾಲ್ಲೂಕಿನ ಕಟ್ಟೇರಿಯ RMSA ಹಾಸ್ಟೆಲ್ ನ ವಿದ್ಯಾರ್ಥಿನಿಯರ ಮೇಲೆ ಮುಖ್ಯ ಶಿಕ್ಷಕ ಚಿನ್ಮಯಾನಂದಮೂರ್ತಿ ನೀಡಿದ್ದರೆನ್ನಲಾದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ”ಅತ್ಯಾಚಾರ ವಿರೋಧಿ ಆಂದೋಲನ”ದ ಸತ್ಯಾಶೋಧನ ಸಮಿತಿಯೂ ಡಿ.20ರಂದು ಹಾಸ್ಟೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಈ ಸಂದರ್ಭದಲ್ಲಿ ಆರೋಪಿ ಚಿನ್ಮಯಾನಂದ ಮೂರ್ತಿಯನ್ನು ರಕ್ಷಣೆ ಮಾಡಲು ತೆರೆಮರೆಯಲ್ಲಿ ಹಲವರು ಪ್ರಯತ್ನ ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಸತ್ಯಶೋಧನ ಸಮಿತಿಯೂ ತಿಳಿಸಿದೆ.

ಸತ್ಯಾಶೋಧನಾ ಸಮಿತಿ ನೀಡಿದ ವರದಿಯ ವಿವರ ಹೀಗಿದೆ… 

ಮೊದಲಿಗೆ ಅಲ್ಲಿನ ಮುಖ್ಯಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಚಿನ್ಮಯಾನಂದ ಮೂರ್ತಿಯ ವಿರುದ್ದ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾದ ಮೇಲೆ, ಪಾಂಡವಪುರ ತಾಲ್ಲೂಕಿನ ಬಿಇಓ ಹಾಗೂ ಮಂಡ್ಯದ ಡಿಡಿಪಿಐ ಆಫೀಸ್ ನಿಂದ ಮಕ್ಕಳ ಹೇಳಿಕೆಯನ್ನು ಪಡೆದು ವರದಿ ಸಲ್ಲಿಸಲು ಮೂರು ಜನರ ತಂಡವನ್ನು ನೇಮಿಸಲಾಗಿತ್ತು.

ಈ ತಂಡದಲ್ಲಿದ್ದ ಶಿಕ್ಷಣ ಇಲಾಖೆಯ ಅಧಿಕಾರಿ ಲಕ್ಷ್ಮಿ ಎಂಬುವವರು ಸೇರಿದಂತೆ ಉಳಿದವರು ಸೇರಿ ಮಕ್ಕಳನ್ನು CCTV ಕಣ್ಗಾವಲಿನ ಪ್ರದೇಶವನ್ನು ಬಿಟ್ಟು ಮಹಡಿ ಮೆಲ್ಬಾಗದ ಚಾವಣಿಗೆ ಕರೆದುಕೊಂಡು ಹೋಗಿ, ಮುಖ್ಯ ಶಿಕ್ಷಕ ಕಿರುಕುಳ ನೀಡಿಲ್ಲ. ಅವನಿಂದ ಯಾವ ಅಪಾಯವೂ ಆಗಿಲ್ಲ ಎಂದು ಬರೆದು ಕೊಡಬೇಕು ಎಂದು ಒತ್ತಾಯಿಸಿರುವುದು, ಅಲ್ಲದೇ ಮಕ್ಕಳ ಮೇಲೆ ಒತ್ತಡ ಹೇರಿದರು ಎಂಬುದು ತಿಳಿದು ಬಂದಿದೆ.

ಎರಡನೆಯದಾಗಿ ಅಲ್ಲಿನ ವಾರ್ಡನ್ ಮೇಲೆಯೂ ಒತ್ತಡ ತರಲಾಗುತ್ತಿದೆ, ಜೊತೆಗೆ ಕೆಲಸದಿಂದ ವಜಾಗೊಳಿಸುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ಶ್ರೀಕಂಠೆಗೌಡ ಎಂಬ ಗ್ರಾಮಸ್ಥರು ಕೂಡಾ ಮಾತನಾಡಿ,ಇದರ ಬಗ್ಗೆ ಡಿಡಿಪಿಐ ಹಾಗೂ ಬಿಇಓ ಕಚೇರಿಗೆ ದೂರು ದಾಖಲು ಮಾಡಿರುವುದಾಗಿಯೂ ತಿಳಿಸಿದರು.

ಸ್ಥಳೀಯ ಬಿಇಓ ಲೋಕೇಶ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ವಿಚಾರಿಸಿದಾಗ, ಮೊದಲು ಮಾತನಾಡಲು ತಿರಸ್ಕರಿಸಿದರು. ನಂತರ ತಮ್ಮ ಗಮನಕ್ಕೂ ಈ ಘಟನೆ ವಿವರ ಬಂದಿರುವುದಾಗಿ ಹೇಳಿ ಡಿಡಿಪಿಐ ಅಧಿಕಾರಿಗಳು ಲಕ್ಷ್ಮಿ ತಂಡದ ಬದಲಾಗಿ ಬೇರೆ ಅಧಿಕಾರಿಗಳನ್ನು ನೇಮಕ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಆ ಸಂದರ್ಭದಲ್ಲಿ ಲಕ್ಷ್ಮಿ ತಂಡದವರ ಮೇಲೆ ಕ್ರಮ ಕೈಗೊಳ್ಳುವಂತೆ ಅಲ್ಲಿಯ ಬಿಇಓ ಅವರಿಗೆ ತಿಳಿಸಿದೆವು. ನಂತರ ಡಿಡಿಪಿಐ ಜವರೆಗೌಡ ಅವರನ್ನು ಭೇಟಿ ಮಾಡಿ ಘಟನೆಯ ವಿವರ ತಿಳಿಸಿ, ಲಿಖಿತ ದೂರನ್ನು ಅತ್ಯಾಚಾರ ವಿರೋಧಿ ಆಂದೋಲದ ವತಿಯಿಂದ ಕೊಡಲಾಗುವುದು. ಮಕ್ಕಳನ್ನು ಬಲವಂತವಾಗಿ ಆರೋಪಿಯ ಪರವಾಗಿ ಹೇಳಿಕೆ ಕೊಡುವಂತೆ ಒತ್ತಡ ಹೇರಿರುವ ಕಾರಣ ಅಪರಾಧದಲ್ಲಿ ಶಾಮೀಲಾಗಿ ಆರೋಪಿಯನ್ನು ರಕ್ಷಣೆ ಮಾಡಲು ಲಂಚ ಪಡೆದಿರುವ ಸಾಧ್ಯತೆಗಳಿರಬಹುದು, ಆದ್ದರಿಂದ ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆವು.

ಅಲ್ಲಿನ ಕೆಲವು ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಚಿನ್ಮಯಾನಂದಮೂರ್ತಿಗೆ ದುಡ್ಡಿನ ಆಸೆ ಇರಲಿಲ್ಲ, ಆದರೆ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ವ್ಯಾಮೋಹ ಬಹಳ ಇತ್ತು ಎಂಬುದು ತಿಳಿದು ಬಂದಿದೆ. ಹೆಚ್ಚಿನ ಸತ್ಯಾಸತ್ಯತೆಗಳನ್ನು ಸಂಬಂಧಪಟ್ಟ ಪೋಲಿಸ್ ಇಲಾಖೆಯ ತನಿಖೆಯ ಮೂಲಕ ಬಯಲುಗೊಳಿಸಬೇಕಾಗಿದೆ.

ಏನೇ ಆದರೂ ಪ್ರಕರಣದ ಸತ್ಯಾಸತ್ಯಗಳು ಬೆಳಕಿಗೆ ಬಂದು ಅಪರಾಧಿಗೆ ಕಠಿಣ ಶಿಕ್ಷೆ ಆಗಬೇಕು, ಮಕ್ಕಳನ್ನು ಯಾರು ದುರುಪಯೋಗ ಪಡಿಸಿಕೊಳ್ಳಬಾರದು, ಅಂತವರ ವಿರುದ್ದವು ಕ್ರಮ ಆಗಬೇಕು, ಮಕ್ಕಳಿಗೆ ಹಾಗೂ ಪ್ರಕರಣ ದಾಖಲು ಮಾಡಿದ ವಾರ್ಡನ್ ರವರಿಗೂ ಭದ್ರತೆ ಒದಗಿಸಬೇಕು, ಯಾವುದೇ ಕಾರಣಕ್ಕೂ ಹಾಸ್ಟೆಲ್ ಸಿಬ್ಬಂದಿಯ ಕೆಲಸಕ್ಕೆ ಕುತ್ತು ಬರಬಾರದು.

ಇಂತಹ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳು ಮತ್ತು ಅವರ ಪರವಾಗಿ ಧ್ವನಿ ಎತ್ತುತ್ತಿರುವವರ ಸಂಖ್ಯೆ ಬಹಳ ವಿರಳವಾಗಿದೆ. ಹೀಗಿರುವಾಗ ಇಂತಹ ಬೆದರಿಕೆಯ ಮತ್ತು ಒತ್ತಡದ ಪರಿಸ್ಥಿತಿಗಳು ಉಂಟಾದರೆ ಹೆಣ್ಣು ಮಕ್ಕಳು ಹಿಂಜರಿಯುವ ಹಾಗೂ ಇಂತಹ ಘಟನೆಗಳು ಮುಚ್ಚಿ ಹೋಗುವ ಸಾಧ್ಯತೆಯೂ ಹೆಚ್ಚಾಗಿದೆ. ಯಾವುದೇ ಕಾರಣಕ್ಕೊ ನೊಂದ ಸಂತ್ರಸ್ತರಿಗೆ ಅನ್ಯಾಯ ಆಗಬಾರದು. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂಬುದು ಅತ್ಯಾಚಾರ ವಿರೋಧಿ ಆಂದೋಲನದ ಆಗ್ರಹವಾಗಿದೆ.

ಪಾಂಡವಪುರದ ಕಟ್ಟೇರಿ ಗ್ರಾಮದ RMSA ವಸತಿ ನಿಲಯದ ಮಕ್ಕಳ ಜೊತೆಗೆ ಅತ್ಯಾಚಾರ ವಿರೋಧಿ ಆಂದೋಲನದ ತಂಡ ನಿಲ್ಲುತ್ತದೆ. ತಕ್ಷಣ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಸಂಬಂಧ ಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆಗೆ ಮುಂದಾಗಬೇಕು ಮತ್ತು ಅಪರಾಧಿಗಳ ಪರ ನಿಂತವರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದು ಸಮಿತಿಯು ತಿಳಿಸಿದೆ.

ಸತ್ಯಶೋಧನ ಸಮಿತಿಯಲ್ಲಿ ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ, ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ಜಗದೀಶ್ ನಗರಕೆರೆ, ಸಿದ್ದರಾಜು,  ಸೌಮ್ಯ, ಶಿಲ್ಪ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!