Thursday, September 19, 2024

ಪ್ರಾಯೋಗಿಕ ಆವೃತ್ತಿ

ನನಗೊಂದು ಅವಕಾಶ ಕೊಡಿ: ಶಿವರಾಮೇಗೌಡ

ಕಳೆದ 25 ವರ್ಷಗಳಿಂದ ಪೂರ್ಣ ಪ್ರಮಾಣದ ಅಧಿಕಾರ ಪಡೆದಿಲ್ಲ. ಈ ಬಾರಿ ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಶಾಸಕನಾಗಲು ನನಗೊಂದು ಅವಕಾಶ ಕೊಡಿ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮನವಿ ಮಾಡಿದರು.

ಮದ್ದೂರು ತಾಲೂಕಿನ ಕೊಪ್ಪದಲ್ಲಿ ಮಂಗಳವಾರ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕೊಪ್ಪ ಭಾಗದ ಜನರು ತೀರ್ಮಾನ ಮಾಡಿದರೆ ನಾನು ನಾಗಮಂಗಲದ ಶಾಸಕನಾಗಬಹುದು.

ಅದಕ್ಕಾಗಿ ನೀವು ತೀರ್ಮಾನ ತೆಗೆದುಕೊಳ್ಳಬೇಕು. ಬುದ್ಧಿವಂತಿಕೆಯಿಂದ ರಾಜಕೀಯ ಮಾಡಿ ನನಗೂ ಒಂದು ಅವಕಾಶ ಕೊಡಿ. “ಸರಿಯಾಗಿ ಕೆಲಸ ಮಾಡಿದ್ರೆ ಕ್ಷೆತ್ರದ ಒಳಗೆ ಕರ್ಕೊಳಿ, ಇಲ್ಲದಿದ್ದರೆ ಮುಖಕ್ಕೆ ಉಗಿದು ಆಚೆ ಕಳ್ಸಿ”. ಈ ಬಾರಿ ನನ್ನ ಕೈ ಬಿಡಬೇಡಿ ಎಂದು ಕಳಕಳಿಯಿಂದ ಮನವಿ ಮಾಡಿದರು.

ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಇವರಿಬ್ಬರ ಆಡಳಿತದಿಂದ ನಾಗಮಂಗಲ ಕ್ಷೇತ್ರದ ಜನ ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರು ಮುಂದಿನ ಚುನಾವಣೆಯಲ್ಲಿ ಅಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಹಳ್ಳಿಗಳಲ್ಲಿ ಪ್ರವಾಸ ಮಾಡುವಾಗ ಜನರು ಹಲವು ಸಮಸ್ಯೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನಾನು ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಎರಡು ಬಾರಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿ ಮಾದರಿ ಕೆಲಸಗಳನ್ನು ಮಾಡಿದ್ದೇನೆ. ಅಂದು ನಾನು ಶಾಸಕನಾಗಿ ಮಾಡಿದ ಕೆಲಸಗಳು ಇಂದಿಗೂ ಜೀವಂತವಾಗಿವೆ.

ಪ್ರಸ್ತುತ ನಾಗಮಂಗಲ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕೇವಲ ಅಧಿಕಾರಕ್ಕಾಗಿ ಕಾದಾಡುವವರು ಅಭಿವೃದ್ಧಿಯನ್ನು ಮಾಡುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದರು.

ನಾಗಮಂಗಲ ವಿಧಾನಸಭಾ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಹಾಗಾಗಿ ನಾನು ಮತ್ತೊಮ್ಮೆ ಶಾಸಕನಾಗಿ ಆಯ್ಕೆ ಆಗುವ ವಿಶ್ವಾಸವಿದೆ. ನಾಗಮಂಗಲ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿಯೂ ನನ್ನನ್ನು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಪ್ರೀತಿ ತೋರುತ್ತಿದ್ದಾರೆ. ಆ ಪ್ರೀತಿಗೆ ನಾನು ಆಭಾರಿಯಾಗಿರುತ್ತೇನೆ ಎಂದು ತಿಳಿಸಿದರು.

ಕುಮಾರ್, ಅರಗಿನ ಮೆಳೆ ರಾಮೇಗೌಡ, ಕೇಬಲ್ ರಮೇಶ್, ಸ್ವಾಮಿ, ನಾಗರಾಜು, ಪುಟ್ಟಸ್ವಾಮಿ, ರಮೇಶ, ಚೇತನ್, ಅಬ್ರಾರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!