Friday, September 20, 2024

ಪ್ರಾಯೋಗಿಕ ಆವೃತ್ತಿ

ಕಚ್ಚಾತೈಲದ ಬೆಲೆ ಶೇ.31ರಷ್ಟು ತಗ್ಗಿದ್ದರೂ ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿಲ್ಲ: ಖರ್ಗೆ ಕಿಡಿ

ಜಾಗತಿಕವಾಗಿ ಕಚ್ಚಾ ತೈಲದ ಬೆಲೆಗಳು ತಗ್ಗುತ್ತಿದ್ದರೂ ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆಗೊಳಿಸದೆ ದೇಶದ ಜನರನ್ನು ಲೂಟಿ ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, ಕಳೆದ 19 ತಿಂಗಳಿನಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಶೇ.31 ರಷ್ಟು ತಗ್ಗಿದ್ದರೂ ಸಚಿವರು ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳನ್ನು ಇಳಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

“ಕಚ್ಚಾ ತೈಲದ ಬೆಲೆಗಳು ಕಡಿಮೆಯಾಗುತ್ತಲೇ ಇದೆ, ಆದರೆ ಮೋದಿ ಸರ್ಕಾರ ಲೂಟಿ ಮಾಡುವುದನ್ನು ಮಾತ್ರ ನಿಯಂತ್ರಿಸುತ್ತಿಲ್ಲ. ಬೆಲೆ ಇಳಿಸುವ ಬಗ್ಗೆ ತೈಲ ಕಂಪನಿಗಳ ಜೊತೆ ಯಾವುದೇ ಮಾತುಕತೆಯಿಲ್ಲ ಎಂದು ಸ್ವತಃ ಮೋದಿ ಸಂಪುಟದ ಮಂತ್ರಿಗಳೇ ಹೇಳುತ್ತಾರೆ. ತೈಲ ಕಂಪನಿಗಳು ಸಾರ್ವಜನಿಕರಿಂದ ಪ್ರತಿ ಒಂದು ಲೀಟರ್‌ ಪೆಟ್ರೋಲ್‌ನಿಂದ 8 ರಿಂದ 10 ರೂ ಹಾಗೂ ಪ್ರತಿ ಲೀಟರ್‌ ಡೀಸೆಲ್‌ನಿಂದ 3 ರಿಂದ 4 ರೂಪಾಯಿ ಲಾಭ ಗಳಿಸುತ್ತಿವೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

“ಕಳೆದ 50 ವರ್ಷಗಳಲ್ಲಿ ಸಾರ್ವಜನಿಕರ ಉಳಿತಾಯ ಖಾತೆಯು ಅತೀ ಕಡಿಮೆಗೆ ಇಳಿದಿರುವುದನ್ನು ದೇಶ ನೋಡುತ್ತಿದೆ. ಬಿಜೆಪಿಯ ‘ಅಚ್ಚೆ ದಿನ’ದ ಸುಳ್ಳು ಭಾಷಣಗಳು ಜಾಹೀರಾತುಗಳಲ್ಲಿ ಮಾತ್ರ ರಾರಾಜಿಸುತ್ತಿವೆ” ಎಂದು ಖರ್ಗೆ ಹೇಳಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆಯಲ್ಲಿ ಭಾರೀ ಏರಿಳಿತ ಉಂಟಾಗಿ ದೇಶದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಬಹುದು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಸದ್ಯಕ್ಕೆ ತೈಲ ಬೆಲೆ ಇಳಿಕೆ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕಚ್ಛಾ ತೈಲ ಬೆಲೆ ವಿಪರೀತ ಏರಿಕೆ ಕಂಡಿದ್ದಾಗ ತೈಲ ಮಾರುಕಟ್ಟೆ ಕಂಪನಿಗಳು ಭಾರೀ ನಷ್ಟ ಅನುಭವಿಸಿದ್ದವು. ಕಚ್ಛಾ ತೈಲ ಬೆಲೆ ಬೇಡಿಕೆಗೆ ಅನುಗುಣವಾಗಿ ಏರಿಳಿತ ಕಾಣುತ್ತದೆ. ಕೆಲವು ಅಂತಾರಾಷ್ಟ್ರೀಯ ವಿದ್ಯಮಾನಗಳೂ ತೈಲ ಬೆಲೆ ಏರಿಳಿತಕ್ಕೆ ಕಾರಣ ಆಗುತ್ತದೆ. ಹೀಗಾಗಿ ಈ ಲೆಕ್ಕಾಚಾರವನ್ನು ಆಧರಿಸಿ ಪೆಟ್ರೋಲ್ ಹಾಗೂ ಡೀಸೆಲ್ ದರ ಕೆಲ ದಿನಗಳ ಮಟ್ಟಿಗೆ ಇಳಿಕೆ ಮಾಡಲು ಆಗುವುದಿಲ್ಲ. ಸದ್ಯದ ಮಟ್ಟಿಗೆ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಂಡು ಬರುತ್ತಿದೆ. ಹೀಗಾಗಿ ತೈಲ ಮಾರುಕಟ್ಟೆ ಕಂಪನಿಗಳು ತೈಲ ಬೆಲೆ ಇಳಿಕೆ ಸಂಬಂಧ ಯಾವುದೇ ಚರ್ಚೆ ನಡೆಸಿಲ್ಲ ಎಂದು ಕೇಂದ್ರ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!