Thursday, September 19, 2024

ಪ್ರಾಯೋಗಿಕ ಆವೃತ್ತಿ

ದೇವರು- ಆಧ್ಯಾತ್ಮ ಶೋಷಣೆಯ ಕೇಂದ್ರಗಳಾಗಿವೆ- ಜಾಣಗೆರೆ ವೆಂಕಟರಾಮಯ್ಯ

ಪ್ರಸ್ತುತ ಸಮಾಜದಲ್ಲಿ ದೇವರು, ಆಧ್ಯಾತ್ಮಿಕತೆಯು ಶೋಷಣೆಯ ವ್ಯಾಪಾರ ಕೇಂದ್ರಗಳಾಗಿವೆ, ಈ ಭ್ರಮೆಯನ್ನು ಬಿಟ್ಟು ಸಮಾಜಮುಖಿ ಕೆಲಸದ ಮೂಲಕ ಜನತ ಮತ್ತಷ್ಟು ಗಟ್ಟಿಯಾಗಬೇಕು ಎಂದು ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಮಂಡ್ಯ ತಾಲ್ಲೂಕಿನ ಹಲ್ಲೆಗೆರೆಯಲ್ಲಿ ಶಿವಶರಣೆ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಠಾನದ ವತಿಯಿಂದ ಪತ್ರಕರ್ತ ಡಾ.ಹಲ್ಲೆಗೆರೆ ಶಂಕರ್ ಆಯೋಜಿಸಿದ್ದ ಮೂರನೆಯ ವರ್ಷದ ”ಶರಣ ಮೇಳ, ತತ್ವಪದ ಸ್ಪರ್ಧೆ, ವಚನ ರತ್ನ ಪ್ರಶಸ್ತಿ ಪ್ರದಾನ” ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಸಮಾಜ ಕುಲಗೆಟ್ಟು ಹೋಗಿದೆ ಬಾಂಧವ್ಯಕ್ಕೆ ಬೆಲೆ ಇಲ್ಲದಾಗಿದೆ. ಆಧ್ಯಾತ್ಮಿಕತೆ ಭಾವದಿಂದ ಸುಖ ನೆಮ್ಮದಿ ಸಿಗುತ್ತದೆ ಎಂಬ ಭ್ರಮೆ ಬೇಡ, ಎಲ್ಲವನ್ನು ಭದ್ರ ಮಾಡಿಕೊಳ್ಳಿ, ಆಶ್ರಮ ಸ್ಥಾಪನೆಯಿಂದ ಸಮಾಜಕ್ಕೆ ಒಳ್ಳೆಯದಾಗಿಲ್ಲ, ಆಶ್ರಮವಾಸಿಗಳ ಕರ್ಮಕಾಂಡ ಇಡೀ ರಾಜ್ಯಕ್ಕೆ ಗೊತ್ತಿದೆ. ಒಳ್ಳೆಯವರಿಗೆ ನೋವು ಕಷ್ಟಗಳು ಹೆಚ್ಚು. ಆದ್ದರಿಂದ ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡು ಸಮಾಜಮುಖಿ ಕಾರ್ಯವನ್ನು ಮಾಡುವಂತೆ ಸಲಹೆ ನೀಡಿದರು.

ಸಮಾಜದ ವ್ಯವಸ್ಥೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಸಮಾಜದಲ್ಲಿ ಲೂಟಿಕೋರರು, ವಂಚಕರು ದ್ರೋಹಿಗಳದ್ದೇ ಕಾಲವಾಗಿದೆ. ಮನುಷ್ಯ ಪಕ್ವತೆ ಪಡೆದಾಗ, ಆತ್ಮಸಾಕ್ಷಿ ನೆರವಾಗುತ್ತದೆ. ಅದಕ್ಕೆ ಬೆಲೆ ಯಾವಾಗಲೂ ಇರುತ್ತದೆ. ಹೀಗಾಗಿ ಹಲ್ಲೆಗರೆ ಶಂಕರ ಅವರು ಮತ್ತಷ್ಟು ಗಟ್ಟಿಯಾಗಬೇಕು, ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿ ಸಾಹಿತ್ಯ ಸಂಸ್ಕೃತಿಯಿಂದ ಮೇಲೆದ್ದು ಬರಬೇಕು ಎಂದು ಆಶಿಸಿದರು.

ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಮಾತನಾಡಿ, ತತ್ವಪದ ಗಾಯನ ಮನಸ್ಸು ಮತ್ತು ಜೀವನಕ್ಕೆ ನೆಮ್ಮದಿ ದೊರೆಯುತ್ತದೆ. ಜೀವನದಲ್ಲಿ ಸಾರ್ಥಕತೆ ಪಡೆದುಕೊಳ್ಳಲು ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು ಅಗತ್ಯವಾಗಿದ್ದು ಅಲ್ಲಿ ದೂರದ ಊರಿನಿಂದ ಕರೆಯದ ತತ್ವಪದ ಕಲೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದರು.

ವೇದಿಕೆಯಲ್ಲಿ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕೊಮ್ಮೇರಹಳ್ಳಿಯ ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಪುರುಷ ಪುರುಷೋತ್ತಮಾನಂದನಾಥ ಸ್ವಾಮಿಜೀ ವಹಿಸಿದ್ದರು. ವೇದಿಕೆಯಲ್ಲಿ ವಿವಿಧ ಮಠದ ಸ್ವಾಮೀಜಿಯವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಚನಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ದಂಪತಿಗಳಿಗೆ  ₹10,000 ನಗದು ಹಾಗೂ ಪ್ರಶಸ್ತಿ ಫಲಕಗಳೊಂದಿಗೆ ಪ್ರಶಸ್ತಿಯನ್ನು ಮಾತೆ ಬಸವಂಜಲಿ ಮಠದ ಮಹಾಮಾತೆ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!