✍🏿ಗಿರೀಶ್ ತಾಳಿಕಟ್ಟೆ
(ದೊರೆಸ್ವಾಮಿಯವರ ಅಗಲಿಕೆಯ ಸಂದರ್ಭದಲ್ಲಿ, ಬರೆದಿದ್ದ ಸುದೀರ್ಘ ಬರಹದ ಸಾರಾಂಶ)
ಗಾಂಧಿ ವಿಚಾರದಲ್ಲಿ ನಿಮ್ಮ ‘ವಿಲನ್’ ಪದ ಬಳಕೆಯೇ ಬಾಲಿಶವಾದುದು
ಈ ದೇಶವನ್ನು ರೂಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ರಿಗೆ ಇದ್ದ ಸ್ಪಷ್ಟತೆಯನ್ನು ಗೌರವಿಸುತ್ತೇನೆ
ಗೌರಿ ಲಂಕೇಶ್ ಮೇಡಂ ಕಾರಣದಿಂದಾಗಿ ಎಚ್.ಎಸ್.ದೊರೆಸ್ವಾಮಿಯವರ ಜೊತೆ ಒಡನಾಟ ನನಗೆ ದಕ್ಕಿತು. ಪತ್ರಿಕೆಯ ಕೆಲಸವಾಗಿ ಅವರ ಮನೆಗೆ ಹೋಗಿ ಆಗಾಗ್ಗೆ ಭೇಟಿಯಾಗಿ ಬರುತ್ತಿದೆ. ಆದರೆ ಯಾವತ್ತೂ ಅವರ ಜೊತೆ ಗಂಭೀರವಾಗಿ ಹರಟುತ್ತಾ, ತುಂಬಾ ಹೊತ್ತು ಕಳೆದವನಲ್ಲ. ಆದರೆ ಹಿರಿಯ ಮಿತ್ರರೊಬ್ಬರು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ತುಲನೆ ಮಾಡಿ ಬರೆದಿದ್ದ ಕವನವೊಂದು ನನ್ನನ್ನು ತುಂಬಾ ಕಾಡುತ್ತಿತ್ತು. ಗಾಂಧಿ-ಅಂಬೇಡ್ಕರ್ ಎಂಬ ಎರಡು ಮುಂಗಾಮಿ ನೋಟಗಳನ್ನು ಈ ಕಾಲಘಟ್ಟದಲ್ಲಿ ನಾವು ಹೇಗೆ ಅರ್ಥೈಸಿಕೊಳ್ಳಬೇಕು ಅನ್ನೋ ಗೊಂದಲ ನನ್ನನ್ನು ಮೊದಲಿನಿಂದಲೂ ಕಾಡುತ್ತಿತ್ತು. ಗೆಳೆಯರ ಆ ಕವನ, ನನ್ನ ಗೊಂದಲವನ್ನು ಮತ್ತೆ ಮುನ್ನೆಲೆಗೆ ತಂದಿತು.
ಆ ಸಂದರ್ಭದಲ್ಲೇ ನನಗೆ ದೊರೆಸ್ವಾಮಿಯವರ ಮನೆಗೆ ಹೋಗಬೇಕಾದ ತುರ್ತು ಬಂತು, ಸ್ವತಃ ಗಾಂಧಿವಾದಿಯೂ, ಸ್ವಾತಂತ್ರ್ಯಪೂರ್ವ ರಾಜಕೀಯ-ಸಾಮಾಜಿಕ ಸಂಘರ್ಷಗಳನ್ನು ಕಂಡವರೂ ಆದ ದೊರೆಸ್ವಾಮಿ ತಾತನೇ ನನ್ನ ಈ ಚಡಪಡಿಕೆಗೆ ಸೂಕ್ತ ಉತ್ತರವಾಗಬಲ್ಲರು ಅನ್ನಿಸಿತು. ಅವರ ಮನೆಗೆ ಕಾಲಿಟ್ಟ ಕ್ಷಣದಿಂದಲೂ ಅದನ್ನು ಹೇಗೆ ಪ್ರಸ್ತಾಪ ಮಾಡುವುದೆಂಬ ಒದ್ದಾಟದಲ್ಲಿದ್ದೆ. ಯಾಕೆಂದರೆ ನಾನು ಯಾವತ್ತೂ ಅವರ ಜೊತೆ ಐದು ನಿಮಿಷಕ್ಕಿಂತ ಹೆಚ್ಚು ಕಾಲ ಹರಟಿದವನಲ್ಲ. ನಾನು ಹೋದ ಕೆಲಸ ಮುಗಿಯಿತು. ಎಂದಿನಂತೆ ಸರಾಗವಾಗಿ ಎದ್ದುಹೋಗದೆ, ಕೊಸರಾಡುತ್ತಿದ್ದ ನನ್ನ ಪರಿಸ್ಥಿತಿಯನ್ನು ಗ್ರಹಿಸಿದ ನಮ್ಮ ರಾಕ್ಸ್ಟಾರ್ (ಗೌರಿ ಲಂಕೇಶ್ ಮೇಡಂ ದೊರೆಸ್ವಾಮಿಯವರನ್ನು ಕರೆಯುತ್ತಿದ್ದುದೇ ಹೀಗೆ) ತಾತಾ ಕೇಳಿಯೇಬಿಟ್ಟರು, “ಯಾಕೆ ಇವರೇ, ಮತ್ತೆ ಏನಾದರು ಹೇಳುವುದಕ್ಕಿದೆಯಾ?”
ಅಷ್ಟು ಸಾಕಯ್ತು ನನಗೆ, “ ಹೌದು ಸರ್, ತಾವು ಬಿಡುವಿದ್ದರೆ ಒಂದು ಸಣ್ಣ ಅನುಮಾನ ಬಗೆಹರಿಸಿಕೊಳ್ಳುವುದಿತ್ತು” ಮುಜುಗರ ಮುಂದಿಟ್ಟೆ.
“ಪರವಾಗಿಲ್ಲ ಹೇಳಿ, ಹೇಗೂ ನಾನೂ ಫ್ರೀಯಾಗಿದೀನಿ ಇವತ್ತು” ಎಂದರು. ತುಸು ಧೈರ್ಯ ಬಂದಂತಾಗಿ, ಗೆಳೆಯರ ಕವನ ಮತ್ತು ಗಾಂಧಿ-ಅಂಬೇಡ್ಕರ್ ತುಲನಾತ್ಮಕ ನೋಟಗಳ ವಿಮರ್ಶೆ, ಆ ಮೂಲಕ ಗಾಂಧಿಯನ್ನು ಗ್ರಹಿಸುವಲ್ಲಿ ನಮ್ಮಂತಹ ಹೊಸ ಪೀಳಿಗೆಯವರಿಗೆ ಉಂಟಾಗುತ್ತಿರುವ ಗೊಂದಲ, ಸದ್ಯದ ಸಾಂದರ್ಭಿಕ ಸನ್ನಿವೇಶಗಳಲ್ಲಿ ಗಾಂಧಿ-ಅಂಬೇಡ್ಕರ್ ಎಂಬ ಧೀಶಕ್ತಿಗಳನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿಟ್ಟು ನೋಡುವ ವಿಮರ್ಶೆಯ ಸಮಂಜಸತೆಯ ಬಗ್ಗೆ ಮಾತು ಬಿಚ್ಚಿದೆ.
ಒಂದು ಕ್ಷಣ ತಾತ ಗಂಭೀರವಾದರು. “ನೋಡಿ ಇವರೇ, ಈ ಪ್ರಪಂಚದ ಆಧುನಿಕ ಇತಿಹಾಸದಲ್ಲಿ ಇಡೀ ವಿಶ್ವದಲ್ಲಿ ಹೆಚ್ಚು ಗೌರವಕ್ಕೆ ಪಾತ್ರವಾದ ವ್ಯಕ್ತಿಯೆಂದರೆ ಅದು ಗಾಂಧಿ, ಅದೇ ವೇಳೆ, ಗಾಂಧಿಯನ್ನು ಅತಿಹೆಚ್ಚು ಟೀಕಿಸುವ, ವಿಮರ್ಶಿಸುವ, ಒಂದು ಕೈ ದ್ವೇಷಿಸಿಯೂ ಬಿಡುವ ದೇಶ ಅಂತ್ಯಾವುದಾದರು ಇದ್ದರೆ ಅದು ಭಾರತ. ಇದು ನಮ್ಮ democratic beautyಯೂ ಹೌದು, ಈ ದೇಶದ ವಿಪರ್ಯಾಸವೂ ಹೌದು…”
“ಹಾಗಾದರೆ, ಅಂಬೇಡ್ಕರ್ ವಾದದ ದೃಷ್ಟಿಯಿಂದ ನೋಡಿದಾಗ ಗಾಂಧಿಯೇಕೆ ವಿಲನ್ ರೀತಿ ಚಿತ್ರಿತವಾಗುತ್ತಾರೆ ಸರ್” ನಾನು ಈ ಪ್ರಶ್ನೆ ಕೇಳಲು ತುಂಬ ಅವಸರಿಸಿಬಿಟ್ಟೆನೇನೊ ಅನ್ನಿಸಿತು.
ಆದರೂ ತಾತ, ಲಹರಿಗೆಡಲಿಲ್ಲ. “ಗಾಂಧಿ ವಿಚಾರದಲ್ಲಿ ನಿಮ್ಮ ‘ವಿಲನ್’ ಪದ ಬಳಕೆಯೇ ಬಾಲಿಶವಾದುದು. (ವಿಚಾರ ಮಂಡನೆಯ ಸಂಗತಿಗೆ ಬಂದರೆ ತಾತ ಮುಲಾಜು ನೋಡುತ್ತಿರಲಿಲ್ಲ..) ಪ್ರತಿ ವ್ಯಕ್ತಿಗೂ ವಿಶೇಷತೆಗಳು ಇರುವಂತೆ ಮಿತಿಗಳೂ ಇರುತ್ತವೆ. ಬರೀ ವಿಶೇಷತೆಗಳನ್ನೇ ಪರಿಗಣಿಸಿದರೆ ಅದು ವ್ಯಕ್ತಿಪೂಜೆಯಾಗಿಬಿಡುತ್ತೆ. ಆತನ ಮಿತಿಗಳನ್ನೇ ಟೀಕಿಸುತ್ತಾ ಕೂತರೆ ವಿಮರ್ಶೆ ಎನ್ನುವುದೇ ಒಂದು ಕಾಯಿಲೆಯಾಗಿಬಿಡುತ್ತೆ. ಈ ಎಚ್ಚರಿಕೆ ಮತ್ತು ಕಾಳಜಿ ಇಟ್ಟುಕೊಂಡು ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳನ್ನು ಸ್ಪರ್ಶಿಸಬೇಕೆ ವಿನಃ ಪೂರ್ವಗ್ರಹಗಳ ಆಲೋಚನೆಯನ್ನು ಹೊತ್ತು ಅಲ್ಲ”.
“ಹಾಗಾದ್ರೆ ಸರ್, ಪೂನಾ ಒಪ್ಪಂದದ ಮೂಲಕ ನೋಡಿದಾಗ ಗಾಂಧಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?” ಮತ್ತೆ ನನ್ನ ಪ್ರಶ್ನೆ ಮುಂದಿರಿಸಿದೆ.
“ಗಾಂಧಿ-ಅಂಬೇಡ್ಕರ್ ರನ್ನು ತೂಗಿ ನೋಡುವಾಗ, ಖಂಡಿತವಾಗಿಯೂ ಪೂನಾ ಒಪ್ಪಂದ ಒಂದು ಬಹುಮುಖ್ಯವಾದ ಅಳತೆಗೋಲು, ಅದಕ್ಕೂ ಮೊದಲು ನಾವು ಗಾಂಧಿ ಮತ್ತು ಅಂಬೇಡ್ಕರ್ ಅಂದ್ರೆ ಏನು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಇಬ್ಬರು ವ್ಯಕ್ತಿಗಳಷ್ಟೇ ಅಲ್ಲ. ಭಾರತವನ್ನು ಕಟ್ಟಿಕೊಡುವ ಎರಡು ನೋಟಗಳು. ಗಾಂಧಿ ಈ ಭಾರತವನ್ನು ತುಂಬ ಚೆನ್ನಾಗಿ ಗ್ರಹಿಸಿದರು. ಆದರೆ ಅಂಬೇಡ್ಕರ್ ಈ ಭಾರತವನ್ನು ಆಳವಾಗಿ ಅನುಭವಿಸಿದರು. ಗ್ರಹಿಕೆ ಮತ್ತು ಅನುಭವಗಳ ನಡುವೆ ಯಾವ ವ್ಯತ್ಯಾಸವಿದೆಯೋ, ಅದೇ ವ್ಯತ್ಯಾಸ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಇರುವುದು. ನಾನು ಗಾಂಧಿವಾದಿಯಾದರೂ, ಈ ದೇಶವನ್ನು ರೂಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ರಿಗೆ ಇದ್ದ ಸ್ಪಷ್ಟತೆಯನ್ನು ಗೌರವಿಸುತ್ತೇನೆ. ಯಾಕೆಂದರೆ ಗಾಂಧಿಯವರ ರಾಜಕೀಯ ಹೋರಾಟ ಎಷ್ಟು ಸ್ಪಷ್ಟತೆಯಿಂದ ಕೂಡಿತ್ತೊ, ಅಂಬೇಡ್ಕರರ ಸಾಮಾಜಿಕ ಹೋರಾಟ ಅಷ್ಟೇ ದೂರದೃಷ್ಟಿ ಹೊಂದಿತ್ತು.
ಮೇಲ್ವರ್ಗದ ಗಾಂಧಿಯವರು ಗ್ರಹಿಸಿದ್ದ ಭಾರತೀಯ ಸಮಾಜಕ್ಕಿಂತ ನಿಮ್ನ ವರ್ಗದ ಅಂಬೇಡ್ಕರ್ ಅನುಭವಿಸಿದ್ದ ಸಮಾಜ ನಮ್ಮನ್ನು ರೂಪಿಸಬೇಕಿದೆ. ಹಾಗಂತ ಗಾಂಧಿ, ಅಂಬೇಡ್ಕರ್ ವಾದಗಳು ವೈಷಮ್ಯವನ್ನು ತುಂಬಿಕೊಂಡ ತದ್ವಿರುದ್ಧ ಧ್ರುವಗಳಲ್ಲ. ಉತ್ತಮತೆಯೆಡೆಗೆ ತುಡಿದ ಎರಡು ಭಿನ್ನ ಮಾರ್ಗಗಳು. ಅಂತಹ ಬೌದ್ಧಿಕ ಜಟಾಪಟಿಗಳು ಇದ್ದಾಗಲೇ ನಾವು ಆರೋಗ್ಯವಂತ ಸಶಕ್ತ ಸಮಾಜವಾಗುತ್ತೇವೆ. ಇಂಥ ಒಟ್ಟಾರೆ ಉತ್ಕೃಷ್ಟ ವಾತಾವರಣದಿಂದಲೇ ನಾವು ಆಂಗ್ಲರನ್ನೂ ಮಣಿಸಲು ಸಾಧ್ಯವಾದದ್ದು. ಇದನ್ನು ಅರ್ಥ ಮಾಡಿಕೊಳ್ಳದೆ ನಾವು ವಿಘಟನೆಗೆ ಅಂತಹ ಜಟಾಪಟಿಗಳನ್ನು ಸರಕಾಗಿಸಿಕೊಳ್ಳಬಾರದು. ವಿಮರ್ಶೆಗೆ ಆಯಾ ಕಾಲಘಟ್ಟದ ತುರ್ತಿನ ಹೊಣೆಗಾರಿಕೆಯೂ ಇರಬೇಕಾಗುತ್ತದೆ.
ಗಾಂಧಿವಾದಿಯಾದ ನನಗೆ ಇವತ್ತು ಅಂಬೇಡ್ಕರ್ ವಿಚಾರಧಾರೆಗಳು ಹೆಚ್ಚು ಸಮಂಜಸವಾಗಿ ಕಾಣುತ್ತವೆ. ಹಾಗಾಗಿ ಗಾಂಧಿವಾದಿಯಾಗಿಯೇ ನಾನು ಅವುಗಳನ್ನು ಸ್ವೀಕರಿಸುತ್ತೇನೆ. ಇಲ್ಲಿ ಯಾರನ್ನೂ ಹೀರೊ ಎಂದು ಬಿಂಬಿಸುವ, ಮತ್ತಾರನ್ನೋ ವಿಲನ್ ಆಗಿಸುವ ಪ್ರಶ್ನೆಯೇ ಉದ್ಭವಿಸದು. ಈ ಎರಡೂ ವಾದಗಳ ಒಟ್ಟಾರೆ ತುಡಿತವಾದ ಉತ್ತಮತೆ ನಮ್ಮ ಆದ್ಯತೆಯಾಗಬೇಕು”
ತಾತ ಹೀಗೆಲ್ಲ ಮಾತಾಡುತ್ತಿದ್ದರೆ, ಆ ಪುಟಾಣಿ ಮಂಚದ ಮೇಲೆ ಅವರ ಆಕಾರ ಕ್ಷಣಕ್ಷಣಕ್ಕೂ ಹಿಗ್ಗಿದಂತೆ, ಗಾಂಧಿಗಿಂತಲೂ ವಿಸ್ತಾರವಾದಂತೆ, ಸ್ವಾತಂತ್ರ್ಯದ ಬುದ್ಧನಂತೆ ನನ್ನ ಕಣ್ಣಿಗೆ ಕಾಣಿಸಿದರು. ನಾನು ಎತ್ತಿದ್ದ ವಿಚಾರಕ್ಕೆ ಇಂಥಾ ಅಲ್ಪಾವಧಿ ಚರ್ಚೆ ಒಂದು ತೀರ್ಮಾನವನ್ನು ಒದಗಿಸಲಾರದು ಅನ್ನೋದು ನನಗೆ ಚೆನ್ನಾಗಿ ಗೊತ್ತಿತ್ತು. ಅಲ್ಲದೇ, ತಾತನಿಗೆ ಇನ್ನೂ ಹೇಳುವುದು ಬಹಳಷ್ಟಿದೆ. ನಾನೂ ಕೇಳಿಸಿಕೊಳ್ಳುವುದು ಬೆಟ್ಟದಷ್ಟಿದೆ ಎಂಬುದು ಮನದಟ್ಟಾಯ್ತು.
ಆದರೆ, ನಾನು ತುರ್ತಾಗಿ ಹೋಗಲೇಬೇಕಿದ್ದ ಸಮಯ ಹತ್ತಿರವಾದದ್ದರಿಂದ, ಬೇಸರದಲ್ಲಿ “ಹೌದು ಸಾರ್. ನೀವು ಹೇಳುತ್ತಿರೋದು ಸರಿ. ಗಾಂಧಿ ಮತ್ತು ಅಂಬೇಡ್ಕರರನ್ನು ನಮ್ಮ ಬಲಗಳಾಗಿ ಬಳಸಿಕೊಳ್ಳಬೇಕೆ ವಿನಾ ಪರಸ್ಪರ ಕಾದಾಟದ ಅಸ್ತ್ರಗಳನ್ನಾಗಿ ಅಲ್ಲ. ಆದರೆ ಈ ಕುರಿತು ಇನ್ನೂ ವಿಸ್ತೃತವಾದ ಚರ್ಚೆ ನಡೆಯಬೇಕಿದೆ. ನನಗಂತು ನಿಮ್ಮ ಬಳಿ ಕೇಳುವುದಕ್ಕೆ ಸಾಕಷ್ಟು ವಿಷಯಗಳಿವೆ. ಆದ್ರೆ ಯಾರನ್ನೊ ಅರ್ಜೆಂಟಾಗಿ ಭೇಟಿ ಮಾಡಬೇಕಿದೆ ಸರ್. ಹಾಗಾಗಿ ತಾವು ಅನುಮತಿ ಕೊಟ್ಟರೆ ಹೊರಡ್ತೀನಿ. ಒಂದು ದಿನ ಬಿಡುವು ಮಾಡಿಕೊಂಡು, ನೀವೂ ಆರಾಮಾಗಿರುವ ಸಮಯ ನೋಡಿಕೊಂಡು ಬರ್ತೀನಿ. ಈ ವಿಚಾರದಲ್ಲಿ ನಿಮ್ಮ ಮಾತನ್ನು ಇನ್ನಷ್ಟು ಕೇಳಿಸಿಕೊಳ್ಳಬೇಕು ಸರ್. ಅಷ್ಟರಲ್ಲಿ ಇನ್ನೂ ಸ್ವಲ್ಪ ಇತಿಹಾಸವನ್ನು ಓದಿಕೊಂಡು ಬರುತ್ತೇನೆ” ಅಂದೆ.
“ಖಂಡಿತ ಬನ್ನಿ. ನನಗೆ ಮೊದಲೇ ತಿಳಿಸಿದರೆ ನಾನೂ ಒಂದಿಷ್ಟು ಟಿಪ್ಪಣಿ ಮಾಡಿ (ಯಾವ ವಿಚಾರವನ್ನೂ ಅವರು ಸೂಕ್ತ ಆಧಾರ, ಪುರಾವೆಗಳಿಲ್ಲದೆ ಮಂಡಿಸುತ್ತಿರಲಿಲ್ಲ) ಇಟ್ಟುಕೊಡ್ತೀನಿ. ಮಾತಾಡಲು ಅನುಕೂಲವಾಗುತ್ತೆ. ನಿಮ್ಮಂತ ಯುವಕರು, ಗಾಂಧಿ-ಅಂಬೇಡ್ಕರ್ ಥರದ ವಿಚಾರಗಳ ಬಗ್ಗೆ ಆಸಕ್ತಿ ತಳೆಯೋದು ತುಂಬಾ ಮುಖ್ಯ. ಗೊಂದಲಗಳನ್ನು ಬಗೆಹರಿಸಿಕೊಂಡಾಗಲೆ ನಮಗೆ ಸ್ಪಷ್ಟತೆ ಬರಲು ಸಾಧ್ಯ. ಇಲ್ಲವಾದಲ್ಲಿ ಕೇವಲ ಆ ಸಂದರ್ಭಕ್ಕೆ ಪ್ರತಿಕ್ರಿಯಿಸುವುದಷ್ಟೇ ನಮ್ಮ ಹೊಣೆಗಾರಿಕೆ ಅನ್ನಿಸಿಬಿಡುತ್ತೆ. ಪ್ರತಿಕ್ರಿಯೆ ಮತ್ತು ಆಲೋಚನೆಗಳಲ್ಲಿ ದೂರದೃಷ್ಟಿ ಇಲ್ಲದೇ ಇರುವುದೇ ನಮ್ಮ ಹೊಸ ಪೀಳಿಗೆಗೆ ಇರುವ ದೊಡ್ಡ ಕೊರಗು, ವಿಚಾರಶೀಲರಾಗೋದು ಯುವಪೀಳಿಗೆಯ ತುರ್ತು ಅಗತ್ಯ. ನೀವು ಯಾವಾಗ್ಲಾದ್ರೂ ಬನ್ನಿ. ಮಾತಾಡೋಣ” ಎಂದರು.
ಅವರಿಂದ ಬೀಳ್ಕೊಟ್ಟು ಹೊರಟೆ. ಅಷ್ಟರಲ್ಲಿ ಈ ಕೊರೊನಾ ಮಹಾಮಾರಿ ನಮ್ಮೆಲ್ಲರ ಓಡಾಟ, ಒಡನಾಟಗಳಿಗೇ ನಿರ್ಬಂಧ ಹೇರಿತು. ಅದಾದ ಮೇಲೆ, ಅವರು ಬರೆದಿಟ್ಟಿದ್ದ ಮುನ್ನುಡಿಯನ್ನು ಸಂಗ್ರಹಿಸಲು ಒಮ್ಮೆ ಹೋದವಾದರು, ಕೊರೊನಾ ಸಂಧಿಗ್ಧತೆಯಿಂದಾಗಿ ಅವರಿಗೆ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ಹೆಚ್ಚು ಹೊತ್ತು ಕಳೆಯದೆ ವಾಪಾಸಾದವು. ಅವತ್ತು ಸಹಾ “ಎಲ್ಲಿ ಇವರೇ, ಬರ್ತೀನಿ ಅಂದ್ರಿ, ಆದ್ರೆ ಬರ್ಲೇ ಇಲ್ಲ” ಅಂತ ತಾತನೇ ನನಗೆ ನಮ್ಮಚರ್ಚೆ ನೆನಪಿಸಿದರು. “ಈ ಕೊರೊನಾ ಕಾರಣಕ್ಕೆ ನಿಮಗೆ ತೊಂದರೆ ಆಗದಿರಲೆಂದು ಬರಲಿಲ್ಲ ಸಾರ್. ಇದೆಲ್ಲ ರಗಳೆ ಮುಗಿಯಲಿ, ಒಂದು ಇಡೀ ದಿನ ಬಿಡುವು ಮಾಡಿಕೊಂಡು ಬರ್ತೀನಿ” ಎಂದೆ. “ಆಯ್ತು” ಎಂದರು.
ಅದೇ ನನ್ನ ಮತ್ತು ಅವರ ಕೊನೆಯ ಭೇಟಿ. ಅವರು ಇಲ್ಲವಾದ ಸುದ್ದಿ ಕೇಳಿದಾಗಿನಿಂದ ಗಾಂಧಿ ಅಂಬೇಡ್ಕರ್ ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ಕಾಲದ ಕುಚೋದ್ಯವೆಂದರೆ, ಸ್ವಾತಂತ್ರ್ಯದ ಬುದ್ಧನಂತಹ ತಾತಾ ಬುದ್ಧ ಪೂರ್ಣಿಮೆಯಂದೇ ಆಗಲಿಹೋದದ್ದು, ಸ್ಪಷ್ಟತೆಯನ್ನು ತಂದುಕೊಡಬೇಕಿದ್ದ ಚರ್ಚೆಯನ್ನು ಕೇವಲ ಟಿಪ್ಪಣಿಗಷ್ಟೇ ಸೀಮಿತವಾಗಿಸಿಕೊಂಡ ನನ್ನ ಕೊರಗು ತಾತನಿಲ್ಲದೆ ಹೇಗೆ ಬಗೆಹರಿಯುವುದೋ ಗೊತ್ತಿಲ್ಲ….




