ಈ ದೇಶದ ಸ್ವಾತಂತ್ರಕ್ಕಾಗಿ ತ್ಯಾಗ,ಬಲಿದಾನ ಮಾಡಿರುವ ಸ್ವಾತಂತ್ರ್ಯ ಹೋರಾಟಗಾರರ ಮರೆಯದೆ ಅವರನ್ನು ನೆನಪು ಮಾಡಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಹಾಗೂ ಉಪನ್ಯಾಸಕ ಬಿ.ವಿ ವಸಂತ ಕುಮಾರ್ ತಿಳಿಸಿದರು.
ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದ ಆರತಿ ಶೀರ್ಷಿಕೆಯಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತಹ ಮಹನೀಯರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಆಗಮಾತ್ರ ಸ್ವಾತಂತ್ರ್ಯದ ಹಿನ್ನೆಲೆಯನ್ನು ತಿಳಿದು ಉತ್ತಮ ಸಮಾಜವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದರು.
ದೇಶದ ಸ್ವಾತಂತ್ರ್ಯವನ್ನು ಯುವ ಜನಾಂಗಕ್ಕೆ ತಿಳಿಸಿ,ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ದೇಶದ ಸಂಸ್ಕೃತಿ, ಪರಂಪರೆಯನ್ನು ಅರಿಯಬೇಕು ಎಂದರು.
ಹಳೆಯ ಮೈಸೂರು ಪ್ರಾಂತ್ಯಕ್ಕೆ ಬೇಕಾದ ರಾಜಕೀಯಪ್ರಜ್ಞೆ, ಸಾಮಾಜಿಕ ಪ್ರಜ್ಞೆ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದ್ದು ಮಂಡ್ಯ ಜಿಲ್ಲೆಯ ಶಿವಪುರ ಎಂದರು.
ಆನೇಕ ಸ್ವಾತಂತ್ರ್ಯ ಹೋರಾಟಗಾರರು ಹಳ್ಳಿ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಪಡೆಯುವ ಹೋರಾಟದ ಬೀಜವನ್ನು ಬಿತ್ತಿದರು. ಅಂದಿನ ಕಾಲ ಘಟ್ಟದಲ್ಲಿ 13 ವರ್ಷದ ವಿದ್ಯಾರ್ಥಿಗಳು ಭಾರತದ ಧ್ವಜವನ್ನು ಹಿಡಿದು ಪ್ರಾಣವನ್ನು ಲೆಕ್ಕಿಸದೆ ಹೋರಾಟದಲ್ಲಿ ಇಳಿಯುತ್ತಿದ್ದರು.ಇವುಗಳನ್ನು ಇಂದಿನ ಯುವಜನತೆ ಅರಿತುಕೊಂಡು ಸದೃಢರಾಗ ಬೇಕು ಎಂದರು.
ರಾಮಸ್ವಾಮಿ ಎಂಬ 14 ವರ್ಷದ ಬಾಲಕ ಮೈಸೂರಿನ ಭಾಗದಲ್ಲಿ ನಡೆದ ಸ್ವಾತಂತ್ರ ಹೋರಾಟದಲ್ಲಿ ಬಲಿಯಾಗುತ್ತಾನೆ. ಆ ಪುಟ್ಟ ಬಾಲಕನ ನೆನಪಿಗಾಗಿ ಮೈಸೂರಿನಲ್ಲಿ ರಾಮಸ್ವಾಮಿ ವೃತ್ತ ಎಂದು ವೃತ್ತಕ್ಕೆ ಹೆಸರನ್ನು ಇಡಲಾಗಿದೆ ಎಂದರು.
ಸುರಪುರದ ವೆಂಕಟಪ್ಪ ನಾಯಕನ ಕೋಟೆ ಬ್ರಿಟಿಷರ
ಕೈವಶವಾದದ್ದು ಬ್ರಿಟಿಷರಿಂದಲ್ಲ. ಸುರಪುರದಲ್ಲಿ ಇದ್ದಂತಹ ದೇಶದ್ರೋಹಿಗಳಿಂದ. ಅನ್ಯದಾರಿ ತೋರಿಸಿ ದಾಳಿಮಾಡಿ ಧ್ವಂಸ ಮಾಡಿದರು ಇಂತಹ ಘಟನೆಗಳನ್ನು ತಿಳಿದುಕೊಳ್ಳಬೇಕು ಎಂದರು.
ಭಾರತವನ್ನು ವಿಭಜಿಸುವ, ಭಾರತವನ್ನು ದುರ್ಬಲಗೊಳಿಸುವ ಯಾವುದೇ ವಿಚಾರ ಮತ್ತು ಕ್ರಿಯೆ ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂಬಂತಹ ವಿಷಯವನ್ನು ಅಂಬೇಡ್ಕರ್ ರವರು ತಿಳಿಸಿದ್ದಾರೆ ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಯವರು ಸತ್ಯ ಮತ್ತು ಅಹಿಂಸೆಯ ಮೂಲಕವೇ ಒಂದು ದೊಡ್ಡ ಹೋರಾಟವನ್ನು ಮಾಡಿದರು. ಅವರು ಕೇವಲ ಭಾರತಕ್ಕೆ ಮಾತ್ರ ಮಾದರಿಯಾಗಿರಲಿಲ್ಲ. ಆಫ್ರಿಕಾದ ನೆಲ್ಸನ್ ಮಂಡೇಲಾ, ಅಮೆರಿಕಾದ ಗಾಂಧಿ ಮಾರ್ಟಿನ್ ಲೂಥರ್ ಅವರಿಗೂ ಸಹ ಮಾದರಿಯಾಗಿದ್ದರು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಹೆಚ್.ಎಸ್ ಮಂಜು ಮಾತನಾಡಿ,ದೇಶ ಅಮೃತಮಹೋತ್ಸವ ವರ್ಷದ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಲ್ಲಿ ನಿಂತಿದೆ.ಈ ಸುಸಂದರ್ಭದಲ್ಲಿ ಎಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ,ಚಳುವಳಿಯಲ್ಲಿ ಭಾಗವಹಿಸಿದ ವೀರ ಯೋಧರ ತ್ಯಾಗ ಬಲಿದಾನದ ಹಾದಿಯತ್ತ ಇನ್ನೊಮ್ಮೆ ಹಿನ್ನೋಟ ಹರಿಸುವುದು, ಹುತಾತ್ಮರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಸಾಹಸಗಾಥೆಯೇ ಅಮೃತ ಭಾರತಿಗೆ ಕನ್ನಡದಾರತಿ. ಈ ಅಭಿಯಾನ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿರುವುದು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಐಶ್ವರ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್, ತಾಲ್ಲೂಕು ಆರೋಗ್ಯಾಧಿಕಾರಿ ಜವರೇಗೌಡ, ಉಪ ತಹಶೀಲ್ದಾರ್ ವಸಂತ್ ಕುಮಾರ್, ಕನ್ನಡ ಸಂಸ್ಕೃತಿ ಇಲಾಖೆಯು ಸಹಾಯಕ ನಿರ್ದೇಶಕರಾದ ಎನ್. ಉದಯ ಕುಮಾರ್,ಕಾರ್ಯನಿರ್ವಾಹಕ ಅಧಿಕಾರಿ ವೇಣು, ಸೇರಿದಂತೆ ಇತರರು ಉಪಸ್ಥಿತರಿದ್ದರು.