Saturday, May 18, 2024

ಪ್ರಾಯೋಗಿಕ ಆವೃತ್ತಿ

ಕೊಲೆ ಬೆದರಿಕೆಯನ್ನು ಖಂಡಿಸಿ ರಾಜ್ಯ ಪೋಲಿಸ್ ಮಹಾ ನಿರ್ದೇಶಕರಿಗೆ ಮನವಿ

ಮಂಡ್ಯ ಮಿಮ್ಸ್ ನಲ್ಲಿನ ಅಕ್ರಮಗಳ ಕುರಿತು ಲೋಕಾಯುಕ್ತಕ್ಕೆ ನೀಡಿರುವ ದೂರುಗಳನ್ನು ಹಿಂಪಡೆಯುವಂತೆ ಹಾಗೂ ಕಾರ್ಮಿಕರ ನೇರ ಪಾವತಿಗಾಗಿನ ಹೋರಾಟಗಳನ್ನು ಹಿಂಪಡೆಯುವಂತೆ ಮಿಮ್ಸ್ ಗುತ್ತಿಗೆದಾರ ಹಾಗೂ ಕೆಲ ರೌಡಿಗಳು ಕಾರ್ಮಿಕ ಮುಖಂಡ ನಾಗಣ್ಣಗೌಡರಿಗೆ ಕೊಲೆ ಬೆದರಿಕೆ ಹಾಕಿರುವುದನ್ನು ಜಿಲ್ಲೆಯ ಜನಪರ ಸಂಘಟನೆಗಳ ಮುಖಂಡರು ಖಂಡಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಖಂಡರು, ಲೋಕಾಯುಕ್ತದಲ್ಲಿನ ದೂರುಗಳನ್ನು ಹಿಂಪಡೆಯುವಂತೆ ಕೊಲೆ ಬೆದರಿಕೆಯೊಡ್ಡಿದ ಗುತ್ತಿಗೆ ಏಜೆನ್ಸಿ ಆರ್ ಅಂಡ್ ಆರ್ ಮಾಲೀಕ ಸುಮಂತ್ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಸೆವೆನ್ ವಿಜಿ ಹಾಗೂ ಆತನ ಸಹಚರ ಕಿರಣರನ್ನು ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆಯಡಿ (ಕೋಕಾ)ಬಂಧಿಸುವಂತೆ ಆಗ್ರಹಿಸಿದರು.

ಮಿಮ್ಸ್ ಅಕ್ರಮಗಳ ಕುರಿತು ಮಿಮ್ಸ್ ನಿರ್ದೇಶಕ ಹರೀಶ್ ಹಾಗೂ ಆಡಳಿತಾಧಿಕಾರಿಗೆ ದೂರು ನೀಡಿ ಯಾವುದೇ ಪ್ರಯೋಜನವಾಗದಿದ್ದಾಗ ಅಂತಿಮವಾಗಿ ಲೋಕಾಯುಕ್ತದ ಮೊರೆ ಹೋಗಲಾಗಿತ್ತು.

ಮಿಮ್ಸ್ ನಲ್ಲಿ ನಕಲಿ ದಾಖಲೆ ಸಲ್ಲಿಸಿ ಹೊರಗುತ್ತಿಗೆ ಟೆಂಡರ್ ಪಡೆದಿದ್ದ ಏಜೆನ್ಸಿಯ ವಿರುದ್ದ ಯಾವುದೆ ಕ್ರಮ ಕೈಗೊಳ್ಖದೆ ಮಿಮ್ಸ್ ನಿರ್ದೇಶಕ ಹರೀಶ್ ದೂರು ನೀಡಿದವರ ಮೇಲೆಯೆ ಎತ್ತಿಕಟ್ಟಿ ತಮ್ಮ ಅದಕ್ಷತೆ ಮುಚ್ಚಲು ಹೊರಟಿದ್ದಾರೆ. ನಿವೃತ್ತ ನೌಕರರನ್ನು ಕೆಲಸದಲ್ಲಿ ಮುಂದುವರಿಸದಂತೆ ಡಿಎಪಿಆರ್ ಸುತ್ತೋಲೆಯಿದ್ದರೂ ಅದನ್ನು ಕಡೆಗಣಿಸಿ ಐವರು ನಿವೃತ್ತ ನೌಕರರನ್ನು ಒಳಗುತ್ತಿಗೆ ರೂಪದಲ್ಲಿ ಮುಂದುವರಿಸಲಾಗಿದೆ.

ಈ ಹಿಂದೆ ಮಿಮ್ಸ್ ಗೆ 16ಲಕ್ಷ ವಂಚಿಸಿದ್ದ ಕಾಂತಿ ಏಜೆನ್ಸಿ ನೆಟ್ವರ್ಕ್ ಸಂಸ್ಥೆಯ ಅಕ್ರಮದ ಕುರಿತು ನಾವು ನೀಡಿದ ದೂರಿನ ಫಲವಾಗಿ ಸಂಸ್ಥೆಯ 32ಲಕ್ಷ ಹಣ ಗುತ್ತಿಗೆ ಏಜೆನ್ಸಿಯ ಪಾಲಾಗುವುದು ತಪ್ಪಿದೆ. ಈ ಅಕ್ರಮ ದಲ್ಲಿ ಭಾಗಿಯಾದ ಯಾವೊಬ್ಬ ನೌಕರರ ಮೇಲೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಮಿಮ್ಸ್ ನಿರ್ದೇಶಕ ಹರೀಶ್ ರನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕೊಲೆ ಬೆದರಿಕೆಯನ್ನು ಖಂಡಿಸಿ ಆರೋಪಿಗಳ ಮೇಲೆ ಕೋಕಾ ಕಾಯ್ದೆ ಜಾರಿಗೆ ಆಗ್ರಹಿಸಿ ಆ.2ರಂದು ರಾಜ್ಯಾದ್ಯಂತ ಪೋಲಿಸ್ ವರಿಷ್ಟಾಧಿಕಾರಿಗಳ ಮೂಲಕ ರಾಜ್ಯ ಪೋಲಿಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ರೈತ ಮುಖಂಡ ಕೆ.ಬೋರಯ್ಯ, ಕಾರ್ಮಿಕ ಮುಖಂಡ ಎಂ.ಬಿ.ನಾಗಣ್ಣಗೌಡ, ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ, ಸಿಐಟಯು ನ ಸಿ.ಕುಮಾರಿ, ಕೃಷ್ಣೇಗೌಡ, ಕರವೇ ಜಯರಾಮ್, ಕರುನಾಡು ಸೇವಕರು ಸಂಘಟನೆಯ ಚಂದ್ರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!