Sunday, March 3, 2024

ಪ್ರಾಯೋಗಿಕ ಆವೃತ್ತಿ

ಶ್ರಮಿಕ (ಸ್ಲಂ) ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ಮಂಡ್ಯದಲ್ಲಿ ಒಟ್ಟು 23 ಶ್ರಮಿಕನಗರ (ಸ್ಲಂಗಳು)ಗಳಿದ್ದು,  ಜ್ವಲಂತವಾಗಿರುವ ಅವುಗಳಲ್ಲಿ  ಹಕ್ಕುಪತ್ರದ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಜಿಲ್ಲಾಡಳಿತ ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿ  ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ, ಕರ್ನಾಟಕ ಜನಶಕ್ತಿ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಗಳು ಜಂಟಿಯಾಗಿ ಸೋಮವಾರ ಪ್ರತಿಭಟನೆ ನಡೆಸಿದವು.

ಮಂಡ್ಯನಗರ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯನಗರದ ಸ್ಲಂ ಭೂಮಿಗಳನ್ನು ನಗರಸಭೆಯು ಸ್ಲಂ ಬೋರ್ಡ್ ಗೆ ಹಸ್ತಾಂತರಿಸಿಲ್ಲದ ಕಾರಣ ಹಕ್ಕುಪತ್ರ ನೀಡಲಾಗುತ್ತಿಲ್ಲವೆಂದು ಕಾರ್ಯಪಾಲಕ ಅಭಿಯಂತರರು, ಜಿಲ್ಲಾಧಿಕಾರಿಗಳು ನಡೆಸಿದ ಉನ್ನತ ಮಟ್ಟದ ಸಭೆಯ
ಸಂದರ್ಭದಲ್ಲಿ ತಿಳಿಸಿದ್ದಾರೆ, ಈ ವಿಚಾರ ತುರ್ತಾಗಿ ಬಗೆಯಹರಿಸಬೇಕೆಂದು ಒತ್ತಾಯಿಸಿದರು.

ಬಡಜನರು ವಾಸಿಸುತ್ತಿರುವ ಎಲ್ಲ ಸ್ಲಂಗಳ ಭೂಮಿಯನ್ನೂ ಸ್ಲಂ ಬೋರ್ಡ್ ಗೆ ಹಸ್ತಾಂತರ ಮಾಡಬೇಕು. ಅಲ್ಲಿ ಸರ್ವೆ ನಡೆಸಿ ಜನರಿಗೆ ಹಕ್ಕುಪತ್ರ ಕೊಡುವುದನ್ನೂ ಒಳಗೊಂಡಂತೆ, ಎಲ್ಲಾ ಶ್ರಮಿಕನಗರಗಳ ಸಮಸ್ಯೆಗಳನ್ನೂ ಬಗೆಹರಿಸುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.

ಇತ್ತೀಚೆಗೆ ಮಂಡ್ಯನಗರದ ಆರ್.ಟಿ.ಓ ಕಚೇರಿ ಎದುರಿನ ಕಾಳಪ್ಪ ಬಡಾವಣೆಯ ಜಾಗದ ವಿಚಾರದಲ್ಲಿ ನಿವಾಸಿಗಳು ನಿರಂತರ ಧರಣಿ ಮತ್ತು ಪಾದಯಾತ್ರೆ ಕೈಗೊಂಡ ನಂತರ ಈ ವಿಷಯದಲ್ಲಿ ಸಕಾರಾತ್ಮಕ ಬೆಳವಣಿಗೆಗಳಾಗಿವೆ. ಜಾಗದ ಕುರಿತ ಗೊಂದಲವನ್ನು ಪರಿಹರಿಸಿಕೊಂಡ ಸ್ಲಂ ಬೋರ್ಡ್ ಅಧಿಕಾರಿಗಳು ಈಗಾಗಲೇ ಸರ್ವೇ ನಡೆಸಿದ್ದಾರೆ. ಹಾಗೆಯೇ ಏರಿಯಾದಿಂದ ಹೊರಗಿರುವ ಕುಟುಂಬಗಳ ಭೂಮಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಿದರು.

ರೈಲು ನಿಲ್ದಾಣದ ಪಕ್ಕದಲ್ಲಿರುವ ಇಂದಿರಾ ಬಡಾವಣೆ (ನಂದಾ ಸ್ಲಂ) ನಿವಾಸಿಗಳಿಗೆ ಪರ್ಯಾಯ ನಿವೇಶನಗಳನ್ನು ಗುರುತಿಸಿ, ವಸತಿ ನಿರ್ಮಾಣದ ಯೋಜನೆಯನ್ನೂ ದೊರಕಿಸಿದರೆ, ಸ್ಥಳಾಂತರಗೊಳ್ಳಲು ಸಿದ್ಧರಿದ್ದಾರೆ. ಈ ಬಗ್ಗೆ ಕಳೆದ ಉನ್ನತ ಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯೂ ಆಗಿದೆ. ನಿವಾಸಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಸೂಕ್ತ ರೀತಿಯ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಂಡ್ಯದ ಗ್ರಾಮದೇವತೆ ಕಾಳಿಕಾಂಭ ದೇವಾಲಯದ ಆವರಣದಲ್ಲಿ ದೇವಾಲಯದ ಸೇವಾ ಸಮಿತಿಯು ಘೋಷಿತ ಸ್ಲಂನ ಸ್ಥಳವನ್ನು ಅತಿಕ್ರಮಣ ಮಾಡಿಕೊಂಡು ವಿಶಾಲವಾದ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಕೊಂಡು ಕೋಟ್ಯಾಂತರ ರೂ.ಗಳ ಆದಾಯಗಳಿಸುತ್ತಿದ್ದರೂ, ಪಕ್ಕದ ಚಿಕ್ಕ ಪ್ರದೇಶದಲ್ಲಿ ವಾಸವಿರುವ ಸ್ಲಂ ನಿವಾಸಿಗಳನ್ನು ಅದು ದೇವಾಲಯಕ್ಕೆ ಸೇರಿದ ಸ್ಥಳ ಎಂಬ ನೆಮವೊಡ್ಡಿ ಎತ್ತಂಗಡಿ ಮಾಡಲು ನಿರಂತರ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ವಿಚಾರವಾಗಿ ಸಮುದಾಯ ಭವನದ ಸ್ಥಳವನ್ನು ಈ ಹಿಂದೆ ಜಿಲ್ಲಾಡಳಿತವು ಪೊಲೀಸ್ ನೆರವಿನೊಂದಿಗೆ ಸ್ಲಂ ನಿವಾಸಿಗಳಿಗೆ ತೆರವು ಮಾಡಿಕೊಡಲು ನೋಡಿದಾಗ ಧಿಡೀರನೆ ಹಾಲಿ ಜನರು, ವಾಸವಿರುವ ಸ್ಥಳವನ್ನೇ ಬಿಟ್ಟುಕೊಡುವುದಾಗಿ ಒಪ್ಪಂದ ಮಾಡಿಕೊಂಡು ಈಗ ವಸತಿ ಯೋಜನೆ ಮಂಜೂರಾಗಿ ಮನೆ ನಿರ್ಮಾಣ ಹಂತದಲ್ಲಿರುವಾಗ ಮತ್ತೆ ಸ್ಲಂ ನಿವಾಸಿಗಳ ವಿರುದ್ಧವಾಗಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಈ ವಿಚಾರ ಈಗಾಗಲೇ ತಮ್ಮ ಗಮನದಲ್ಲಿದ್ದ ಅಧಿಕಾರಿಗಳಿಗೆ, ತಾವು ಸೂಚನೆ ಕೊಟ್ಟಿದ್ದಾಗಲೂ ನಿರ್ಣಾಯಕವಾದ ಕೆಲಸ ಇನ್ನೂ ಆಗಬೇಕಿದೆ. ಇದಕ್ಕೆ ಸೂಕ್ತವಾದ ಪರಿಹಾರವನ್ನು ಜಿಲ್ಲಾಧಿಕಾರಿಗಳು ದೊರಕಿಸಿ, ಬಡಜನರಿಗೆ ಶಾಶ್ವತ ಸೂರು ಒದಗಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಮಂಡ್ಯನಗರದ ಇನ್ನಿತರೆ ಸ್ಲಂಗಳ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಸುಬ್ರಮಣ್ಯ, ಮಂಗಲ ಎಂ.ಸಿ.ಲಂಕೇಶ್, ಕಮಲ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!