Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ನೈತಿಕತೆ ಕಲಿಸಿ : ನಾಗರೇವಕ್ಕ

ಪೋಷಕರು ಹೆಣ್ಣು ಮಕ್ಕಳಿಗೆ ನೀಡುವಂತೆ, ಗಂಡು ಮಕ್ಕಳಿಗೂ ನೈತಿಕ ಶಿಕ್ಷಣ ನೀಡಲು ಮುಂದಾಗಬೇಕು. ಅಲ್ಲದೇ ಸಮಾಜದಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳನ್ನೂ ಗೌರವದಿಂದ ಕಾಣುವಂತಹ ಸಂಸ್ಕಾರ ಕಲಿಸಿದರೆ ಸಮಾಜದಲ್ಲಿ ಉತ್ತಮ ಬದಲಾವಣೆಯಾಗಲಿದೆ ಎಂದು ಸಮರ್ಥನ ಮಹಿಳಾ ಸಂಘಟನೆಯ ನಾಗರೇವಕ್ಕ ಹೇಳಿದರು.

ವಿವಿಧ ಮಹಿಳಾ ಪರ ಸಂಘಟನೆಗಳ ನೇತೃತ್ವದಲ್ಲಿ ಇಂದು ಮಂಡ್ಯನಗರದಲ್ಲಿ ನಡೆದ ‘ಅತ್ಯಾಚಾರ ವಿರೋಧಿ ಆಂದೋಲನ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜ ಯಾವತ್ತು ನೊಂದ ಹೆಣ್ಣುಮಕ್ಕಳ ಪರವಾಗಿರಬೇಕು. ಆದರೆ ಆತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳನ್ನೇ ಅವಮಾನಿಸುವ ಕೆಲಸ ನಡೆಯುತ್ತಿರುವುದು ದುರದೃಷ್ಟಕರ. ಅತ್ಯಾಚಾರಿಗಳಿಗೆ ಶಿಕ್ಷೆಯ ಭಯವಿಲ್ಲದಂತಾಗಿದೆ. ಆದ್ದರಿಂದ ಗಲ್ಲು ಶಿಕ್ಷೆ ನೀಡುವಂತಹ ಕಾನೂನು ಜಾರಿಗೆ ತರಬೇಕು. ಪೋಷಕರು ಗಂಡು ಮಕ್ಕಳೇ ಬೇಕೆಂಬ ಮೋಹದಿಂದ ಹೊರಬರಬೇಕು. ಈ ಹಿಂದೆ ವ್ಯಾಪಕವಾಗಿ ನಡೆದ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯಿಂದಾಗಿ ಇಂದು ವಯಸ್ಸಿಗೆ ಬಂದ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ತಾಯಂದಿರೇ ಸ್ವತಃ ಹೆಣ್ಣಾಗಿ, ಹೆಣ್ಣು ಮಕ್ಕಳು ಬೇಡ ಎನ್ನುವುದು ಎಷ್ಟು ಸರಿ. ಇಂತಹ ಮನೋಭಾವನೆಯಿಂದ ಹೊರಬರಬೇಕು. ಹೆಣ್ಣು ಮಕ್ಕಳು ದೌರ್ಜನ್ಯಕ್ಕೊಳಗಾದಾಗ ಅವರನ್ನು ಅವಮಾನಿಸುವುದನ್ನು ಬಿಟ್ಟು ನೈತಿಕ ಬೆಂಬಲ ನೀಡಬೇಕು. ಇಂದು ಮಹಿಳೆಯರೊಬ್ಬರೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತಹ ವಾತಾವರಣ ಇಲ್ಲವಾಗಿದೆ, ಒಂದು ವೇಳೆ ಠಾಣೆಗೆ ಹೋದರೆ ಮಹಿಳೆಯನ್ನೇ ಕೇಳ ಬಾರದ ಪ್ರಶ್ನೆಗಳನ್ನು ಕೇಳಿ, ಆಕೆಯ ಮನೋಬಲವನ್ನು ಕುಂದಿಸುವಂತಹ ಕೆಲಸಗಳು ನಡೆಯುತ್ತಿವೆ, ಪೊಲೀಸರ ಇಂತಹ ಮನೋಭಾವ ಬದಲಾಗಬೇಕು. ಕಾನೂನು ಶ್ರೀಮಂತರ ಪರವಾಗಿ ಕೆಲಸ ಮಾಡದೇ ನೊಂದವರ ಪರವಾಗಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!