Thursday, November 19, 2026

ಪ್ರಾಯೋಗಿಕ ಆವೃತ್ತಿ

ಜನರು ಪ್ರಕೃತಿ ಗೆಲ್ಲಲು ಮಾಡಿಕೊಂಡ ವ್ಯವಸ್ಥೆ ಜಾನಪದ

ಜಾನಪದ ಎಂಬುದು ನಮ್ಮ ಜನರು ಪ್ರಕೃತಿಯನ್ನು ಗೆಲ್ಲಲು ಮಾಡಿಕೊಂಡಿರುವ ವ್ಯವಸ್ಥೆ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ 43ನೇ ಜಾನಪದ ಕಲಾಮೇಳ ಮತ್ತು ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರ ದಿವ್ಯ ಸಾನ್ನಿಧ್ಯದಲ್ಲಿ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರಗೌಡ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜನಪದ ಎಂದರೆ ಮನರಂಜನೆಯಲ್ಲ.ಜನಪದ ಎಂಬುದು ನಮ್ಮ ಮೂಲಜ್ಞಾನವಾಗಿದೆ. ಈ ಮೂಲ ಜ್ಞಾನವನ್ನು ಬೆಳೆಸಿಕೊಂಡು ಹೋದರೆ ಮಾತ್ರ ಸೃಜನಶೀಲ ಸಮಾಜದ ಸೃಷ್ಟಿಯಾಗುತ್ತದೆ ಎಂದರು.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಜಾನಪದ ಕಲೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಿವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶ್ರೀ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿರವರಿಂದ ಪ್ರಾರಂಭಗೊಂಡು ಕಳೆದ 43 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಜಾನಪದ ಕಲಾಮೇಳದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಸಮಾರಂಭ ಕುರಿತು ಮಾತನಾಡಿದರು.

ಶ್ರೀಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು

ಚುಂಚಶ್ರೀ ಪ್ರಶಸ್ತಿ ಪ್ರದಾನ: ಪ್ರತೀ ವರ್ಷದಂತೆ ಈ ವರ್ಷವೂ ಸಾಧಕರಿಗೆ ನೀಡುವ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಾನಪದ ಕಲಾ ಮೇಳದಲ್ಲಿ ನೀಡುವ ಈ ಪ್ರಶಸ್ತಿಯನ್ನು ಪರಿಸರ ಕ್ಷೇತ್ರದ ಸೇವೆಗಾಗಿ ಶ್ರೀಮತಿ ತುಳಸಿಗೌಡ, ಸಮಾಜ ಸೇವೆಗಾಗಿ ಕಬ್ಬಳಿ ರಂಗೇಗೌಡ, ಪಶುವೈದ್ಯಕೀಯ ಸೇವೆಗಾಗಿ ಡಾ.ಕೆ.ಎಸ್. ಜಯರಾಮು, ಧಾರ್ಮಿಕ ಸೇವೆಗಾಗಿ ಶ್ರೀ ಸಭೇಶ್ ಆಚಾರ್ಯ, ಜಾನಪದ ಕ್ಷೇತ್ರದಲ್ಲಿನ ಸೇವೆಗಾಗಿ ಗುರುರಾಜ್ ಅವರಿಗೆ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿರವರು ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿತ್ತು.

ಜಾನಪದರ ಮೆರವಣಿಗೆ: ಸಮಾರಂಭಕ್ಕೂ ಮೊದಲು ರಥಬೀದಿಯಿಂದ ಶ್ರೀಮಠದವರೆಗೆ ಚುಂಚಶ್ರೀಗಳ ಮತ್ತು ಪ್ರಶಸ್ತಿ ಪುರಸ್ಕೃತರ ಮೆರವಣಿಗೆ ನೆರವೇರಿತು.

ಸಮಾರಂಭದಲ್ಲಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಚೈತನ್ಯನಾಥ ಸ್ವಾಮೀಜಿ, ಕಾರವಾರದ ಶಾಸಕಿ ರೂಪಾಲಿ ನಾಯಕ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ