Friday, September 20, 2024

ಪ್ರಾಯೋಗಿಕ ಆವೃತ್ತಿ

ಸಿನಿಮಾದಿಂದ ಗಾಂಧಿಯೇ!?

✍️ ಗಿರೀಶ್ ತಾಳಿಕಟ್ಟೆ
(ಹಳೆಯ ಮೆಲುಕು)

ಗಾಂಧಿ ಸಿನಿಮಾದಿಂದಷ್ಟೇ ಮಹಾತ್ಮನ ಇರುವಿಕೆ ಬಗ್ಗೆ ಹೊರಪ್ರಪಂಚಕ್ಕೆ ತಿಳಿಯಿತು ಎಂಬರ್ಥದಲ್ಲಿ ಪ್ರಧಾನಿ ಮೋದಿಯವರು ಮಾತಾಡಿದ್ದಾರೆ. ಇದು ಅವರ ತಿಳಿವಳಿಕೆಯ ಮಟ್ಟವೋ, ಸೈದ್ಧಾಂತಿಕ ಕಾರಣಕ್ಕೆ ತಮ್ಮ ಎದುರಾಳಿ ಪಾಳೆಯದ ಗಾಂಧಿಯವರ ಪ್ರಭಾವವನ್ನು ನಗಣ್ಯವಾಗಿಸುವ ಕಿಡಿಗೇಡಿತನವೋ ಗೊತ್ತಿಲ್ಲ. ಆದರೆ ಜಾಗತಿಕ ನೋಟಗಳಲ್ಲಿ ಭಾರತದ ಗುರುತಿನೊಂದಿಗೆ ಗಾಂಧಿಯ ಛಾಯೆ ಅದೆಷ್ಟು ಹಾಸುಹೊಕ್ಕಾಗಿದೆ ಎನ್ನುವ ಪರಿಕಲ್ಪನೆ ಮೋದಿಯವರಿಗೆ ಇದ್ದಂತಿಲ್ಲ ಅಥವಾ ಇದ್ದರೂ ಅದನ್ನು ಮುಚ್ಚಿಟ್ಟು ಸಣ್ಣವರಾದರೇನೊ ಅನ್ನಿಸುತ್ತೆ, ಅವರ ಈ ಮಾತಿನಿಂದ.

ತನ್ನನ್ನು ತಾನು ನಿರಂತರ ವಿಕಾಸ ಮತ್ತು ಹೊಸ ವಿಸ್ತಾರಗಳಿಗೆ ಒಡ್ಡಿಕೊಳ್ಳುತ್ತಲೇ ಬಂದ ಗಾಂಧಿ, ಇಂಡಿಯಾದಂತಹ ಸಂಕೀರ್ಣ ಸಮಾಜದಲ್ಲಿ ವ್ಯಕ್ತಿಯೊಬ್ಬ ಯಾವ ದಿಕ್ಕಿನಲ್ಲಿ ಮತ್ತು ಹೇಗೆ ವಿಕಸಗೊಳ್ಳಬೇಕು ಎಂಬುದಕ್ಕೆ ಶಾಶ್ವತ ರೂಪಕವಾಗಿ ನಿಲ್ಲುತ್ತಾರೆ. ಟೀಕಿಸುವ ಭರದಲ್ಲಿ ಗಾಂಧಿಯನ್ನು ದ್ವೇಷಿಸುವ; ದ್ವೇಷಿಸುವ ಉನ್ಮಾದದಲ್ಲಿ ಗಾಂಧಿಯನ್ನು ಕೊಂದೇ ಬಿಡುವ; ಕೊಂದ ಮೇಲೂ ಸಮಾಧಾನಗೊಳ್ಳದೆ ಗಾಂಧಿಯ ವ್ಯಕ್ತಿತ್ವದ ಮೇಲೆ ಹಲ್ಲೆ ಮಾಡುತ್ತಲೇ ಇರುವ ಕೆಲವರಿಗೆ ಗಾಂಧಿ ಅರ್ಥವಾಗಲಾರರು. ಆದರೆ ಪರದೇಶದ ಜನ ಗಾಂಧಿಯನ್ನು ಹೇಗೆ ಗ್ರಹಿಸಿದ್ದಾರೆ ಅನ್ನೋದಕ್ಕೆ ನನ್ನ ಮಿತ್ರರೊಬ್ಬರ ಈ ಅನುಭವ ಸಾಕ್ಷಿಯಾಗುತ್ತದೆ. ಹಾಗಾಗಿ ನಿಮ್ಮ ಮರು ಓದಿಗಾಗಿ ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ….

ಗಾಂಧಿಯೆಂದರೆ ಇಷ್ಟೇ ಅಲ್ಲವೇ!

ಮೊನ್ನೆ ಒಬ್ಬರು ಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿಯ ಜೊತೆ ಹೀಗೇ ಮಾತಾಡುತ್ತಿದ್ದೆ. ಬಹಳ ಪ್ರತಿಭಾವಂತ, ಜನಪರ ಕಾಳಜಿಯ, ಮುಖ್ಯವಾಗಿ ಸಾಹಿತ್ಯದೆಡೆಗೆ ಅಪಾರ ಒಲವು ಹೊಂದಿರುವ ವ್ಯಕ್ತಿ ಅವರು. ನನ್ನಂತೆ ಅವರಿಗೂ ಪೂರ್ಣಚಂದ್ರ ತೇಜಸ್ವಿಯವರೆಂದರೆ ಅಚ್ಚುಮೆಚ್ಚು. ಬಹುಶಃ ಅದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ಸ್ನೇಹ ಮೊಳೆಯಲು ಸಾಧ್ಯವಾಗಿರಬಹುದು.

ಆಫ್ರಿಕಾ ನೆಲದ ಅದ್ಭುತ ಪ್ರಕೃತಿ ರಮಣೀಯತೆ ಬಗ್ಗೆ ಗೊತ್ತಿರುವ ನಮಗೆ ಅಲ್ಲಿನ ಕೆಲ ದೇಶಗಳಲ್ಲಿ ಬೀಡುಬಿಟ್ಟಿರುವ ಬಡತನ, ಆಂತರಿಕ ಕ್ಷೋಭೆ, ಯುದ್ಧ, ನಿರಾಶ್ರಿತ ಸಮಸ್ಯೆಗಳ ಬಗ್ಗೆಯೂ ಅಲ್ಪಸ್ವಲ್ಪ ಗೊತ್ತು. ಅಂತಹ ದೇಶಗಳ ಪೈಕಿ ದಕ್ಷಿಣ ಸೂಡಾನ್ ಕೂಡಾ ಒಂದು. ಸರ್ಕಾರ ಮತ್ತು ಬಂಡುಕೋರರ ನಡುವಿನ ನಿರಂತರ ಕಲಹದಿಂದಾಗಿ ತಮ್ಮದೇ ನೆಲದಲ್ಲಿ ನಿರಾಶ್ರಿತರಾಗಿ ದಿನ ಕಳೆಯುತ್ತಿರುವ ಅಲ್ಲಿನ ನತದೃಷ್ಟ ಜನರಿಗೆ ನೆರವಾಗುವುದಕ್ಕೆಂದು ವಿಶ್ವಸಂಸ್ಥೆ ಸಾಕಷ್ಟು ಹೆಣಗಾಡುತ್ತಿದೆ. ಬೇರೆಬೇರೆ ದೇಶಗಳ ಪೊಲೀಸ್ ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿ, ಅವರ ಮೂಲಕ ಒಂದು ತಟಸ್ಥ ಸೇನೆಯನ್ನು ರಚಿಸಿ ನಿರಾಶ್ರಿತರಿಗೆ ನೆರವಾಗುತ್ತಿದೆ.

ಕಳೆದ ವರ್ಷ ಈ ಕೆಲಸಕ್ಕೆಂದು ವಿಶ್ವಸಂಸ್ಥೆ ನಮ್ಮ ಭಾರತದಿಂದ ಆಯ್ಕೆ ಮಾಡಿ ಕಳಿಸಿದ ಕೆಲವೇ ಕೆಲವು ‘ವಿಶ್ವಾಸಾರ್ಹ ಪೊಲೀಸ್ ಅಧಿಕಾರಿಗಳಲ್ಲಿ ಇವರೂ ಒಬ್ಬರು. ಸುಮಾರು ಒಂದು ವರ್ಷ ಕಾಲ ಅಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೆ ಇಂಡಿಯಾಕ್ಕೆ ಮರಳಿ ಬಂದಿದ್ದಾರೆ. ನಮ್ಮ ‘ಆರಕ್ಷಕ ಲಹರಿ’ ಮಾಸಪತ್ರಿಕೆಯಲ್ಲಿ ಅವರ ಅನುಭವಗಳ ಕುರಿತು ಅಂಕಣ ಬರೆಸುವ ಉದ್ದೇಶದಿಂದ ಅವರೊಟ್ಟಿಗೆ ಮಾತಾಡುತ್ತಿದ್ದೆ.

ಆಗ ಅಲ್ಲಿನ ಭೀಕರ ಬದುಕು, ರೋಮಾಂಚಕಾರಿ ನಿಸರ್ಗ, ಬೆರಗು ಹುಟ್ಟಿಸುವ ಪ್ರಾಣಿ-ಪಕ್ಷಿ ಸಂಕುಲಗಳ ಕುರಿತು ಬಹಳಷ್ಟು ಹರಟಿದ ನಂತರ ತಮಗೆ ಅಲ್ಲಿಯ ಜನರಿಂದ ಸಿಕ್ಕ ಪ್ರೀತಿ, ಗೌರವದ ಬಗ್ಗೆ ಹೇಳುತ್ತಾ ಒಂದು ಮಾತು ಹೇಳಿದರು, “ಗಿರೀಶ್, ನಾವು ವಿಶ್ವಸಂಸ್ಥೆಯ ಕೆಲಸಕ್ಕೆ ಹೋದಾಗ, ನಮಗೆ ಬೇರೆಯದೇ ಆದ ಸಮವಸ್ತ್ರ ಇರುತ್ತಿತ್ತು. ನಮ್ಮ ದೇಶದ ಯೂನಿಫಾರ್ಮ್ಗಿಂತ ಅದು ತುಸು ಭಿನ್ನವಾದುದು. ಬೇರೆಬೇರೆ ದೇಶಗಳಿಂದ ಬಂದ ಅಧಿಕಾರಿಗಳನ್ನು ಗುರುತಿಸುವ ಸಲುವಾಗಿ ನಮ್ಮ ಯೂನಿಫಾರ್ಮ್ ಮೇಲೆ, ಅವರವರ ದೇಶದ ಹೆಸರು ಬರೆದಿರುತ್ತಿತ್ತು. ನನ್ನ ಯುನಿಫಾರ್ಮ್ ಮೇಲೆ India ಎಂದು ಬರೆದಿತ್ತು. ನಾನು ಫೀಲ್ಡ್ ವರ್ಕ್ಗೆಂದು ಹೊರ ಹೋದಾಗ, ಅಲ್ಲಿನ ಜನ ಅದನ್ನು ನೋಡಿ ಖುಷಿಯಿಂದ ’India – Mahatma gandhi- We love him’ ಎಂದು ಹೇಳುತ್ತ ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.”

ಗಾಂಧಿ ಎಂದರೆ ಇಷ್ಟೇ ಅಲ್ಲವೇ! ಭಾರತದಿಂದ ಹೊರಗೆ ಇಂಡಿಯಾದ ಐಡೆಂಟಿಟಿ ಗಾಂಧಿಯೊಟ್ಟಿಗಿದೆ. ಆದರೆ ನಮಗೆ ಉಳಿಸಿಕೊಳ್ಳಲು ಸಾಧ್ಯವಾದದ್ದು ಆ ಮಹಾತ್ಮನ ಸಮಾಧಿಯನ್ನು ಮಾತ್ರ!! ದುರಂತವಲ್ಲವೇ ಇದು….

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!