Tuesday, November 24, 2026

ಪ್ರಾಯೋಗಿಕ ಆವೃತ್ತಿ

ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಒಂದು ಅವಕಾಶ ಕೊಡಿ: ಡಿ.ಕೆ. ಶಿವಕುಮಾರ್

ಡಬಲ್ ಇಂಜಿನ್ ಸರ್ಕಾರ ಅತ್ಯಂತ ಭ್ರಷ್ಟವಾಗಿದ್ದು, ಇದನ್ನು ಕಿತ್ತೆಸೆದು ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಒಂದು ಅವಕಾಶ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಸ್ಥಾನದ ಆವರಣದಲ್ಲಿ ತಾಲೂಕು ಕಾಂಗ್ರೆಸ್ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ರಾಜ್ಯದಲ್ಲಿ ಅತ್ಯಂತ ಕಡು ಭ್ರಷ್ಟ ಸರ್ಕಾರವಿದೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಬೆಲೆ ಏರಿಕೆ ಗಗನ ಮುಟ್ಟಿದೆ. ಜನರ ಬದುಕು ಪಾತಾಳಕ್ಕೆ ಹೋಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಮನೆಗೂ 200 ಯೂನಿಟ್ ಕರೆಂಟ್ ಉಚಿತ, ಪ್ರತಿ ಕುಟುಂಬದ ಮಹಿಳೆಗೆ 2000 ಖಚಿತ ಹಾಗೂ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನಿಶ್ಚಿತ ಎಂದ ಅವರು, ಕಾಂಗ್ರೆಸ್ ಪಕ್ಷಕ್ಕೆ ಒಂದು ಅವಕಾಶ ಕೊಡಿ ಎಂದರು.

ಜೆಡಿಎಸ್ ಬಗ್ಗೆ ಮಾತಾಡಿಲ್ಲ
ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರು-ಬೆಂಗಳೂರು ರಸ್ತೆ ಹೆದ್ದಾರಿ ಉದ್ಘಾಟಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಬೈದು ಹೋದರು. ಆದರೆ ಜೆಡಿಎಸ್ ವಿರುದ್ಧ ಮೋದಿ ಅವರು ಒಂದು ಮಾತನ್ನು ಆಡಲಿಲ್ಲ. ಇದು ಯಾವ ಸಂದೇಶ ನೀಡುತ್ತದೆ ಜನರು ತೀರ್ಮಾನ ಮಾಡಲಿ ಎಂದರು.

ನಂಬಿಕೆ ವ್ಯಕ್ತಿ ಚೆಲುವರಾಯಸ್ವಾಮಿ
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಬೇರಿಲ್ಲ ಅಂದರೆ ಮರ ಉಳಿಯುವುದಿಲ್ಲ, ನಂಬಿಕೆ ಇಲ್ಲ ಎಂದರೆ ಸಂಬಂಧ ಉಳಿಯುವುದಿಲ್ಲ. ಮಾತು ಕೊಡೋದು ಮುಖ್ಯವಲ್ಲ, ಕೊಟ್ಟ ಮಾತು ಉಳಿಸಿಕೊಳ್ಳುವುದು ಬಹಳ ಮುಖ್ಯ. 1999 ಎಸ್‌.ಎಂ.ಕೃಷ್ಣರವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹತ್ತು ಜನ ಜೆಡಿಎಸ್ ಶಾಸಕರು ಇದ್ದರು. ಅದರಲ್ಲಿ ಆರು ಜನ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.ಆದರೆ ಚಲುವರಾಯಸ್ವಾಮಿ ಮಾತ್ರ ನಾನು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಬಿಟ್ಟು ಬರಲ್ಲ ಎಂದು ಅಲ್ಲೇ ಉಳಿದುಕೊಂಡರು.ಇದು ಅವರಂತೆಹ ನಂಬಿಕೆಯ ವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ಚೆಲುವರಾಯಸ್ವಾಮಿ ಒಬ್ಬ ಧೀಮಂತ ನಾಯಕ, ಅವರನ್ನು ಈ ಬಾರಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಬೇಕೆಂದು ಕೋರಿದರು.

ಸುಳ್ಳು ಮಾತ್ರ ಹೇಳಬೇಡಿ
ಎಚ್ ಡಿ ಕುಮಾರಸ್ವಾಮಿ ಅವರು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಾಲ ಮನ್ನ ಮಾಡುವುದಾಗಿ ಹೇಳಿಕೆ ನೀಡಿದ್ದರು. ಆದರೆ ಇತ್ತೀಚಿಗೆ ಸಭೆಯೊಂದರಲ್ಲಿ ಸ್ವಾಮೀಜಿಯವರ ಮೇಲೆ ಆಣೆ ಮಾಡಿ ನಾನು ಹಾಗೆ ಹೇಳಿಲ್ಲ ಎಂದು ಹೇಳಿದ್ದಾರೆ. ದಯವಿಟ್ಟು ಹೆಚ್‍.ಡಿ. ಕುಮಾರಸ್ವಾಮಿಯವರೇ ನೀವು ಸಾಲ ಮನ್ನಾ ಮಾಡೋದೇ ಇದ್ದರೂ ಪರವಾಗಿಲ್ಲ, ಸುಳ್ಳು ಮಾತ್ರ ಹೇಳಬೇಡಿ ಎಂದು ಕೈ ಕೈ ಮುಗಿದರು.

ಕೆಡುಕು ಬಯಸಿಲ್ಲ
ಕುಮಾರಸ್ವಾಮಿ ಮಾತೆತ್ತಿದ್ರೆ ನಾನು ರೈತನ ಮಗ ಎಂದು ಕಣ್ಣೀರು ಹಾಕುತ್ತಾರೆ. ನಮ್ಮ ಕಣ್ಣಲ್ಲೂ ನೀರು ಬರುತ್ತದೆ‌. ಆದರೆ ನೋವಿನಿಂದ ಬರುವುದು ಶಾಶ್ವತ. ಚೆಲುವರಾಯಸ್ವಾಮಿಯವರು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು. ನಾವು ಕೂಡ ಬಹಳ ಗೌರವದಿಂದ ನಿಯತ್ತಿನಿಂದ ಅವರ ಜೊತೆ 14 ತಿಂಗಳು ಮೈತ್ರಿ ಸರ್ಕಾರ ಮಾಡಿದೆವು. ನಾವು ಯಾವ ಕೆಡುಕನ್ನು ಬಯಸಲಿಲ್ಲ. ನಮ್ಮ ಪಕ್ಷದ ವರಿಷ್ಠರು ಹೇಳಿದ್ದಾರೆಂದು ಅವನ ಅವರ ಮಗನ ಪರ ಚುನಾವಣೆ ಮಾಡಿದೆವು. ಆದರೆ ಜನರ ತೀರ್ಮಾನ ಬೇರೆಯಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ, ನೀರಾವರಿ ಯೋಜನೆ ಮೊದಲಾದ ಯೋಜನೆಗಳ ಅನುಷ್ಠಾನ ಮಾಡಿ ಸಾಕ್ಷಿ ಗುಡ್ಡೆ ಬಿಟ್ಟಿದ್ದರೆ, ನಾನು ಇಲ್ಲಿ ಜೆಡಿಎಸ್ ವಿರುದ್ಧ ಮಾತನಾಡಲು ಆಗುತ್ತಿರಲಿಲ್ಲ ಎಂದರು.

ನಿಮ್ಮ ಮನೆಯ ಮಗ
ನಾನೂ ಮಣ್ಣಿನ ಮಗ, ನಿಮ್ಮ ಮನೆಯ ಮಗ. ಈ ಬಾರಿಯ ಚುನಾವಣೆಯಲ್ಲಿ ಇಲ್ಲಿ ಚೆಲುವರಾಯಸ್ವಾಮಿ ಅಭ್ಯರ್ಥಿಯಲ್ಲ ನಾನೇ ಅಭ್ಯರ್ಥಿ ಎಂದು ತಿಳಿದು ನನಗೆ ಸಹಾಯ ಮಾಡಬೇಕು. ನಿಮ್ಮ ಮನೆಯ ಮಗನಾದ ನನಗೂ ಒಂದು ಅವಕಾಶ ಕೊಡಿ. ನಿಮ್ಮೆಲ್ಲ ಕಷ್ಟ ಸುಖಗಳಿಗೆ ನಾನು ಚೆಲುವರಾಯಸ್ವಾಮಿ ದನಿಯಾಗಿ ನಿಲ್ಲುತ್ತೇವೆ ಎಂದು ಜನತೆಗೆ ಅಭಯ ನೀಡಿದರು.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಜವರೇಗೌಡ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬೆಟ್ಟೇಗೌಡ ಮತ್ತಿತರರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಸಮಾವೇಶ ಆರಂಭಕ್ಕೂ ಮುನ್ನ ಬೆಳ್ಳೂರು ಕ್ರಾಸ್ ನಿಂದ ಸಾವಿರಾರು ಬೈಕ್ ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ಹಾಗೂ ಚಲುವರಾಯಸ್ವಾಮಿಯವರನ್ನು ಮೆರವಣಿಗೆ ಮೂಲಕ ನಾಗಮಂಗಲ ಪಟ್ಟಣಕ್ಕೆ ಕರೆತಂದರು. ಅಭಿಮಾನಿಗಳು ಡಿ.ಕೆ. ಶಿವಕುಮಾರ್ ಮತ್ತು ಚಲುವರಾಯಸ್ವಾಮಿಯವರಿಗೆ ಕೊಬ್ಬರಿಹಾರ, ಸೇಬು, ಮೂಸಂಬಿ ಹಾರ ಹಾಕಿ ಪುಷ್ಪವನ್ನು ಎರಚಿ ಅದ್ದೂರಿಯಾಗಿ ಬರಮಾಡಿಕೊಂಡರು.

ವೇದಿಕೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪಿ‌ಎಂ.ನರೇಂದ್ರ ಸ್ವಾಮಿ, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿದರು.

ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಬಿ. ಪ್ರಕಾಶ್, ಬಿ. ರಾಮಕೃಷ್ಣ,ಜಿಲ್ಲಾಧ್ಯಕ್ಷ ಸಿ.ಡಿ‌. ಗಂಗಾಧರ್, ಗುರು ಚರಣ್, ಅಂಜನ ಶ್ರೀಕಾಂತ್, ಅಮರಾವತಿ ಚಂದ್ರಶೇಖರ್, ಕೃಷ್ಣೇಗೌಡ ಮತ್ತಿತರರಿದ್ದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ