Saturday, May 11, 2024

ಪ್ರಾಯೋಗಿಕ ಆವೃತ್ತಿ

ಅಸ್ಪೃಶ್ಯತೆ ಪ್ರತಿಪಾದನೆ: ಪೇಜಾವರಶ್ರೀ, ಅಜಿತ್ ಹನುಮಕ್ಕನವರ್ ವಿರುದ್ಧ ದೂರು ದಾಖಲು

ಜಾತಿ ತಾರತಮ್ಯ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಜಾತಿ ಆಧಾರಿತ ಬಹಿಷ್ಕಾರವನ್ನು ಉತ್ತೇಜಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಉಡುಪಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರು ಮತ್ತು ಸುವರ್ಣ ನ್ಯೂಸ್ ವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ದಲಿತ ಸಂಘಟನೆಯೊಂದು ದೂರು ದಾಖಲಿಸಿದೆ.

ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಡಾ. ಬಿ.ಆರ್‌ ಅಂಬೇಡ್ಕರ್‌ ದಂಡು ಸಂಘಟನೆಯ ಮುಖಂಡರು, ಜನವರಿ 12ರಂದು ದೂರು ದಾಖಲಿಸಿದ್ದಾರೆ. 2023ರ ಡಿಸೆಂಬರ್ 27ರಂದು ಸುವರ್ಣ ನ್ಯೂಸ್‌ ವಾಹಿನಿಯಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ದಲಿತರಿಗೆ ಪೂಜೆ (ಪ್ರಾರ್ಥನೆ) ಮಾಡಲು ಅವಕಾಶವಿದೆಯೇ ಎಂಬ ಕುರಿತು ಸಂವಾದ ಕಾರ್ಯಕ್ರಮ ಪ್ರಸಾರವಾಗಿತ್ತು. ಕಾರ್ಯಕ್ರಮದಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಸ್ವಾಮೀಜಿ ಅತಿಥಿಯಾಗಿ ಭಾಗವಹಿಸಿದ್ದರು.

“ಕಾರ್ಯಕ್ರಮದಲ್ಲಿ ಪೇಜಾವರರು ಆಡಿದ ಮಾತುಗಳು ತಿರಸ್ಕಾರ ಮತ್ತು ತಾರತಮ್ಯದಿಂದ ಕೂಡಿದೆ. ‘ಧಾರ್ಮಿಕ ಸ್ಥಳಗಳಲ್ಲಿ ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು ಮತ್ತು ದಲಿತರಿಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಅವಕಾಶವಿಲ್ಲ’ ಎಂದು ಹೇಳುವ ಮೂಲಕ ಪೇಜಾವರರು ಮತ್ತು ಟಿವಿ ನಿರೂಪಕ ಅಸ್ಪೃಶ್ಯತೆಯನ್ನು ಪ್ರತಿಪಾದಿಸುತ್ತಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

“ಅವರ ಹೇಳಿಕೆಗಳು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆ ಮತ್ತು ಜಾತ್ಯತೀತತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಮತ್ತು ಅಸ್ಪೃಶ್ಯತೆ ನಿರಂತರತೆಗೆ ಕಾರಣವಾಗಿದೆ. ಪೇಜಾವರರು ಮತ್ತು ಟಿವಿ ನಿರೂಪಕರು ದಲಿತರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸುವ ಸಂಪ್ರದಾಯವನ್ನು ಪ್ರತಿಪಾದಿಸಿದ್ದಾರೆ. ಇದು ಅಮಾನವೀಯ, ದಬ್ಬಾಳಿಕೆಯ ಮತ್ತು ಕೀಳು ಸಂಪ್ರದಾಯವಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಡಾ. ಬಿ.ಆರ್ ಅಂಬೇಡ್ಕರ್ ಸೇನೆ ಸಲಹೆಗಾರ ಆದರ್ಶ್ ಆರ್ ಅಯ್ಯರ್ ಮಾತನಾಡಿ, “ಪ್ರಮುಖ ವ್ಯಕ್ತಿಗಳ ಇಂತಹ ಹೇಳಿಕೆಗಳು ದಲಿತರನ್ನು ಅವಮಾನಿಸುವಂತಿದ್ದು, ಇತರರನ್ನು ಅನುಸರಿಸುವಂತೆ ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ.

ಸುವರ್ಣ ನ್ಯೂಸ್‌ನಲ್ಲಿ ನಡೆದ ಚರ್ಚೆಯ ಸಾರಾಂಶ ಹೀಗಿದೆ:

ಕಾರ್ಯಕ್ರಮದಲ್ಲಿ ದಲಿತ ಸಂಘಟನೆಯ ವಕ್ತಾರ ನಾಗರಾಜ್, ಅಯೋಧ್ಯೆ ರಾಮ ಮಂದಿರದಲ್ಲಿ ಪೂಜೆ ನಡೆಸುವುದರಿಂದ ದಲಿತರನ್ನು ಹೊರಗಿಟ್ಟಿರುವ ಆರೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೇಜಾವರರು, “ದೇವಸ್ಥಾನದಲ್ಲಿ ಒಬ್ಬರೇ ಪೂಜೆ ಮಾಡುತ್ತಾರೆ, ಎಲ್ಲರೂ ಮಾಡಲಾಗುವುದಿಲ್ಲ. ಕಾಶಿ ದೇವಸ್ಥಾನದಲ್ಲಿ ಹೊರತುಪಡಿಸಿ; ಪೂಜೆಗೆ ನೇಮಕಗೊಂಡವರು ಮಾತ್ರ ಮಾಡುತ್ತಾರೆ. ದೇವಸ್ಥಾನದಲ್ಲಿ ಮಾತ್ರವಲ್ಲ, ಯಾವುದೇ ಕಚೇರಿ ಮತ್ತು ಸಂಸ್ಥೆಯಲ್ಲಿ ಕೂಡ. ಪ್ರತಿಯೊಬ್ಬರೂ ಆ ಹುದ್ದೆಯಲ್ಲಿ ಕುಳಿತುಕೊಳ್ಳಬಹುದು, ಹುದ್ದೆಗೆ ನೇಮಕಗೊಂಡವರಿಗೆ ಮಾತ್ರ ಅವಕಾಶವಿದೆ’’ ಎಂದು ಹೇಳುವ ಮೂಲಕ ಬ್ರಾಹ್ಮಣರಿಗೆ ಮಾತ್ರ ಅವಕಾಶ ಎಂದು ಸಮರ್ಥಿಸಿಕೊಂಡಿದ್ದರು.

ಅವರ ಹೇಳಿಕೆಗಳು ಧಾರ್ಮಿಕ ಸ್ಥಳಗಳಲ್ಲಿ ಜಾತಿ ಆಧಾರಿತ ಬಹಿಷ್ಕಾರದ ಚರ್ಚೆಗೆ ಕಾರಣವಾಯಿತು. ಆದರೆ, ಪೇಜಾವರ ಅವರು ಸಾಂಪ್ರದಾಯಿಕ ಜಾತಿವಾದಿ ವಿಧಾನವನ್ನು ಸಮರ್ಥಿಸಿಕೊಂಡರು. “ಇಲ್ಲಿಯವರೆಗೆ ಪೂಜೆ ಸಲ್ಲಿಸುತ್ತಿರುವ ಸಮುದಾಯವು ಮುಂದೆಯೂ ಹೀಗೆಯೇ ಮುಂದುವರಿಯುತ್ತದೆ. ಇತರರು ಇದನ್ನು ಮಾಡಲು ಸಾಧ್ಯವಿಲ್ಲ’’ ಎಂದರು. ಸಂಪ್ರದಾಯಗಳನ್ನು ಬದಲಾಯಿಸುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ, “ದೇವಾಲಯಗಳು ಮತ್ತು ಧಾರ್ವಿುಕ ಸ್ಥಳಗಳಿಗೆ ಬಂದಾಗ ಮಾತ್ರ ಏಕೆ ಪ್ರಶ್ನೆ ಉದ್ಭವಿಸುತ್ತದೆ?” ಎಂದು ಮರು ಪ್ರಶ್ನೆ ಹಾಕಿದ್ದರು.

ಧಾರ್ಮಿಕ ಸ್ಥಳಗಳಿಗೆ ಜಾತ್ಯತೀತ ನಿಯಮಗಳನ್ನು ಅನ್ವಯಿಸುವುದರ ವಿರುದ್ಧ ಟಿವಿ ಆಂಕರ್ ಅಜಿತ್ ಹನುಮಕ್ಕನವರ್ ವಾದಿಸಿದರು, “ನೀವು ಧಾರ್ಮಿಕ ಸ್ಥಳಗಳಲ್ಲಿ ಜಾತ್ಯತೀತ ಸ್ಥಳಗಳ ನಿಯಮಗಳನ್ನು ಹಾಕಲು ಸಾಧ್ಯವಿಲ್ಲ. ಎರಡನ್ನೂ ಬೆರೆಸಬೇಡಿ. ನೀವು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ಬಯಸಿದರೆ, ಅಗತ್ಯವಿರುವ ನಿಯಮಗಳಿವೆ; ಅನುಸರಿಸಬೇಕು. ನಿಗದಿತ ನಿಯಮಗಳನ್ನು ಪಾಲಿಸದೆ ಅವರು ಶಬರಿಮಲೆಗೆ ಹೋಗಬೇಕೆಂದು ನೀವು ಹೇಗೆ ಹೇಳುತ್ತೀರಿ? ಕೆಲವು ಮನೆಗಳಲ್ಲಿ ನೀವು ಮನೆಯೊಳಗೆ ಪಾದರಕ್ಷೆಗಳನ್ನು ಧರಿಸಬಹುದು, ಇತರ ಮನೆಗಳಲ್ಲಿ ಪಾದರಕ್ಷೆಗಳನ್ನು ಮನೆಯ ಹೊರಗೆ ಇಡಲು ನಿಯಮಗಳಿವೆ. ನೀವು ನಿಮ್ಮ ಮನೆಯಲ್ಲಿ ಅಡುಗೆಮನೆಯೊಳಗೆ ಪಾದರಕ್ಷೆಗಳನ್ನು ಧರಿಸುತ್ತೀರಾ? ಇತರರ ಮನೆಗಳಲ್ಲಿಯೂ ಅದೇ ರೀತಿ ಅನುಸರಿಸುತ್ತೀರಿ ಎಂದರೆ ನೀವು ತರ್ಕಬದ್ಧ ವ್ಯಕ್ತಿಯಾಗುವುದಿಲ್ಲ’’ ಎಂದ ಹೇಳಿದ್ದರು.

ಇದೇ ವೇಳೆ ದಲಿತರಿಗೆ ಷರತ್ತಿನ ಮಾರ್ಗವನ್ನು ಸೂಚಿಸಿದ ಕಾಂಗ್ರೆಸ್ ಸಮಿತಿಯ ಸದಸ್ಯರೊಬ್ಬರು, ‘‘ದಲಿತರು ಪೂಜೆ ಮಾಡಬೇಕಾದರೆ ಮಂತ್ರಗಳನ್ನು ಕಲಿತು ‘ಅಖಂಡ ಪಾಂಡಿತ್ಯ’ ಪಡೆದು ಪೂಜೆ ಸಲ್ಲಿಸಲಿ’’ ಎಂದರು.
ಇದಕ್ಕೆ ನಾಗರಾಜ್ ಪ್ರತಿಕ್ರಿಯಿಸಿ, ದಲಿತರಿಗೆ ಯಾವ ದೇವಸ್ಥಾನದಲ್ಲೂ ಅವಕಾಶವಿಲ್ಲ ಎಂದರು. ಆಗ ಶ್ರೀಗಳು, ‘’ಬ್ರಾಹ್ಮಣನೊಬ್ಬ ದಲಿತ ಸಂಘಟನೆಯ ನಾಯಕನಾಗಲು ಬಿಡುವಿರಾ?’’ ಎಂದು ಕೇಳಿದರು.

“ನೀವು ಈ ವಿಷಯವನ್ನು ಏಕೆ ತೆಗೆದುಕೊಳ್ಳುತ್ತಿದ್ದೀರಿ? ಭೂಮಿ ಪೂಜೆಯ ಸಮಯದಲ್ಲಿ, ಕಾಮೇಶ್ವರಿ (ದಲಿತ ಕರಸೇವಕ ಕಾಮೇಶ್ವರ ಚೌಪಾಲ್) ಉಪಸ್ಥಿತರಿದ್ದರು; ಹಾಗಾದರೆ ನೀವು ಈ ವಿಷಯದ ಬಗ್ಗೆ ಏಕೆ ಜಗಳವಾಡುತ್ತಿದ್ದೀರಿ” ಎಂದು ಪ್ರಶ್ನಿಸಿದ್ದರು.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!