Saturday, May 18, 2024

ಪ್ರಾಯೋಗಿಕ ಆವೃತ್ತಿ

ಸರ್ವಧರ್ಮ ಸಮನ್ವಯಕಾರ ನಾಡಪ್ರಭು ಕೆಂಪೇಗೌಡ- ನಿರ್ಮಲಾನಂದಶ್ರೀ

ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟುವಾಗ ಅಕ್ಕಿಪೇಟೆ, ಬಿನ್ನಿಪೇಟೆ, ಕುಂಬಾರ ಪೇಟೆ, ಚಿಕ್ಕ ಪೇಟೆ, ಕಾಟನ್ ಪೇಟೆ, ಉಪ್ಪಾರಪೇಟೆ ಹೀಗೆ 64 ಪೇಟೆಗಳನ್ನು ವೃತ್ತಿಯ ಆಧಾರದ ಮೇಲೆ ಕಟ್ಟಿದ್ದರು, ಅದರಲ್ಲಿ ಎಲ್ಲಿಯೂ ಒಕ್ಕಲಿಗರ ಪೇಟೆ ಎಂದು ತನ್ನ ಜನಾಂಗಕ್ಕೆ ಕಟ್ಟಿಕೊಳ್ಳಲಿಲ್ಲ, ಅಂತಹ ಬೆಂಗಳೂರಿನಲ್ಲಿ ಇಂದು ಭಾರತದ ಎಲ್ಲಾ ಧರ್ಮಗಳ ಹಾಗೂ ವಿಶ್ವದ ಎಲ್ಲಾ ದೇಶಗಳ ಜನತೆ ಜೀವಿಸುತ್ತಿದ್ದಾರೆ, ಈ ದೃಷ್ಠಿಯಲ್ಲಿ ನೋಡಿದರೆ ನಾಡಪ್ರಭು ಕೆಂಪೇಗೌಡ, ಸರ್ವಧರ್ಮದ ಸಮನ್ವಯಕಾರರಾಗಿದ್ದಾರೆಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬಣ್ಣಿಸಿದರು.

ದುಬೈನಲ್ಲಿ ಯುಎಇ ಒಕ್ಕಲಿಗರ ಸಂಘದ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ಉತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ಈ ಹಿಂದೆ ಭಾರತ ದೇಶವನ್ನು ಪ್ರಸಿದ್ದ ಬರಹಗಾರರೊಬ್ಬರು ಹಾವಾಡಿಗರ ದೇಶವೆಂದು ಬಣ್ಣಿಸಿದ್ದರು, ಅದೇ ವಿದ್ವಾಂಸ ಭಾರತರ ಮೂಲೆ ಮೂಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿದಾಗ, ಭಾರತ ಅತ್ಯಂತ ಶ್ರೀಮಂತ ಪರಂಪರೆಯುಳ್ಳ ದೇಶ ಎಂಬುದನ್ನು ಮನವರಿಕೆ ಮಾಡಿಕೊಂಡರು ಎಂದರು.

ಇಂದು ವಿದೇಶಗಳಲ್ಲಿ ನಮ್ಮಂತಹ ಸನ್ಯಾಸಿಗಳಿಗೆ ಒಂದಷ್ಟು ಬೆಲೆ ಸಿಗುತ್ತಿದೆ ಎಂದರೆ, ಅದಕ್ಕೆ ಸ್ವಾಮಿ ವಿವೇಕಾನಂದ ಅವರು ಅಮೇರಿಕಾದ ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಕಾರಣವಾಗಿದೆ. ನಾವು ಅಮೇರಿಕಾ ಹಾಗೂ ಲಂಡನ್ ಪ್ರವಾಸ ಮಾಡುವಾಗ ಇದು ನಮ್ಮ ಅನುಭವಕ್ಕೆ ಬಂದಿದೆ ಎಂದು ಹೇಳಿದರು.

ಯುಎಇಯಲ್ಲಿ ಜಗತ್ತಿನ ಎಲ್ಲ ಧರ್ಮಗಳ ಜನರನ್ನು ಸಮಾನವಾಗಿ ನೋಡಲಾಗುತ್ತದೆ, ಅಂತಹ ದೇಶದಲ್ಲಿ ಇಂದು ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಆಚರಣೆ ಮಾಡುತ್ತಿರುವುದು ಹರ್ಷ ತಂದಿದೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳುವಂತೆ ಇತಿಹಾಸ ತಿಳಿಯದವರು, ಇತಿಹಾಸವನ್ನು ಸೃಷ್ಠಿಸಲು ಸಾಧ್ಯವಿಲ್ಲ, ಆದ್ದರಿಂದ ಒಕ್ಕಲಿಗರು ತಮ್ಮ ಇತಿಹಾಸವನ್ನು ತಿಳಿದುಕೊಂಡು, ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಸ್ಪೂರ್ತಿದಾಯಕವಾದ ಗುರಿಗಳನ್ನು ನೀಡಬೇಕು, ಆಗ ಮಾತ್ರ ಅವರು ದೊಡ್ಡ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ತಿಳಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಪ್ರೊ.ಕೃಷ್ಣೇಗೌಡ, ಯುಎಇ ಒಕ್ಕಲಿಗರ ಸಂಘದ ಅಧ್ಯಕ್ಷೆ ಡಾ.ರಶ್ಮಿ ಸೇರಿದಂತೆ ಕರ್ನಾಟರ ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಯುಎಇ ಒಕ್ಕಲಿಗರ ಸಂಘದ ವತಿಯಿಂದ ಕನ್ನಡ ಗೀತೆಗಳ ಗಾಯನ, ಸಮೂಹ ನೃತ್ಯಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!