Saturday, May 18, 2024

ಪ್ರಾಯೋಗಿಕ ಆವೃತ್ತಿ

ಪೊಲೀಸರಿಗೆ ಹೆಣ್ಣು ಹುಡುಕಿಕೊಡುವ ಕೆಲಸ ಹಚ್ಚಿದ ಮಾಜಿ ಸಾ‍ಫ್ಟ್‌ವೇರ್‌ ಇಂಜಿನಿಯರ್‌!

 “ಮದುವೆ ಮಾಡಿಕೊಳ್ಳಲು ತನಗೆ ವಧು ಸಿಗುತ್ತಿಲ್ಲ. ದಯವಿಟ್ಟು ಹುಡುಗಿ ಹುಡುಕಿಕೊಡಿ” ಎಂದು ಮಾಜಿ ಸಾ‍ಫ್ಟ್‌ವೇರ್‌ ಇಂಜಿನಿಯರ್ ಯುವಕನೋರ್ವ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಮಿಥುನ್‌ ಅವರಿಗೆ ಪತ್ರ ಬರೆದಿದ್ದಾನೆ. ಪತ್ರದ ಪ್ರತಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪ್ರವೀಣ್‌ ಓ ಎಸ್‌ ಎಂಬ ಯುವಕ ಎಸ್‌ಪಿಗೆ ಪತ್ರ ಬರೆದಿದ್ದು, “ನಾನು ಭದ್ರಾವತಿಯವನಾಗಿದ್ದು, ಗೊಲ್ಲ ಜಾತಿಗೆ ಸೇರಿದ್ದೇನೆ. ನನ್ನ ತಂದೆ ಡೆಪ್ಯೂಟಿ ಡೈರೆಕ್ಟರ್‌ (ತೋಟಗಾರಿಕೆ ಇಲಾಖೆ) ಆಗಿದ್ದರು. ಪ್ರಸ್ತುತ ನಮ್ಮ ತಂದೆ ಮೃತಪಟ್ಟಿದ್ದು, ತಾಯಿ ಇದ್ದಾರೆ. ಈ ಹಿಂದೆ ನಾನು ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿ ಮತ್ತು ಚಿಟ್ಸ್‌ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಭದ್ರಾವತಿಯಲ್ಲಿನ ನಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದೇನೆ. ಹಾಗಾಗಿ, ನಿಮ್ಮ ಅಧೀನದಲ್ಲಿ ಅಥವಾ ಪರಿಚಯದಲ್ಲಿ ನಮ್ಮ ಜಾತಿಯ ಯಾರಾದರೂ ಹುಡುಗಿ ಕಂಡು ಬಂದಲ್ಲಿ ತಿಳಿಸಿ. ಮದುವೆ ಮಾಡಿಕೊಳ್ಳಲು ಸಹಾಯ ಮಾಡಿ” ಎಂದು ಮನವಿ ಮಾಡಿಕೊಂಡಿದ್ದಾನೆ.

ಈ ಮನವಿ ಪತ್ರಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಕಚೇರಿಯಿಂದ ಕಳೆದ ನ.14ರಂದು ‘ಪ್ರತಿ ಸ್ವೀಕರಿಸಿದ ಮೊಹರನ್ನು ಕೂಡ ಹಾಕಲಾಗಿದೆ. 

ಈ ಹಿನ್ನೆಲೆಯಲ್ಲಿ ಪತ್ರ ಬಂದಿರುವ ಬಗ್ಗೆ  ಪ್ರತಿಕ್ರಿಯೆ ನೀಡಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌, “ಹುಡುಗಿ ಹುಡುಕಿಕೊಡಿ ಎಂಬ ಪತ್ರ ಬಂದದ್ದು ನಿಜ. ಪತ್ರ ಬರೆದಿರುವ ಯುವಕ ಮಾನಸಿಕ ಅಸ್ವಸ್ಥನೋ ಅಥವಾ ಸರಿಯಾಗಿದ್ದಾನೋ ಎನ್ನುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಪತ್ರ ಬರೆದ ಯುವಕನ ಹಿನ್ನೆಲೆಯ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ. 

 ಇತ್ತೀಚೆಗೆ ಇದೇ ರೀತಿಯ ಬೆಳವಣಿಗೆ ಮಂಡ್ಯದಲ್ಲಿ ನಡೆದಿದ್ದನ್ನು ಸ್ಮರಿಸಬಹುದು. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ನಡೆದ ಒಕ್ಕಲಿಗ ವಧು-ವರರ ಸಮಾವೇಶದಲ್ಲಿ 250 ವಧುಗಳನ್ನು ವರಿಸಲು 10 ಸಾವಿರ ಅವಿವಾಹಿತ ಪುರುಷರು ಭಾಗಿಯಾಗಿದ್ದರು. ಸಮಾವೇಶವು ಒಂದು ಆಘೋಷಿತ ಸ್ವಯಂವರದ ರೀತಿಯಲ್ಲಿ ನಡೆದಿದ್ದು, ಲಿಂಗಾನುಪಾತದಲ್ಲಿನ ಅಸಮಾನತೆಯನ್ನು ಮತ್ತು ರೈತ ಯುವಕರು ಎಂಬ ನೆಲೆಯಲ್ಲಿ ಹೆಣ್ಣು ಕೊಡುವುದಕ್ಕೆ ಪೋಷಕರು ನಿರಾಕರಿಸುತ್ತಿದ್ದದ್ದೇ ಕಾರಣ ಎಂಬ ವಿಚಾರವು ಬಹಿರಂಗಗೊಂಡಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!