Saturday, July 13, 2024

ಪ್ರಾಯೋಗಿಕ ಆವೃತ್ತಿ

ಚುನಾವಣೆ ಸಿದ್ಧತೆ ನಡೆಸುತ್ತಿಲ್ಲ: ರವೀಂದ್ರ ಶ್ರೀಕಂಠಯ್ಯ

ಶ್ರೀರಂಗಪಟ್ಟಣ ಕ್ಷೇತ್ರದ ಜನತೆ ನನಗೆ ಜನಪ್ರತಿನಿಧಿಯಾಗಲು ಆಶೀರ್ವಾದ ಮಾಡಿದ್ದಾರೆ. ಅವರ ಪ್ರತಿನಿಧಿಯಾಗಿ ನಾನು ಅಭಿವೃದ್ಧಿ ಕಾರ್ಯವನ್ನು ಮಾಡಲು ಬಂದಿದ್ದೇನೆ ಹೊರತು ಯಾವ ಚುನಾವಣೆಗೂ ಸಿದ್ಧತೆ ನಡೆಸುತ್ತಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ತಾಲ್ಲೂಕಿನ ಅರಕೆರೆ ಹೋಬಳಿಯ ಗೆಂಡೆಹೊಸಹಳ್ಳಿ ಹಾಗೂ ಮಣಿಗೌಡರ ಹುಂಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,1952 ರಿಂದಲೇ ನಮ್ಮ ಕುಟುಂಬಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ.

ಜನಾದೇಶಕ್ಕೆ ಬದ್ಧರಾಗಿ ಜನಸೇವೆಗೆ ಮುಂದಾಗಿದ್ದೇನೆ. ಕ್ಷೇತ್ರದ ಹಲವು ಹಳ್ಳಿಗಳು ದಶಕಗಳ ಕಾಲದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ನನ್ನ ಅವಧಿಯಲ್ಲಿ ಅಂತಹ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದೇನೆ ಎಂದರು.

ರಾಜ್ಯದಲ್ಲಿ ಪರ್ಸೆಂಟೇಜ್ ವ್ಯವಹಾರದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವ್ಯವಸ್ಥೆ ಬದಲಾಗಬೇಕು. ಎಲ್ಲಾ ಸರ್ಕಾರದ ಅವಧಿಯಲ್ಲೂ ಪರ್ಸೆಂಟೇಜ್ ಪ್ರವೃತ್ತಿ ಇರುವುದು ಸಹಜ. ಸರ್ಕಾರದಿಂದ ಗ್ರಾಮೀಣ ಪ್ರದೇಶಗಳಿಗೆ ಬಿಡುಗಡೆಯಾಗುವ ಅನುದಾನ ಸಂಪೂರ್ಣ ಸದ್ಬಳಕೆಯಾಗಬೇಕು. ಇದಕ್ಕೆ ಅಗತ್ಯವಾಗಿರುವ ಕಾನೂನು ಜಾರಿಗೊಳ್ಳಬೇಕೆಂದರು.

ಬಹುದಿನಗಳ ನಿರೀಕ್ಷೆಯಾಗಿದ್ದ ಗೆಂಡೆಹೊಸಹಳ್ಳಿ ಗ್ರಾಮದ ಮಧ್ಯೆ ಬೀದಿಯ ರಸ್ತೆ ಡಾಂಬರೀಕರಣಕ್ಕೆ 30ಲಕ್ಷ ರೂ, ಹಾಗೂ ಮಣಿಗೌಡನಹಳ್ಳಿ ಗ್ರಾಮದ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 50ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಗೆಂಡೆ ಹೊಸಹಳ್ಳಿ ಗ್ರಾಮದಲ್ಲಿ ಬಹಳ ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ಅಲ್ಲಿ ಡಾಂಬರೀಕರಣ ಕಾಮಗಾರಿ ನಡೆದಿದೆ.

ಹಾಗೆಯೇ ಮಣಿಗೌಡರ ಹುಂಡಿ ಗ್ರಾಮದಲ್ಲಿ ನಮ್ಮ ತಾಯಿ ಶಾಸಕರಾಗಿದ್ದ ಸಂದರ್ಭದಲ್ಲಿ ಕಾಮಗಾರಿ ನಡೆದದ್ದು ಬಿಟ್ಟರೆ, ಬೇರೆ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿರಲಿಲ್ಲ. ಇಂದು 50ಲಕ್ಷ ರೂ. ವೆಚ್ವದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!