ದೇಶ ಹಿತ ಪತ್ರಿಕೆಯ ಸುವರ್ಣ ಸಂಭ್ರಮ; ಪತ್ರಿಕೆ, ವ್ಯಂಗ್ಯಚಿತ್ರ, ಛಾಯಾಚಿತ್ರ ಪ್ರದರ್ಶನ ಹಾಗೂ ಪತ್ರಿಕಾ ಮಾಧ್ಯಮ ಸ್ಥಿತಿಗತಿ ಚಿಂತನೆ, ಮಾತು-ಮಂಥನ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಆ.15ರಂದು ಮಂಡ್ಯನಗರದ ರೈತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಪತ್ರಿಕೆ, ವ್ಯಂಗ್ಯಚಿತ್ರ, ಛಾಯಾಚಿತ್ರ ಪ್ರದರ್ಶನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಹೆಚ್.ಎಸ್ ನೆರವೇರಿಸುವರು. ಕಾಯಕ್ರಮದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ನೆರವೇರಿಸುವರು ಎಂದು ಹೇಳಿದರು.
ಪತ್ರಿಕೋದ್ಯಮಿ ವಾಸು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾದ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್, ಮಂಡ್ಯ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ಅಧ್ಯಕ್ಷ ಕಬ್ಬನಹಳ್ಳಿ ಶಂಭು ಭಾಗವಹಿಸುವರು ಎಂದರು.
ಗೋಷ್ಠಿ- 1ರಲ್ಲಿ ಕೃಷಿ ಮತ್ತು ಆರೋಗ್ಯ ಕುರಿತು ಪಾಸಿಟಿವ್ ತಮ್ಮಯ್ಯ, ಶಿಕ್ಷಣ ಕುರಿತು ಪ್ರೊ.ಚಿಕ್ಕಮಂಗಪ್ಪ, ಸಹಕಾರ ವಿಷಯ ಕುರಿತು ನಾಗೇಂದ್ರ ಎಸ್, ಪತ್ರಿಕಾ ಮಾಧ್ಯಮ ಕುರಿತು ಚಂದ್ರಶೇಖರ್ ದ.ಕೋ.ಹಳ್ಳಿ ವಿಷಯ ಮಂಡನೆ ಮಾಡುವರು. ಸಮಾರೋಪ ಸಮಾರಂಭದಲ್ಲಿ ಡಾ.ಇಳಂಗೋವನ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮಹೇಶ್ ಚಂದ್ರಗುರು ವಿಶೇಷ ಉಪನ್ಯಾಸ ನೀಡುವರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಮಾರೋಪ ಭಾಷಣ ಮಾಡುವರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಭಾರತೀಯ ಪರ್ತಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ನಗರಸಭೆ ಮಾಜಿ ಅಧ್ಯಕ್ಷ ಎಸ್.ಎಸ್ ಮಂಜು ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ದೇಶ ಹಿತ ಪತ್ರಿಕೆ ಸಂಪಾದಕ ಕೌಡ್ಲೆ ಚನ್ನಪ್ಪ, ಮುಖಂಡರಾದ ಕಾರಸವಾಡಿ ಮಹದೇವು ಹಾಗೂ ಗೊರವಾಲೆ ಚಂದ್ರಶೇಖರ್ ಉಪಸ್ಥಿತರಿದ್ದರು