ಹೆಣ್ಣು ಮಕ್ಕಳ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಿಗೆ ಮಹಿಳಾ ವಾರ್ಡನ್ ಗಳನ್ನು ನಿಯೋಜಿಸಿ, ಕೇವಲ ದಾಖಲೆಗಳನ್ನು ನಿರ್ವಹಣೆ ಮಾಡುವುದು ವಾರ್ಡನ್ ಗಳ ಕೆಲಸವಾಗಬಾರದು. ಅಧಿಕಾರಿಗಳು ಹಾಸ್ಟೆಲ್ ಹಾಗೂ ವಸತಿ ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಡ್ಯನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾಲೋಚನೆ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಲ್ಯ ವಿವಾಹ ಎಂದರೆ ಜೈಲಿಗೆ ಕಳುಹಿಸುವ ಕಾರ್ಯಕ್ರಮ ಎಂದು ಎಲ್ಲರಿಗೂ ತಿಳಿಸಿ, ಬಾಲ್ಯವಿವಾಹ ಮಾಡಿಸುವ ಪೋಷಕರು, ಪುರೋಹಿತರು, ಕಲ್ಯಾಣ ಮಂಟಪ ನೀಡುವವರು, ಭಾಗವಹಿಸುವವರು, ಎಲ್ಲರಿಗೂ ಶಿಕ್ಷೆ ಇದೆ. ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದರು.
ಹೊಸ ವರ್ಷದ ಮೋಜಿಗೆ ತಡೆ ಹಾಕಿ
ಜನವರಿ 1 ಹೊಸ ವರ್ಷದ ಶುಭಾರಂಭ ಎಂದು ಮೋಜಿಗಾಗಿ 18 ವರ್ಷಕ್ಕಿಂತ ಕೆಳಗಿನವರು ಸಹ ಮದ್ಯ ಸೇವನೆ ಮಾಡುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಗಳು ಹೆಚ್ಚಿನ ನಿಗಾ ವಹಿಸಿ, ಅಬಕಾರಿ ಇಲಾಖೆಯವರು ಮದ್ಯ ಮಾರಾಟ ಮಾಡುವವರಿಗೆ 18 ವರ್ಷಕ್ಕಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವುದು ಕಂಡು ಬಂದರೆ ಪರವಾನಗಿ ರದ್ದು ಪಡಿಸಿ ಎಂದರು.
ಶಾಲೆಯಿಂದ ಹೊರಗುಳಿದಿರುವ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ, ಅವರಿಗೆ ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪೋಷಕರ ಮನ ಪರಿವರ್ತಿಸಿ ಅವರನ್ನು ಶಾಲೆಗೆ ದಾಖಲಿಸುವ ಕೆಲಸ ನಿರ್ವಹಿಸಿ, ನೈತಿಕ ಶಿಕ್ಷಣಕ್ಕೆ ಶಾಲೆಯಲ್ಲಿ ಹೆಚ್ಚಿನ ಆದ್ಯತೆ ನೀಡಿ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನಿ ಕುಮಾರಿ ಮಾತನಾಡಿ ಮಕ್ಕಳು ಭಯ ಹಾಗೂ ಹಿಂಸಾತ್ಮಕ ವಾತಾವರಣದಲ್ಲಿ ಬೆಳೆದರೆ, ಮಕ್ಕಳಲ್ಲಿ ಇರುವ ಕ್ರಿಯಾಶೀಲತೆ ಕುಗ್ಗಿ ಹೋಗುತ್ತದೆ. ಮಕ್ಕಳ ಉತ್ತಮ ಬೆಳವಣಿಗೆಗೆ ಹಲವಾರು ಕಾನೂನುಗಳಿವೆ, ಅವುಗಳ ಬಗ್ಗೆ ಜಿಲ್ಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮಕ್ಕಳನ್ನು ರಕ್ಷಿಸ ಬೇಕಿರುವ ಶಿಕ್ಷಕರು, ವಾರ್ಡನ್ ಗಳು, ಅಧಿಕಾರಿಗಳಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಮಕ್ಕಳ ರಕ್ಷಣೆ ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ. ಲೈಂಗಿಕ ದೌರ್ಜನ್ಯ ಶಿಕ್ಷಾರ್ಹ ಅಪರಾಧ ಎಂದು ತಿಳಿದಿದ್ದರೂ ಅಪರಾಧ ಮಾಡುತ್ತಾರೆ ಎಂದರೆ ಅವರಿಗೆ ಶಿಕ್ಷೆಯ ತೀವ್ರತೆಯ ಬಗ್ಗೆ ಅರಿವು ಇಲ್ಲವೇ ಎಂಬ ಸಂದೇಹ ಸಹ ಮೂಡುತ್ತದೆ. ಪೊಕ್ಸೊ ಕಾಯ್ದೆ ಸೇರಿದಂತೆ ಮಕ್ಕಳಿಗೆ ಇರುವ ಕಾನೂನಿನ ಬಗ್ಗೆ ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ಸಭೆಯಲ್ಲಿ ಜಿ.ಪಂ. ಸಿಇಓ ಶಾಂತ ಎಲ್ ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ವಿಜಯ ಪ್ರಕಾಶ್, ಸಿ.ಡಿ.ಪಿ.ಒ ಕುಮಾರ ಸ್ವಾಮಿ, ಮಕ್ಕಳ ಸಹಾಯವಾಣಿಯ ನಿರ್ದೇಶಕರಾದ ವೆಂಕಟೇಶ್, ಮಹೇಶ್ ಚಂದ್ರ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




