Thursday, September 19, 2024

ಪ್ರಾಯೋಗಿಕ ಆವೃತ್ತಿ

ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವುದು ಜಿ.ಮಾದೇಗೌಡರ ಗುರಿ

ಮಾಜಿ ಸಚಿವ ಜಿ. ಮಾದೇಗೌಡರಿಗೆ  ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಗುರಿ ಇಟ್ಟುಕೊಂಡು ಭಾರತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಜಿ.ಮಾದೇಗೌಡ ಶಿಕ್ಷಣ ಸಂಸ್ಥೆಗಳು 60 ವರ್ಷ ಪೂರೈಸಿದ ಅಂಗವಾಗಿ ಏರ್ಪಡಿಸಿದ್ದ ವಜ್ರ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಜಿ.ಮಾದೇಗೌಡ ಶಿಕ್ಷಣ ಸಂಸ್ಥೆಗಳು ಇಂದು 60 ವರ್ಷಗಳ ಪೂರೈಸಿ ವಜ್ರ ಮಹೋತ್ಸವ ಆಚರಿಸುತ್ತಿರುವುದು ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಜಿ.ಮಾದೇಗೌಡ ಅವರು ಒರಟು ಸ್ವಭಾವದ ದಿಟ್ಟ, ನೇರ ಹೋರಾಟಗಾರರಾಗಿದ್ದು, ಅವರ ಮನಸ್ಸು ಹೂವಿನಂತಿತ್ತು ಎಂದರು.

ಅವರ ವ್ಯಕ್ತಿತ್ವವನ್ನು ನಾನೂ ಸಹ ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರ ರಾಜಕೀಯ ನಡೆ, ರೈತ ಚಳುವಳಿಯ ರೀತಿ, ಹಾಗೂ ಕಾಳಮುದ್ದನದೊಡ್ಡಿ ಎಂಬ ಕುಗ್ರಾಮದಲ್ಲಿ ಒಂದು ಭಾರತೀ ವಿದ್ಯಾ ಸಂಸ್ಥೆ ಸ್ಥಾಪಿಸಿ ಭಾರತೀ ನಗರವನ್ನಾಗಿಸಿದ ಕೀರ್ತಿ ಎಲ್ಲವೂ ಜಿ. ಮಾದೇಗೌಡರಿಗೆ ಸಲ್ಲುತ್ತದೆ ಎಂದರು. ನಗರ ಪ್ರದೇಶಗಳಿಗೂ ಪೈಪೋಟಿ ನೀಡುವಂತೆ ಎಲ್ ಕೆಜಿ ಯಿಂದ ಎಂಜಿನಿಯರಿಂಗ್ ಅನೇಕ ಸ್ನಾತಕೋತ್ತರ ಪದವಿವರೆಗೆ ಉನ್ನತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಜಿ ಮಾದೇಗೌಡ ನಂತರ ಮಧು ಮಾದೇಗೌಡ ಅವರು ಸಂಸ್ಥೆಯ ಜವಾಬ್ಧಾರಿ ವಹಿಸಿಕೊಂಡು ಹಲವಾರು ಹೊಸ ಕೋರ್ಸುಗಳನ್ನು ತಂದು ಸಂಸ್ಥೆಯ ಉನ್ನತಿಗೆ ದುಡಿಯುತ್ತಿರುವುದು ಸಂತೋಷ ತಂದಿದೆ ಎಂದರು.

ಮಠಕ್ಕೂ-ಮಾದೇಗೌಡರಿಗೂ ಅವಿನಾಭಾವ ಸಂಬಂಧ

ಜಿ.ಮಾದೇಗೌಡರಿಗೆ ಚುಂಚನಗಿರಿ ಮಠ ಎಂದರೆ ಎಲ್ಲಿಲ್ಲದ ಪ್ರೀತಿ. ಹಿರಿಯ ಸ್ವಾಮೀಜಿ ಬಾಲಗಂಗಾಧರನಾಥ ಸ್ವಾಮೀಜಿ ಜೊತೆ ಹೆಚ್ಚು ಒಡನಾಟವಿತ್ತು. ಶ್ರೀ ಮಠದ ಪ್ರಗತಿಗೆ ಗೌಡರ ಕೊಡುಗೆ ಅಪಾರವಾಗಿದ್ದು, ಭಾರತೀ ವಿದ್ಯಾಸಂಸ್ಥೆಗೆ ಒಡನಾಟ ಮಠದ ಜೊತೆ ಸದಾ ಇರುತ್ತದೆ ಎಂದು ಹೇಳಿದರು.

ಉದ್ಯೋಗಾವಕಾಶಗಳಿಗೆ ಇಂಗ್ಲಿಷ್ ಭಾಷೆ ಅನಿವಾರ್ಯ. ಆದರೆ, ವಿದ್ಯಾರ್ಥಿಗಳು ತಮ್ಮ ಮಾತೃಭಾಷೆ ಕನ್ನಡವನ್ನು ಕಡೆಗಣಿಸಬಾರದು. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ರೂಢಿಸಿಕೊಳ್ಳಬೇಕು. ತಮ್ಮಲ್ಲಿರುವ ಕೀಳರಿಮೆ ಬಿಟ್ಟು, ಉತ್ತಮ ನಡವಳಿಕೆ ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ, ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಭಾರತೀ ವಿದ್ಯಾಸಂಸ್ಥೆ ನಾಗಾಲೋಟದಂತೆ ಬೆಳೆಯುತ್ತಿದೆ. ನನ್ನ ತಂದೆ ಜಿ.ಮಾದೇಗೌಡ ಅವರು ಸಂಸ್ಥೆ ಕಟ್ಟಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಅಭಿಲಾಷೆಯನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದು, ನಮ್ಮ ಸಂಸ್ಥೆಗೆ 60 ವರ್ಷ ಪೂರೈಸಿ ವಜ್ರ ಮಹೋತ್ಸವದ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್ ಮಧು ಮಾದೇಗೌಡ, ಟ್ರಸ್ಟಿಗಳಾದ ಚಂದೂಪುರ ಪಾಪಣ್ಣ, ಕಾರ್ಕಳ್ಳಿ ಬಸವೇಗೌಡ, ಎಸ್.ಜಯರಾಮು, ಮುದ್ದಯ್ಯ ಸೇರಿದಂತೆ ವಿವಿಧ ಅಂಗ ಸಂಸ್ಥೆಯ ಪ್ರಾಂಶುಪಾಲರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!