Thursday, September 19, 2024

ಪ್ರಾಯೋಗಿಕ ಆವೃತ್ತಿ

ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಕಾಂಗ್ರೆಸ್ ಸದಸ್ಯರ ಪ್ರತಿಭಟನೆ

ಸರ್ಕಾರದಿಂದ ಬಿಡುಗಡೆಯಾಗಿರುವ ನಗರೋತ್ಥಾನ ಅನುದಾನ ಹಂಚಿಕೆ ವಿಚಾರದಲ್ಲಿ ಶಾಸಕರ ಹಸ್ತಕ್ಷೇಪದಿಂದಾಗಿ ಪುರಸಭೆಯ ಕಾಂಗ್ರೆಸ್ ಸದಸ್ಯರ ವಾರ್ಡ್ ಗಳಿಗೆ ಬಿಡಿಗಾಸು ಅನುದಾನ ನೀಡದೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಪುರಸಭೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ನಾಗಮಂಗಲ ಪುರಸಭೆಯಲ್ಲಿ 12ಮಂದಿ ಜೆಡಿಎಸ್ ಮತ್ತು 11ಮಂದಿ ಕಾಂಗ್ರೆಸ್ ಸದಸ್ಯರಿದ್ದು, ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಅಭಿವೃದ್ಧಿಗಾಗಿ ನಗರೋತ್ಥಾನ ಹಂತ 4ರಲ್ಲಿ ಸರ್ಕಾರ ರು.10ಕೋಟಿ ಅನುದಾನ ಬಿಡುಗಡೆ ಮಾಡಿದೆ.ಇಲ್ಲಿನ ಆಡಳಿತಾರೂಢ ಜೆಡಿಎಸ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾಂಗ್ರೆಸ್ ಪಕ್ಷದ ಸದಸ್ಯರು ಪ್ರತಿನಿಧಿಸುವ ವಾರ್ಡ್ಗಳಿಗೆ ಬಿಡಿಗಾಸು ಹಣ ನೀಡದೆ 12 ಮಂದಿ ಸದಸ್ಯರು ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಶಾಸಕ ಸುರೇಶ್‌ಗೌಡ, ಆಡಳಿತಾರೂಢ ಜೆಡಿಎಸ್ ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಷವ್ಯಕ್ತಪಡಿಸಿದರು.

ನಾವುಗಳು ಪುರಸಭಾ ಸದಸ್ಯರಾಗಿ ಒಂದುವರ್ಷ ಎಂಟು ತಿಂಗಳು ಕಳೆದಿವೆ. ಅಂದಿನಿಂದ ಈವರೆಗೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಎಲ್ಲಾ ಅನುದಾನದಲ್ಲಿಯೂ ಸಹ ಇದೇ ರೀತಿ ತಾರತಮ್ಯ ಮಾಡುತ್ತಿದ್ದು, ಇದಕ್ಕೆ ಶಾಸಕ ಸುರೇಶ್‌ಗೌಡ ಅವರೇ ನೇರ ಕಾರಣ ಎಂದು ದೂರಿದರು.

ವಾರ್ಡ್ ಗಳ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಯಾವುದೇ ತಾರತಮ್ಯ ಮಾಡದೆ ಸಮಾನತೆ ಕಾಪಾಡಬೇಕೆಂದು ನಾವುಗಳು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಸಹ ನಮ್ಮ ಮನವಿಗೆ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ.

ತಮಗಿಷ್ಟ ಬಂದಂತೆ ಸಾಮಾನ್ಯ ಸಭೆ, ವಿಶೇಷ ಸಭೆ ಹಾಗೂ ತುರ್ತುಸಭೆಗಳನ್ನು ನಡೆಸುವ ಜೆಡಿಎಸ್ ಸದಸ್ಯರು ನಮ್ಮ ಅಹವಾಲು ಮತ್ತು ನಾವು ಮಂಡಿಸುವ ವಿಚಾರಗಳನ್ನು ಪರಿಗಣಿಸದೆ ಸಭೆಯ ನಡಾವಳಿ ಪುಸ್ತಕದಲ್ಲಿ ದಾಖಲಿಸದೆ ಏಕಪಕ್ಷೀಯವಾಗಿ ನಿರ್ಣಯಕೈಗೊಂಡು ಅನುಮೋದಿಸಿಕೊಳ್ಳುತ್ತಾರೆ. ಇದರಿಂದ ನಮ್ಮ ವಾರ್ಡ್ಗಳ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ನಗರೋತ್ಥಾನ ಯೋಜನೆಯ 10ಕೋಟಿ ಅನುದಾನವನ್ನು ಪುರಸಭೆಯ ಎಲ್ಲಾ 23ವಾರ್ಡ್ ಗಳಿಗೂ ಯಾವುದೇ ತಾರತಮ್ಯ ಮಾಡದೆ ಸಮಾನವಾಗಿ ಹಂಚಿಕೆ ಮಾಡಬೇಕು.

ಇಲ್ಲದಿದ್ದರೆ ಇನ್ನು ಮುಂದೆ ಪುರಸಭೆಯಲ್ಲಿ ನಡೆಯುವ ಸಭೆಗಳನ್ನು ಬಹಿಷ್ಕರಿಸುವ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ, ಪುರಸಭೆಯ ಮುಖ್ಯಾಧಿಕಾರಿ ಅಮೃತ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸದಸ್ಯರಾದ ತಿಮ್ಮಪ್ಪ, ರಮೇಶ್, ಸೈಯದ್‌ಸುಮಯ್ಯ, ರಿಜ್ವಾನ್‌ಪಾಷ, ಅಲಿಅನ್ಸರ್‌ಪಾಷ, ಮುಬೀನ್‌ತಾಜ್, ನಾಜಿಯಾ ಸುಲ್ತಾನ್, ವಸಂತಲಕ್ಷ್ಮಿ, ರೂಪ, ಜ್ಯೋತಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ರವಿಕಾಂತೇಗೌಡ, ವಸಂತಕುಮಾರ್, ಸುಗ್ಗಿಶಂಕರ್, ಸಾದಿಕ್‌ಪಾಷ, ಉಪ್ಪಾರಹಳ್ಳಿಅಶೋಕ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!