Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿವಿಧ ಬೇಡಿಕೆ ಈಡೇರಿಸುವಂತೆ ರೈತಸಂಘದಿಂದ ಬೈಕ್ ಜಾಥಾ

ಕಬ್ಬಿಗೆ, ಭತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡುವುದರ ಜೊತೆಗೆ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಶ್ರೀರಂಗಪಟ್ಟಣದಿಂದ ಮಂಡ್ಯದವರೆಗೆ ಬೈಕ್‌ ಜಾಥಾ ನಡೆಸಿದರು.

ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಈಗಾಗಲೇ ರಾಜ್ಯ ಸರ್ಕಾರದ ಜೊತೆ ಹಲವು ಸುತ್ತು ಮಾತುಕತೆ ನಡೆದಿವೆ. ಮುಖ್ಯಮಂತ್ರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿ, ಸಮಯ ಕೋರಿದ್ದರು. ಅದರಂತೆ ರೈತ ನಾಯಕರು 15 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ ಮಾನ್ಯ ಮುಖ್ಯಮಂತ್ರಿಗಳು ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ರೈತ ಹೋರಾಟಗಾರರು ಆರೋಪಿಸಿದ್ದಾರೆ.

ಮಾತು ತಪ್ಪಿದ ಮುಖ್ಯಮಂತ್ರಿಗಳಿಗೆ ಅವರ ಮಾತನ್ನು ನೆನಪಿಸುವ ಉದ್ದೇಶದಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಳಿ ಮುಂಭಾಗ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು ಶ್ರೀರಂಗಪಟ್ಟಣ ತಾಲೂಕಿನ ರೈತರು ಧರಣಿಯಲ್ಲಿ ಶುಕ್ರವಾರ ಭಾಗವಹಿಸಿದ್ದಾರೆ. ಶ್ರೀರಂಪಟ್ಟಣದ ಕುವೆಂಪು ವೃತ್ತ, ಲಕ್ಷಿಗುಡಿ ವೃತ್ತ, ಪುರಸಭೆ ವೃತ್ತ, ಅಂಬೇಡ್ಕರ್ ವೃತ್ತ, ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳು ಹಾಗೂ ಬಾಬುರಾಯನ ಕೊಪ್ಪಲು,ಗರುಡನ ಉಕ್ಕಡಗೌಡಹಳ್ಳಿ, ಗಣಂಗೂರು, ಕೋಡಿ ಶೆಟ್ಟಿಪುರ ಮಾರ್ಗವಾಗಿ ಮಂಡ್ಯವರೆಗೆ ಬೈಕ್ ಜಾಥ ನಡೆಸಿದ್ದಾರೆ.

ಪ್ರಮುಖವಾಗಿ ಪ್ರತಿ ಟನ್ ಕಬ್ಬಿಗೆ 4,500 ರೂ, ಪ್ರತಿ ಲೀಟರ್ ಹಾಲಿಗೆ 45 ರೂ, ಭತ್ತಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಹಾಗೂ ರೈತರ ಪಂಪ್‌ ಸೆಟ್‌ಗಳಿಗೆ ಮೀಟರ್ ಅಳವಡಿಕೆ ಮಾಡುವ ನೀತಿಯನ್ನು ರದ್ದುಮಾಡಬೇಕೆಂದು ರೈತರು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದೇವೆ ಎಂದು ರೈತ ಮುಖಂಡ ಮರಳಗಾಲ ತಿಳಿಸಿದ್ದಾರೆ.

ಬೈಕ್ ಜಾಥದಲ್ಲಿ ಹಿರಿಯ ಮುಖಂಡ ಜಯರಾಮೇಗೌಡ, ರೈತ ಸಂಘದ ಗೌರವ ಅಧ್ಯಕ್ಷ ಬಿ.ಎಸ್ ರಮೇಶ್‌, ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು, ಕೃಷಿ ಸಮಾಜದ ನಿರ್ದೇಶಕ ಕಡತನಾಳು ಬಾಲಕೃಷ್ಣ ನೀಲನಕೊಪ್ಪಲು ಶಶಿಕಾಂತ್, ಮಹೇಂದ್ರ, ಕೂಡನ ತಮ್ಮಣ ಸೇರಿದಂತೆ ಮತ್ತಿತ್ತರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!