Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿ.ಪಿ.ಎಸ್ – ಪ್ಯಾನಿಕ್ ಬಟನ್ ಅಳವಡಿಕೆ ಆದೇಶಕ್ಕೆ ವಿರೋಧ: ಪ್ರತಿಭಟನೆ

ವಾಣಿಜ್ಯ ವಾಹನಗಳಿಗೆ ಜಿಪಿಎಸ್‌ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಟ್ಯಾಕ್ಸಿ ಚಾಲಕರ ಅಸೋಸಿಯೇಷನ್ ನೇತೃತ್ವದಲ್ಲಿ ಚಾಲಕರು ಮತ್ತು ಮಾಲೀಕರು ನಾಗಮಂಗಲದಲ್ಲಿ ಪ್ರತಿಭಟನೆ ನಡೆಸಿದರು.

ನಾಗಮಂಗಲ ಪಟ್ಟಣದ ಪ್ರಾದೇಶಿಕ ಸಾರಿಗೆ ಇಲಾಖೆ ಎದುರು ಪ್ರತಿಭಟನೆ ನಡೆಸಿ ಇಲಾಖೆಯ ಅಧಿಕಾರಿಗೆ ಮನವಿ ಸಲ್ಲಿಸಿ, ಕೇಂದ್ರ ಸಾರಿಗೆ ಇಲಾಖೆ ಆದೇಶದಂತೆ ರಾಜ್ಯದ ಸಾರಿಗೆ ಇಲಾಖೆಯ ಆದೇಶ ಜಾರಿಗೆ ಮುಂದಾಗಿರುವುದು ಮಾಲೀಕರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದೆ, ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲಾ ವಾಣಿಜ್ಯ ವಾಹನಗಳು ಹಾಗೂ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ, ಮಾಲೀಕರು ಹೈರಾಣರಾಗಿದ್ದಾರೆ. ಇಂತಹ ಅವೈಜ್ಞಾನಿಕ ಸಾಧನಗಳನ್ನು ಅಳವಡಿಸಲು ಕೇಂದ್ರ ಸರ್ಕಾರ 7,890 ನಿಗದಿಗೊಳಿಸಿದೆ. ಆದರೆ ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ 13 ರಿಂದ 15,000 ವರೆಗೆ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ದುಬಾರಿ ತೆರಿಗೆ, ಸ್ಪೀಡ್ ಗವರ್ನರ್, ವಿಮೆ ಹೀಗೆ ಎಲ್ಲವೂ ದುಬಾರಿ ಆಗಿವೆ. ಇಂತಹ ಸಮಯದಲ್ಲಿ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಸರ್ವೀಸ್ ಬಸ್ಸುಗಳ ಚಾಲಕ ಮಾಲೀಕರಿಗೆ ಸಂಜೀವಿನಿ ರೀತಿಯಲ್ಲಿ ನೆರವು ನೀಡುವ ಬದಲು ಗಾಯದ ಬರೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸ್ವ-ಉದ್ಯೋಗವಾದ ಟ್ಯಾಕ್ಸಿ ಉದ್ಯಮವನ್ನು ಪ್ರೋತ್ಸಾಹಿಸುವ ಬದಲು ಹೊಸ ನಿಯಮಗಳ ಜಾರಿ ಮೂಲಕ ಸಮಸ್ಯೆ ಸೃಷ್ಟಿಸುತ್ತಿರುವುದು ಸ್ಪಷ್ಟವಾಗುತ್ತಿದೆ ಆದ್ದರಿಂದ ಆದೇಶ ರದ್ದು ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ನಿರತ ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರು ಮತ್ತು ಮಾಲೀಕರು ತಮಗಾಗುತ್ತಿರುವ ತೊಂದರೆ ಬಗ್ಗೆ ಅಳಲು ತೋಡಿಕೊಂಡು ಕೇಂದ್ರ ಸಾರಿಗೆ ಇಲಾಖೆಯು ಅವೈಜ್ಞಾನಿಕ ಸಾಧನವನ್ನು ಅಳವಡಿಸಲು ಆದೇಶ ಮಾಡಿರುವುದು ಸರಿಯಲ್ಲ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಹಣಕ್ಕಿಂತ ದುಪ್ಪಟ್ಟು ಹಣವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ, ಇದರಿಂದ ರಾಜ್ಯದ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರಿಗೆ ತೊಂದರೆಯಾಗುತ್ತಿದ್ದು ಸರ್ಕಾರಿ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಸ್ವಯಂ ವೃತ್ತಿ ಮಾಡಿಕೊಂಡಿರುವ ಟ್ಯಾಕ್ಸಿ ಉದ್ಯಮದ ಮೇಲೆ ಸರ್ಕಾರ ಪ್ರೋತ್ಸಾಹ ನೀಡಬೇಕೆ ಹೊರತು ತೊಂದರೆ ಕೊಡಬಾರದು ಎಂದು ಚಾಲಕರು ಮನವಿ ಮಾಡಿದರು.

ಕೆ ಆರ್ ಪೇಟೆ,  ನಾಗಮಂಗಲ ಮತ್ತು ಬೆಳ್ಳೂರು ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರು, ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!