ಬೆಂಗಳೂರು ಅರಮನೆ ಮೈದಾನದ ವೇದಿಕೆಯಲ್ಲಿ ಇತ್ತಿಚೇಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು 2019-20ನೇ ಸಾಲಿನ ಗಾಂಧಿ ಗ್ರಾಮ ಪ್ರಶಸ್ತಿಯನ್ನು ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಗೆ ವಿತರಿಸಿದರು.
ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ 2019-20, 2020-21 ಹಾಗೂ 2021-22ನೇ ಸಾಲು ಸೇರಿದಂತೆ ಮೂರು ವರ್ಷಗಳ ಸಾಲಿನ ಗಾಂಧೀ ಗ್ರಾಮ ಪುರಸ್ಕಾರವನ್ನು ಈ ಬಾರಿ ಒಟ್ಟಿಗೆ ನೀಡಿ ಗೌರವಿಸಲಾಯಿತು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯು 2019-20ನೇ ಸಾಲಿನ ತಾಲೂಕಿನಲ್ಲಿ ಉತ್ತಮ ಪ್ರಗತಿಗಾಗಿ ಗಾಂಧಿ ಗ್ರಾಮ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಈ ಪ್ರಶಸ್ತಿಯನ್ನು ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿ.ಎಂ.ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎನ್.ನಾಗೇಶ್ವರಿ, ಉಪಾಧ್ಯಕ್ಷ ಸತೀಶ್, ಸದಸ್ಯರಾದ ರಕ್ಷಿತಾ, ಅಣ್ಣಯ್ಯ, ಹರೀಶ್, ರಮೇಶ್, ಸುಂದರ್, ಜಯಶೀಲ, ಸೌಮ್ಯ, ನಾಗಯ್ಯ, ಕುಮಾರೇಗೌಡ, ದೇವಮ್ಮ, ನಾಗಮ್ಮ, ಆಶಾ, ತಾರಾಶ್ರೀ, ಮನೋಹರ್ ಸೇರಿದಂತೆ ಎಲ್ಲಾ ಸದಸ್ಯರು ಮುಖ್ಯಮಂತ್ರಿಗಳು, ಬಿಸಿಎಂ ಇಲಾಖಾ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿರುವ ಗ್ರಾಪಂಗೆ ರಾಜ್ಯ ಸರ್ಕಾರ 5 ಲಕ್ಷ ರೂ ಅನುದಾನ, ಪ್ರಶಸ್ತಿ ಪತ್ರ, ಚಿನ್ನದ ಪದಕ ಹಣ ನೀಡಿ ಗೌರವಿಸಿದೆ.
ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯನ್ನು ಸಚಿವ ಡಾ.ನಾರಾಯಣಗೌಡ, ಜಿ. ಪಂ. ಸಿಇಓ ಶಾಂತಾ ಹುಲ್ಮನಿ, ತಾ.ಪಂ ಇಓ ಸತೀಶ್, ಸಹಾಯಕ ನಿರ್ದೇಶಕ ಸಂದೀಪ್ ಮತ್ತಿತರರು ಅಭಿನಂದಿಸಿದ್ದಾರೆ.




