ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯು ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ. ಸ್ಪರ್ಧೆಯಲ್ಲಿದ್ದ ಶಂಭೂಗೌಡ ಹಾಗೂ ನಾಗೇಶ್ ಅವರ ಬಣ ಒಂದಾಗಿ ಅವಿರೋಧ ಆಯ್ಕೆಯತ್ತ ಮುನ್ನಡೆಯುತ್ತಿದೆ ಎಂದು ಶಾಸಕ ಪಿ.ರವಿಕುಮಾರ್‌ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಹಾಗೂ ನಾನು ಸರ್ಕಾರಿ ನೌಕರರು ರಾಜಕೀಯ ಪಕ್ಷಗಳಿಂದ ಹೊರಗುಳಿಯಬೇಕು. ಒಂದಾಗಿ ರಾಜಿ ಸಂಧಾನ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದು, ನಾಗೇಶ್ ಮತ್ತು ಶಂಭೂಗೌಡ ಅವರು ಒಪ್ಪಿಕೊಂಡು ನಮ್ಮ ಮನವಿಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಸಂಘದ 66 ನಿರ್ದೇಶಕ ಸ್ಥಾನಗಳ ಪೈಕಿ 5 ಸ್ಥಾನಗಳಿಗೆ ಆರೋಗ್ಯಕರ ರೀತಿಯಲ್ಲಿ ಚುನಾವಣೆ ನಡೆಯುತ್ತಿದೆ. ಇದನ್ನು ಹೊರತು ಪಡಿಸಿ ಎಲ್ಲಾ ನಿರ್ದೇಶಕ ಸ್ಥಾನಗಳು ಅವಿರೋಧ ಆಯ್ಕೆಗೆ ಸಿದ್ದವಿದೆ ಎಂದು ಹೇಳಿದರು.
ನಿರ್ದೇಶಕರ ಚುನಾವಣೆಯ ನಂತರ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಎರಡೂವರೆ ವರ್ಷಗಳು ನಾಗೇಶ್ ಮೊದಲಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದು, ಉಳಿದ ಎರಡೂವರೆ ವರ್ಷಗಳು ಶಂಭುಗೌಡ ಅವರು ಅಧಿಕಾರ ವಹಿಸಲಿದ್ದಾರೆ. ಭವಿಷ್ಯದಲ್ಲಿ ಶಂಭೂಗೌಡರಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಹಾಲಿ ಅಧ್ಯಕ್ಷ ಶಂಭೂಗೌಡ ಅವರು ಮಾತನಾಡಿ, ಶಾಸಕರು, ಸಚಿವರು ಸೌರ್ಹಾದತೆಯ ಚುನಾವಣೆಗೆ ಒತ್ತುಕೊಟ್ಟು ಇತರರಿಗೆ ಮಾದರಿಯಾಗುವಂತೆ ತಿಳಿಸಿದ್ದು, ನಾವೆಲ್ಲರೂ ಒಮ್ಮತದ ನಿರ್ಧಾರಕ್ಕೆ ಬಂದು, 51 ಕ್ಷೇತ್ರಗಳನ್ನು ಅವಿರೋಧ ಆಯ್ಕೆ ಮಾಡಿದ್ದು, ಇಂದು ಮಂಡ್ಯ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಇತಿಹಾಸದ ಪುಟಗಳಲ್ಲಿ ದಾಖಲಿಸುವಂತಹ ಸಂಗತಿಯಾಗಿದ್ದು, ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದರು.
ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಮಾತನಾಡಿ, ಜಿಲ್ಲೆಯ ಸರ್ಕಾರಿ ನೌಕರರ ಚುನಾವಣೆಯಲ್ಲಿರುವ ಎರಡೂ ಬಣಗಳನ್ನು ಒಂದು ಗೂಡಿಸಿ, ಸರ್ಕಾರಿ ವ್ಯವಸ್ಥೆಯಲ್ಲಿರುವ ಮಾದರಿಯಾಗಿ, ಭಿನ್ನಾಭಿಪ್ರಾಯಕ್ಕೊಳಗಾಗದೇ ಸಾರ್ವಜನಿಕ ಕೆಲಸ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸೂಚನೆ ನೀಡಿದ ಮೇರೆಗೆ ಒಂದಾಗಿ ಸಾಮರಸ್ಯಯುತ ಚುನಾವಣೆ ನಡೆಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪುಟ್ಟಸ್ವಾಮಿ, ಮಂಡ್ಯ ತಾ.ಪಂ.ಮಾಜಿ ಅಧ್ಯಕ್ಷ ತ್ಯಾಗರಾಜು, ನಾಗೇಶ್ ಇದ್ದರು.




