Thursday, September 19, 2024

ಪ್ರಾಯೋಗಿಕ ಆವೃತ್ತಿ

ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಪರಿಶೀಲನೆ: ಸಿಎಂ ಸಿದ್ದರಾಮಯ್ಯ

ಸರ್ಕಾರ ಹಾಗೂ ಜನಸಾಮಾನ್ಯರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುವ ಕಾರ್ಯನಿತರ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಗಂಭೀರವಾದ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಶ್ರೀಕ್ಷೇತ್ರ ಅದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಂಡ್ಯ ಜಿಲ್ಲಾ ಘಟಕದ ಸಹಯೋಗದಲ್ಲಿ ಮಂಡ್ಯನಗರದಲ್ಲಿ ಮಂಗಳವಾರ ನಡೆದ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಅಂತರ ಜಿಲ್ಲಾ ಸಮ್ಮೇಳನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಆಗು-ಹೋಗುಗಳನ್ನು ಭಿತ್ತರಿಸುವ ಪತ್ರಕರ್ತರ ಬದುಕಿನ ಬಗ್ಗೆ ನನಗೆ ಅರಿವಿದೆ, ಅವರಿಗೆ ಜೀವವಿಮೆ ಸೇರಿದಂತೆ ಅಗತ್ಯವಿರುವ ಸವಲತ್ತುಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ವಸ್ತುನಿಷ್ಠ ವರದಿ ಬದ್ದರಾಗಿ

ಕೆಲವು ಪತ್ರಿಕೆ-ಮಾಧ್ಯಮಗಳು ಮೌಢ್ಯ ಬಿತ್ತುವ ಕೆಲಸವನ್ನು ಮಾಡಬಾರದು, ಈ ಹಿಂದೆ ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದನ್ನೇ ದೊಡ್ಡ ಸುದ್ದಿಯಾಗಿ ಮಾಧ್ಯಮಗಳು ಪ್ರಸಾರ ಮಾಡಿದವು, ಆ ಚರ್ಚೆಯಲ್ಲಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು, ಆದಾದ ನಂತರವು ನಾನು ಬಜೆಟ್ ಮಂಡಿಸಿ, 2 ವರ್ಷ ಅಧಿಕಾರದಲ್ಲಿದೆ, ಇಂತಹ ಮೌಢ್ಯ ಬಿತ್ತುವ ಕೆಲಸದಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಕಿವಿಮಾತು ಹೇಳಿದರು.

ಸರ್ಕಾರ ದಾರಿ ತಪ್ಪಿದರೆ ಟೀಕೆ ಮಾಡಿ, ಅದು ರಚನಾತ್ಮಕ ಹಾಗೂ ಆರೋಗ್ಯಕರವಾಗಿರಲಿ, ಸುದ್ದಿ ನೀಡುವ ಧಾವಂತದಲ್ಲಿ ವಸ್ತುನಿಷ್ಠತೆಯನ್ನು ಕಡೆಗಣಿಸಬಾರದು, ಮಾಧ್ಯಮ ಕ್ಷೇತ್ರದಲ್ಲೂ ಇಂದು ಆಧುನಿಕ ತಂತ್ರಜ್ಞಾನ ಕಾಲಿಟ್ಟಿದೆ, ವೇಗವಾಗಿ ಸುದ್ದಿಗಳು ಜನರಿಗೆ ತಲುಪುತ್ತಿವೆ, ನೀವು ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿ, ಅವರ ಸಂಕಷ್ಟ ಸ್ಪಂದಿಸಿ, ಜನಪರವಾದ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ದೇಶದ ಬಹುತ್ವ ಉಳಿಸಲು ಶ್ರಮಿಸಿ

ಧರ್ಮ, ಜಾತಿ ಆಧಾರದ ಮೇಲೆ ಜನರನ್ನು ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳುವವರಿಗೆ ಪ್ರೋತ್ಸಾಹ ನೀಡಬೇಡಿ, ಈ ದೇಶದ ಬಹುತ್ವವನ್ನು ಉಳಿಸಲು ಪತ್ರಕರ್ತರು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

1.98 ಕೋಟಿ ಉಚಿತ ಪ್ರಯಾಣ

ಮಂಡ್ಯ ಜಿಲ್ಲೆಯೊಂದರಲ್ಲಿ ಶಕ್ತಿ ಯೋಜನೆ ಯಾರಿಯಾದ ನಂತರ ಮಹಿಳೆಯರು 1.98 ಕೋಟಿ ಬಾರಿ ಉಚಿತ ಪ್ರಯಾಣ ನಡೆಸಿದ್ದಾರೆ, ಇದರಿಂದ ಮಹಿಳೆಯರಿಗೆ ತುಂಬ ಅನುಕೂಲವಾಗಿದೆ. ಜಿಲ್ಲೆಯಲ್ಲಿ 4.10 ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿ ಹಣ ₹170 ರೂ. ಸಂದಾಯವಾಗುತ್ತಿದೆ, 4 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ತಲಾ ₹2000 ಸಂದಾಯವಾಗುತ್ತಿದೆ, ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 5 ರೂ. ನಂತೆ ಸಹಾಯಧನ ಸಂದಾಯ ಮಾಡುತ್ತಿದ್ದೇವೆ ಎಂದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಪತ್ರಕರ್ತರಿಗೆ ಸಾಂಕೇತಿಕವಾಗಿ ಅಪಘಾತ ವಿಮೆ ವಿತರಣೆ ಮಾಡಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥಸ್ವಾಮಿಜೀ ಆಶೀರ್ವಚನ ನೀಡಿದರು.  ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು,  ಮಂಡ್ಯ ಜಿಲ್ಲಾಧ್ಯಕ್ಷ ಕೆ.ಸಿ.ಮಂಜುನಾಥ್, ಹಿರಿಯ ಪರ್ತಕರ್ತರ ಮತ್ತೀಕೆರೆ ಜಯರಾಂ ಅವರು ಪತ್ರಕರ್ತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ವೇದಿಕೆಯಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ಪಿ.ರವಿಕುಮಾರ್, ಉದಯ್, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಹಿರಿಯ ಪತ್ರಕರ್ತರಾದ ಸೋಮಶೇಖರ್ ಕೆರಗೋಡು, ಪಿ.ಜೆ.ಚೈತನ್ಯ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!