Friday, September 20, 2024

ಪ್ರಾಯೋಗಿಕ ಆವೃತ್ತಿ

ಗ್ರಾ.ಪಂ. ಸದಸ್ಯರ ಕಡೆಗಣನೆ: ಶಾಸಕ ಅನ್ನದಾನಿ ವಿರುದ್ಧ ಆಕ್ರೋಶ

ಮಳವಳ್ಳಿ ಪಾಲಿಟೆಕ್ನಿಕ್ ಕಾಲೇಜು ಉದ್ಘಾಟನಾ ಸಮಾರಂಭಕ್ಕೆ ಗ್ರಾಮ ಪಂಚಾಯಿತಿ ಸದಸ್ಯರನ್ನು ಆಹ್ವಾನಿಸದೆ ಕಡೆಗಣಿಸಿ ಅವಮಾನಿಸಿದ್ದಾರೆಂದು ಆರೋಪಿಸಿ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಶಾಸಕ ಅನ್ನದಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮನು ಅರಸ್, ಪಾಲಿಟೆಕ್ನಿಕ್ ಕಾಲೇಜು ಉದ್ಘಾಟನಾ ಸಮಾರಂಭ ಸರ್ಕಾರಿ ಕಾರ್ಯಕ್ರಮವೋ,ಇಲ್ಲಾ ಒಂದು ಪಕ್ಷದ ಕಾರ್ಯಕ್ರಮವೋ ಎಂಬುದನ್ನು ಜಿಲ್ಲಾಡಳಿತ ಹಾಗೂ ಶಾಸಕ ಅನ್ನದಾನಿ ಸ್ಪಷ್ಟ ಪಡಿಸಬೇಕು ಎಂದರು.

ಮಳವಳ್ಳಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಯಾಗಿರುವುದು ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗನೂರಿನಲ್ಲಿ. ಆದರೆ ಶಾಸಕರು ಹಾಗೂ ಅಧಿಕಾರಿಗಳು ಸೇರಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಹ್ವಾನ ನೀಡದೆ ಕಾಲ ಕಸದಂತೆ ಗ್ರಾಮ ಪಂಚಾಯಿತಿ ಸದಸ್ಯರನ್ನು ಕಡೆಗಣಿಸಿ ಪಾಲಿಟೆಕ್ನಿಕ್ ಕಾಲೇಜು ಉದ್ಘಾಟನೆಯನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿದ್ದಾರೆ ಎಂದು ಕಿಡಿ ದಾರಿದರು.

ಮಳವಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಆಹ್ವಾನವಿದೆ. ಜೆಡಿಎಸ್ ಮುಖಂಡ ಪುಟ್ಟರಾಜು, ಜೆಡಿಎಸ್ ತಾಲ್ಲೂಕು ಅಧ್ಯಕ್ಷರು, ಮನ್ ಮುಲ್ ನಿರ್ದೇಶಕ ವಿಶ್ವನಾಥ್ ಇವರೆಲ್ಲರಿಗೂ ಆಹ್ವಾನವಿದೆ. ಆದರೆ ಸ್ಥಳೀಯ ಪಂಚಾಯತಿ ಸದಸ್ಯರಾದ ನಮಗೆ ಆಹ್ವಾನ ನೀಡಿಲ್ಲ. ಗ್ರಾಮ ಪಂಚಾಯತಿ ಸದಸ್ಯರಾದ ನಮಗೆ ಒಂದು ಚೂರು ಬೆಲೆ ಇಲ್ಲವೇ? ಪಂಚಾಯಿತಿಗೆ ಸರಿಯಾಗಿ ಅನುದಾನವನ್ನು ಕೊಡಿಸಲು ಶಾಸಕರಿಗೆ ಸಾಧ್ಯವಾಗಿಲ್ಲ. ಹೀಗಾದರೆ ನಾವು ಹೇಗೆ ಜನರ ಸೇವೆ ಮಾಡುವುದು ಎಂದು ವಾಗ್ದಾಳಿ ನಡೆಸಿದರು.

ಪ್ರೊಟೋಕಾಲ್ ಉಲ್ಲಂಘನೆ

ಪಾಲಿಟೆಕ್ನಿಕ್ ಕಾಲೇಜು ಶೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಗನೂರು ಗ್ರಾಮದಲ್ಲಿ ನಡೆದರೂ ಸ್ಥಳೀಯ ಪಂಚಾಯತಿ ಸದಸ್ಯರಾದ ನಮಗೆ ಯಾವುದೇ ರೀತಿಯ ಆಹ್ವಾನ ನೀಡಿರಲಿಲ್ಲ‌. ಕಾರ್ಯಕ್ರಮದ ಹಿಂದಿನ ದಿನ ರಾತ್ರಿ 10 ಗಂಟೆಗೆ ಬಂದು ಕಾರ್ಯಕ್ರಮಕ್ಕೆ ಬರುವಂತೆ ಕಾಲೇಜು ಪ್ರಾಂಶುಪಾಲರು ಆಹ್ವಾನಿಸಿದರು. ಇದು ಸರ್ಕಾರಿ ಕಾರ್ಯಕ್ರಮವೋ, ಇಲ್ಲ ಯಾವುದು ಪಕ್ಷದ ಕಾರ್ಯಕ್ರಮ ಗೊತ್ತಾಗಿಲ್ಲ ಎಂದರು.

ಶಿಷ್ಟಾಚಾರದ ಪ್ರಕಾರ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಕರೆಯಬೇಕಿತ್ತು. ಆದರೆ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿಲ್ಲ. ಪಾಲಿಟೆಕ್ನಿಕ್ ಕಾಲೇಜು ಸರ್ಕಾರಿ ಕಾರ್ಯಕ್ರಮವೇ ಹೊರತು ಪಕ್ಷದ ಕಾರ್ಯಕ್ರಮವಲ್ಲ ಎಂಬುದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕಿತ್ತು. ಪಾಲಿಟೆಕ್ನಿಕ್ ಕಾಲೇಜಿಗೆ 2016-17 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪಿ.ಎಂ. ನರೇಂದ್ರಸ್ವಾಮಿಯವರು 10 ಕೋಟಿ ರೂ‌.ಅನುದಾನ ತಂದಿದ್ದರು. ಅದೇ ಕಾರ್ಯಕ್ರಮವನ್ನು ಶಾಸಕರು ಅನ್ನದಾನಿಯವರು ಪಕ್ಷದ ಕಾರ್ಯಕ್ರಮದಂತೆ ಮಾಡಿರುವುದು ಸರಿಯಲ್ಲ ಎಂದು ದೂರಿದರು.

ಸಣ್ಣತನದ ರಾಜಕಾರಣ

30 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇನೆ‌. ಆದರೆ ಎಂದಿಗೂ ಕೂಡ ನಾನು ಸಣ್ಣತನದಿಂದ ನಡೆದುಕೊಂಡಿಲ್ಲ. ಆದರೆ ನಮ್ಮ ಪಂಚಾಯಿತಿ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಸಣ್ಣತನದಿಂದ ಶಾಸಕರೇ ನಡೆದುಕೊಂಡಿದ್ದಾರೆ‌. ಗ್ರಾಮ ಪಂಚಾಯಿತಿ ಸದಸ್ಯರನ್ನು ಕಡೆಗಣಿಸಿರುವ ವಿಚಾರ ಬಂದಾಗ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಕೆಲವು ಸದಸ್ಯರು ಹೇಳಿದರು. ಆಗ ನಾನು ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುವುದು ಬೇಡ, ನಾನೇ ಶಾಸಕರೊಂದಿಗೆ ಮಾತನಾಡುತ್ತೇನೆ ಎಂದು ಸಮಾಧಾನ ಮಾಡಿದೆ. ಆದರೆ ನನಗೆ ತಾಳ್ಮೆಯ ಕಟ್ಟೆ ಹೊಡೆದ ಕಾರಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಬೇಕಾಯಿತು ಎಂದು ಶೆಟ್ಟಹಳ್ಳಿ ಗ್ರಾ.ಪಂ.ಅಧ್ಯಕ್ಷ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

3-4 ತಿಂಗಳ ಹಿಂದೆಯೇ ಶಾಸಕರು ಬಂದಾಗ ಹತ್ತಾರು ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದೆ. ಆದರೆ ಶಾಸಕರು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿಲ್ಲ. ನಾವು ಸಾಕಷ್ಟು ಹಣ ಖರ್ಚು ಮಾಡಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದೇನೆ. ಆದರೆ ಒಂದು ದಿನವೂ ಶಾಸಕರು ನನ್ನನ್ನು ಕರೆದು ಮಾತನಾಡಿಲ್ಲ.ಪೋನ್ ಕೂಡ ಎತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕ ಸೇವೆಗೆ ಬಂದ ಮೇಲೆ ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತಿದ್ದೇನೆ. ಆಹ್ವಾನ ಪತ್ರಿಕೆಯಲ್ಲಿ ನಮ್ಮ ಪಂಚಾಯಿತಿ ಸದಸ್ಯರನ್ನು ಆಹ್ವಾನಿಸದ ಬಗ್ಗೆ ಕೇಳಿದಾಗ, ಡಿಸಿ ಅವರೇ ಹೀಗೆ ಮಾಡಿದರು ಎಂದು ತಿಳಿಸಿದರು. ನಮಗೂ ಕೂಡ ಜಿಲ್ಲಾಧಿಕಾರಿ ಅಶ್ವತಿ ಅವರ ಬಗ್ಗೆ ಸಾಕಷ್ಟು ಗೊತ್ತು. ಕರೆ ಮಾಡಿಕೊಡಿ ನಾನೇ ಮಾತನಾಡುತ್ತೇನೆ ಎಂದು ಶಾಸಕರಿಗೆ ಹೇಳಿದೆ. ಆಗ ಶಾಸಕರು ನಾನೇ ಮಾಡುತ್ತೇನೆ ಎಂದು ಹೇಳಿ ರೂಮು ಸೇರಿಕೊಂಡರು ಎಂದು ಕಿಡಿಕಾರಿದರು.

ನಾವು ಯಾವ ನಾಯಕನನ್ನು ನಂಬಿ ರಾಜಕಾರಣ ಮಾಡುತ್ತಿಲ್ಲ. ನಾನು ಚಿಕ್ಕಂದಿನಿಂದಲೂ ಜನರಿಗಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಇನ್ನಾದರೂ ಶಾಸಕರು ಗ್ರಾಮ ಪಂಚಾಯಿತಿ ಸದಸ್ಯರು,ಸೊಸೈಟಿಗಳ ಅಧ್ಯಕ್ಷರು, ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು ಸೇರಿದಂತೆ ಎಲ್ಲರನ್ನು ವಿಶ್ವಾಸದಿಂದ ನೋಡಿಕೊಳ್ಳಬೇಕು. ಒಬ್ಬರಿಂದಲೇ ಏನು ಮಾಡಲು ಸಾಧ್ಯವಿಲ್ಲ, ಒಬ್ಬ ಎಂಎಲ್ಎ ಆಗಲು ಎಲ್ಲರೂ ಸಹಾಯವು ಬೇಕಾಗುತ್ತದೆ ಶಾಸಕನಾಗಿ ಗೆದ್ದ ನಂತರ ಹತ್ತಿದ ಏಣಿಯನ್ನು ಒದೆಯುವ ಕೆಲಸ ಮಾಡಬಾರದು ನಾವು ಶೋಕಿ ಮಾಡಲು ರಾಜಕಾರಣಕ್ಕೆ ಬಂದಿಲ್ಲ ಜನರ ಋಣ ತೀರಿಸಲು ಎಂಬುದನ್ನು ಅರಿಯಬೇಕು.ಗ್ರಾ.ಪಂ. ಸದಸ್ಯರು ಎಂದರೆ ಶಾಸಕರು ಏನೆಂದು ತಿಳಿದಿದ್ದಾರೆ? ಎಂದು ಪ್ರಶ್ನಿಸಿದರು.

ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಒಗ್ಗೂಡಿ ಕೆಲಸ ಮಾಡಿದ್ದರಿಂದ ಅವರು ಶಾಸಕನಾಗಿರೋದು ಎಂಬುದು ಗೊತ್ತಿರಲಿ. ನನ್ನ ಹೆಸರು ಮೇಲೆ ಬಂದರೆ ನಾಯಕ, ಕೆಳಗಿದ್ದರೆ ಅಲ್ಲ ಎಂಬುದನ್ನು ಬಿಡಬೇಕು. ನಾನು ಸಾಮಾಜಿಕ ಕಳಕಳಿ ಇಟ್ಟುಕೊಂಡು ಸೇವೆ ಮಾಡಿದ್ದೇನೆ. ಫ್ಲೆಕ್ಸ್ ಹಾಕಿಕೊಂಡು ರಾಜಕಾರಣ ಮಾಡಿಲ್ಲ ಎಂದು ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಸದಸ್ಯರಾದ ನಂಜುಂಡಸ್ವಾಮಿ, ಪ್ರಭುಸ್ವಾಮಿ, ಚನ್ನಬಸವಯ್ಯ, ವಸಂತ್ ಕುಮಾರ್, ಚಿಕ್ಕಣ್ಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!