Thursday, September 19, 2024

ಪ್ರಾಯೋಗಿಕ ಆವೃತ್ತಿ

ರೈತರಿಗೆ ಹೆದರಿ ಪೇರಿ ಕಿತ್ತ ಗೃಹ ಸಚಿವರು…!

ಕಬ್ಬಿಗೆ 4,500 ರೂ.ಹಣ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಮಾರ್ಗದಲ್ಲಿ ಇಂದು ಮಧ್ಯಾಹ್ನ ಗೃಹಮಂತ್ರಿ ಅರಗ ಜ್ಞಾನೇಂದ್ರರವರು ಬರುವ ಸುದ್ದಿ ತಿಳಿದ ರೈತಸಂಘದ ನಾಯಕರು ಅವರಿಗೆ ರೈತರ ಬೇಡಿಕೆಗಳ ಬಗ್ಗೆ ಮನವರಿಕೆ ಮಾಡಲು ಮುಂದಾದರು.

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗೃಹಮಂತ್ರಿಗಳ ಕಾರು ಬಂದೊಡನೆ ರೈತರು ತಾವು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಮುಂಭಾಗದಲ್ಲಿ ತಡೆದರು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಕಾರು ನಿಲ್ಲಿಸಿ ಇಳಿದು ಬಂದು ರೈತರ ಬೇಡಿಕೆಗಳ ಬಗ್ಗೆ ಕೇಳುತ್ತಾರೆ ಎಂದು ರೈತರು ಭಾವಿಸಿದ್ದರು.

ಆದರೆ ಗೃಹ ಸಚಿವರು ಕಾರಿನಿಂದ ಇಳಿದು ಸೌಜನ್ಯಕ್ಕೂ ರೈತರನ್ನು ಭೇಟಿ ಮಾಡದೆ ಕಾರಿನಲ್ಲೇ ಕುಳಿತಿದ್ದರು.ರಸ್ತೆಯಲ್ಲಿದ್ದ ಪೋಲಿಸರು ರೈತರ ಮೇಲೆ ಮುಗಿಬಿದ್ದು, ರೈತನಾಯಕರ ಕತ್ತಿನ ಪಟ್ಟಿಗೆ ಕೈ ಹಾಕಿ ಎಳೆದೆಳೆದು ಬಿಸಾಕಿ ಗೃಹ ಸಚಿವರ ಕಾರು ಹೋಗಲು ಅನುವು ಮಾಡಿಕೊಟ್ಟರು.

ನಾವು ರೈತರು ಕಳೆದ ನಾಲ್ಕು ದಿನಗಳಿಂದ ಇಲ್ಲಿ ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ.ಕಬ್ಬಿನ ಬೆಲೆ ನಿಗದಿ,ರೈತರ ಪಂಪಸೆಟ್ಟಿಗೆ ಮೀಟರ್ ಅಳವಡಿಕೆ ಬೇಡ ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ.ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕನಿಷ್ಠ ಸೌಜನ್ಯಕ್ಕಾದರೂ ರೈತರ ಅಹವಾಲು ಏನೆಂದು ಕೇಳಬಹುದಿತ್ತು.

ಆದರೆ ಅವರು ಮಾನವೀಯ ದೃಷ್ಟಿಯಿಂದ ಇಳಿದು ಬರಲಿಲ್ಲದಿರುವುದು ಬೇಸರ ತಂದಿದೆ.ಪೋಲಿಸರು ರೈತರಾದ ನಮ್ಮನ್ನು ಉಗ್ರಗಾಮಿಗಳ ರೀತಿ ನೋಡಿ ಕತ್ತಿನ ಪಟ್ಟಿಗೆ ಕೈ ಹಾಕಿ,ಬೆನ್ನಿನ ಮೇಲೆ ಗುದ್ದಿದ್ದು ಅಮಾನವೀಯ ನಡವಳಿಕೆ ಎಂದು ರೈತಮುಖಂಡರಾದ ಮಧುಚಂದನ್,ಲಿಂಗಪ್ಪಾಜಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಹೆದರಿ ಗೃಹ ಸಚಿವರು ಪೇರಿ ಕಿತ್ತದ್ದು ಸರಿಯಲ್ಲ. ಅವರು ಹಾಗೆ ಮಾಡುವ ಬದಲು ಒಂದೈದು ನಿಮಿಷ ತಾಳ್ಮೆಯಿಂದ ರೈತರ ಮನವಿ ಆಲಿಸಬಹುದಿತ್ತು ಎಂದು ನಾಗರಿಕರು ಕೂಡ ಪ್ರಶ್ನೆ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!