Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಾಗತಿಕ ತಾಪಮಾನ ಮತ್ತು ಕೃಷಿ ಜಾಗೃತಿ ಸಮಾವೇಶ

ಉಳುಮೆ ಪ್ರತಿಷ್ಟಾನದ ವತಿಯಿಂದ ಜಾಗತಿಕ ತಾಪಮಾನ ಮತ್ತು ಕೃಷಿ ಜಾಗೃತಿ ಸಮಾವೇಶವು ಮಳವಳ್ಳಿ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ರೈತ ಸಮುದಾಯ ಕಲ್ಯಾಣ ಮಂಟಪದಲ್ಲಿ ನ.11ರಂದು ನಡೆಯಲಿದೆ.

ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ಜಾಗೃತಿ ಹಾಗೂ ಚಿಂತನಾ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ನಾಗೇಶ್ ಹೆಗಡೆ, ವಿ. ಗಾಯತ್ರಿ, ಎಂ. ವಿ.ಕೃಷ್ಣ, ಅವಿನಾಶ್ ಟಿ.ಜಿ.ಎಸ್, ಉಜ್ಜನಿ ಗೌಡ, ಶಿವಲಿಂಗು ಕೆಂಬೂತಗೆರೆ, ಶಿವಕುಮಾರ್ ಎಸ್. ಬೆಟ್ಟಿಕಾಳ ಭಾಗವಹಿಸುವರು.

“ನಾವೇ ಕಲುಷಿತಗೊಳಿಸಿರುವ ಪ್ರಕೃತಿಯನ್ನು ನಾವೇ ರಕ್ಷಿಸೋಣ ಬನ್ನಿ, ನಮ್ಮ ಉಳಿವಿಗಾಗಿ ಸುಳಿವನ್ನು ಹುಡುಕೋಣ” ಎಂಬ ಧ್ಯೇಯವಾಕ್ಯದೊಂದಿಗೆ ಈ ಸಮಾವೇಶ ಜರುಗಲಿದೆ.

ಇತ್ತೀಚಿನ ದಿನಗಳಲ್ಲಿ ಒಂದು ಕಡೆ ಜಾಗತಿಕ ತಾಪಮಾನ, ಇನ್ನೊಂದು ಕಡೆ ಭೂತಾಪಮಾನಕ್ಕೆ ಸಿಲುಕಿ ವಾತಾವರಣ, ಭೂಮಿ, ಜೀವಸಂಕುಲ ಬೇಯುತ್ತಿದೆ. ಇರುವುದೊಂದೇ ಭೂಮಿ, ಇಲ್ಲಿ ಜೀವವೈವಿಧ್ಯತೆಯನ್ನು ಕಾಪಾಡದಿದ್ದರೆ, ಮನುಷ್ಯ ಸಂಕುಲವೇ ನಶಿಸಿಹೋಗುವುದು ಖಚಿತ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಒಂದು ತಿಂಗಳಲ್ಲಿ ಬೀಳುವ ಮಳೆ, ಒಂದೇ ದಿನದಲ್ಲಿ ಬೀಳುತ್ತಿದೆ. ಅಕಾಲಿಕ ಮಳೆ ಬರುತ್ತಿದೆ. ಸೈಕ್ಲೋನ್‌ಗಳ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವುದು ಹೇಗೆ? ಕಾಡಿದ್ದರೆ ಮಳೆ, ಮಳೆಯಿದ್ದರೆ ಬೆಳೆ, ಬೆಳೆಯಿದ್ದರೆ ಬದುಕು ಎಂಬ ಗಾದೆಯ ಮಾತನ್ನು ನಾವು ಧಿಕ್ಕರಿಸಿ ಇಂದು ಮಣ್ಣುಮುಕ್ಕುತ್ತಿದ್ದೇವೆ. ಮಲೆನಾಡು ಬಯಲು ನಾಡಾಗಲು ಹೊರಟಿದೆ. ಬಯಲುಸೀಮೆ ಬರಡಾಗುತ್ತಿದೆ. ನಮ್ಮ ನೆಲ ಜಲಕ್ಕೆ ರಾಸಾಯನಿಕಗಳು ಸೇರುತ್ತಾ ನಾವು ವಿಷ ಉಣ್ಣುತ್ತಿದ್ದೇವೆ. ನಾಳೆ ನಮ್ಮ ಮಕ್ಕಳು, ಮೊಮ್ಮಕ್ಕಳು ಒಕ್ಕೊರಲಿನಿಂದ “ನಾವು ಮಾಡದ ಪಾಪಕ್ಕೆ ನಮ್ಮನ್ನೇ ಬಲಿ ಕೊಟ್ಟುಬಿಟ್ಟಿರಲ್ಲಾ” ಎಂದಾಗ ನಮ್ಮ ಉತ್ತರವಾದರೂ ಏನು?

ಇಂದು ಅಭಿವೃದ್ಧಿ ಎಂಬ ದಾಹದ ಅಟ್ಟಹಾಸಕ್ಕೆ ಭೂತಾಪಮಾನದ ಬಿಸಿ ತಟ್ಟುತ್ತಲ್ಲೇ ಇಲ್ಲವಲ್ಲ? ಅಥವಾ ಬಿಸಿ ತಟ್ಟಿಸಲು ಇನ್ನೆಷ್ಟು ಬದುಕುಗಳು ನಲುಗಬೇಕು? ಇಂತಹ ನೂರಾರು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತಿವೆ. ತಮ್ಮಲ್ಲೂ ಇಂತಹ ಪ್ರಶ್ನೆಗಳಿರಬಹುದು. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಉಳುಮೆ ಪ್ರತಿಷ್ಠಾನ ಈ ಸಮಾವೇಶ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಮೊ.81978 56132 ಸಂಪರ್ಕಿಸಬಹುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!